×
Ad

ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು: ಆಟಕ್ಕುಂಟು ಊಟಕ್ಕಿಲ್ಲ

Update: 2016-06-19 23:13 IST


 ನಾವು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಬಿಜೆಪಿ ಒಂದೆಡೆ ಕೂಗೆಬ್ಬಿಸುತ್ತಿದ್ದರೆ, ನಾವು ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಕಾಂಗ್ರೆಸ್ ಕೂಡ ಸಣ್ಣ ಕಂಠದಲ್ಲಿ ಚೀರುತ್ತಿದೆ. ಇದೇ ಸಂದರ್ಭದಲ್ಲಿ ಇವೆರಡೂ ರಾಷ್ಟ್ರೀಯ ಪಕ್ಷಗಳನ್ನು ಮುಕ್ತ ಮಾಡುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳು ಅಬ್ಬರಿಸುತ್ತಿವೆ. ಆದರೆ ಅಂತಿಮವಾಗಿ ಯಾವ ಪಕ್ಷಗಳು ಮುಕ್ತವಾಗಬೇಕು ಎನ್ನುವುದನ್ನು ತೀರ್ಮಾನಿಸುವವನು ಮತದಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

 ಒಂದು ಕಾಲದಲ್ಲಿ ‘ತನಗೆ ಪರ್ಯಾಯವೇ ಇಲ್ಲ’ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ತನ್ನ ಅಸ್ತಿತ್ವಕ್ಕಾಗಿ ಏದುಸಿರು ಬಿಡುತ್ತಿದ್ದರೆ ಅದಕ್ಕೆ ಕಾರಣ ಬಿಜೆಪಿಯಂತೂ ಖಂಡಿತಾ ಅಲ್ಲ. ಕಾಂಗ್ರೆಸ್‌ನಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡ ದೊಡ್ಡ ಸಂಖ್ಯೆಯ ಅಲ್ಪಸಂಖ್ಯಾತರು ಆ ಪಕ್ಷದಿಂದ ದೂರ ಸರಿದಿರುವುದು ಮತ್ತು ಅವರು ಬೇರೆ ಬೇರೆ ಪಕ್ಷಗಳಲ್ಲಿ ತಮ್ಮ ಭವಿಷ್ಯವನ್ನು ಹುಡುಕುತ್ತಿರುವುದೇ ಮುಖ್ಯ ಕಾರಣ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ರಾಜಕಾರಣದ ಮೂಲಕ ದುರ್ಬಲ ಜಾತಿಗಳ ಬಡವರನ್ನು, ಅಲ್ಪಸಂಖ್ಯಾತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇಂದಿರಾಗಾಂಧಿಯ ಕಾಲದಲ್ಲಿ ಈ ವರ್ಗವನ್ನು ಗುರಿಯಾಗಿಸಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳಾಗಿರುವುದು ಸುಳ್ಳಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆ ಸಂದರ್ಭದಲ್ಲಿ, ದುರ್ಬಲ ವರ್ಗದಿಂದ ಮುತ್ಸದ್ದಿ ನಾಯಕರು ಮೇಲೆದ್ದು ಬಂದರು. ಕಾಂಗ್ರೆಸ್ ಪಕ್ಷ ದುರ್ಬಲ ವರ್ಗದ ಜನರಿಗೆ, ಅಲ್ಪಸಂಖ್ಯಾತ ವರ್ಗದವರಿಗೆ ನಾಯಕರಾಗುವ ಅವಕಾಶಗಳನ್ನು ನೀಡಿತು. 

ಆ ಕಾರಣದಿಂದಲೇ, ಆ ಕಾಲದಲ್ಲಿ ತಳಸ್ತರದ ಜನರಲ್ಲಿ ಕಾಂಗ್ರೆಸ್ ಪಕ್ಷ ತಮ್ಮದೂ ಹೌದು ಎನ್ನುವಂತಹ ಭಾವನೆಯಿತ್ತು. ಆದರೆ ರಾಜೀವ್ ಗಾಂಧಿಯ ಅನಂತರ, ಕಾಂಗ್ರೆಸ್‌ನ ನಾಯಕರು ಇರುವ ಪಿತ್ರಾರ್ಜಿತ ಆಸ್ತಿಯನ್ನು ಉಂಡು ತೇಗಿದರೇ ಹೊರತು, ಪಕ್ಷವನ್ನು ಇನ್ನಷ್ಟು ತಳಸ್ತರದಲ್ಲಿ ಗಟ್ಟಿಗೊಳಿಸುವ ಪ್ರಯತ್ನವನ್ನೇ ಕೈ ಬಿಟ್ಟರು. ಇದೇ ಸಂದರ್ಭದಲ್ಲಿ ತುಸು ಆರ್ಥಿಕವಾಗಿ, ರಾಜಕೀಯವಾಗಿ ಕಣ್ಣು ತೆರೆಯುತ್ತಿದ್ದ ದುರ್ಬಲ ವರ್ಗದ ಸಮುದಾಯವನ್ನು ಆರೆಸ್ಸೆಸ್ ತನ್ನ ಬೋನಿಗೆ ಹಾಕುವುದಕ್ಕೆ ತೊಡಗಿತು. ಅವರಿಗೆ ಹಿಂದುತ್ವದ ಮಾದಕ ದ್ರವ್ಯಗಳನ್ನು ಒದಗಿಸಿ, ಬಿಜೆಪಿಯ ಬುಟ್ಟಿಗೆ ತಳ್ಳ ತೊಡಗಿತು. ಹಾಗೆಯೇ, ಕೆಲವು ಮೃದು ಹಿಂದುತ್ವವಾದಿಗಳ ಹಿಡಿತಕ್ಕೆ ಕಾಂಗ್ರೆಸ್ ಸಿಕ್ಕಿಕೊಂಡಿತು. ಪರಿಣಾಮವಾಗಿ ಅಲ್ಪಸಂಖ್ಯಾತರು ಸ್ವಲ್ಪಸ್ವಲ್ಪವೇ ಕಾಂಗ್ರೆಸ್‌ನಿಂದ ದೂರವಾಗತೊಡಗಿದರು. ಹೀಗೆ, ಕಾಂಗ್ರೆಸ್‌ಗೆ ಮತಹಾಕುತ್ತಿದ್ದ ಶೋಷಿತ ವರ್ಗದ ಒಂದು ದೊಡ್ಡ ಪಾಲು ಆರೆಸ್ಸೆಸ್‌ನ ಹಿಂದುತ್ವದ ಭ್ರಮೆಗೆ ಬಲಿಯಾಗಿ ಕಾಂಗ್ರೆಸ್‌ನಿಂದ ದೂರವಾದರೆ, ಇತ್ತ ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ನೊಳಗಿರುವ ಮೃದು ಹಿಂದುತ್ವವಾದಿಗಳೇ ದೂರವಾಗಿಸಲು ಯತ್ನಿಸತೊಡಗಿದರು. ಮುಖ್ಯವಾಗಿ ಮುಸ್ಲಿಮರು ಕಾಂಗ್ರೆಸ್‌ನಲ್ಲಿ ನಾಯಕರಾಗಿ ಬೆಳೆಯದಂತೆ ನೋಡಿಕೊಳ್ಳುವ ಪ್ರಯತ್ನ ಗಂಭೀರವಾಗಿ ನಡೆಯಿತು.

 ಇದಕ್ಕೆ ಪೂರಕವಾಗಿ ಈ ಸಂದರ್ಭದಲ್ಲೇ ನರಸಿಂಹರಾವ್ ನೇತೃತ್ವದಲ್ಲಿ ಬಾಬರಿ ಮಸೀದಿ ಧ್ವಂಸವಾಯಿತು. ಅಲ್ಲಿಂದ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರು ಮಾನಸಿಕವಾಗಿ ಇನ್ನಷ್ಟು ದೂರವಾಗತೊಡಗಿದರು. ರಾಜಕೀಯ ಅನಿವಾರ್ಯತೆಯ ಕಾರಣದಿಂದ ಕಾಂಗ್ರೆಸ್‌ಗೆ ಮತ ಹಾಕುತ್ತಾ ಬರತೊಡಗಿದರೇ ಹೊರತು, ಕಾಂಗ್ರೆಸ್ ನಮ್ಮ ಪಕ್ಷ ಎನ್ನುವ ಮೊದಲಿನ ಪ್ರೀತಿಯಿಂದಲ್ಲ. ತಾನು ಸೊರಗುತ್ತಿರುವುದಕ್ಕೆ ಬಿಜೆಪಿ ಕಾರಣ, ಪ್ರಾದೇಶಿಕ ಪಕ್ಷಗಳು ಕಾರಣ ಎಂದು ಕಾಂಗ್ರೆಸ್ ತಲೆಕೆಡಿಸಿಕೊಳ್ಳುವುದಕ್ಕಿಂತ, ಒಂದು ಕಾಲದಲ್ಲಿ ತನ್ನವರಾಗಿದ್ದ ಶೋಷಿತ ವರ್ಗದ ಮತಗಳು ಯಾಕೆ ತನ್ನಿಂದ ದೂರವಾಗುತ್ತಿದೆ ಎನ್ನುವುದನ್ನು ಯೋಚಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ಹೊರತು ಪಡಿಸಿದರೆ ಇನ್ನೊಂದು ಪಕ್ಷವಿಲ್ಲ ಎಂದು ನಂಬಿದ್ದ ಅಲ್ಪಸಂಖ್ಯಾತರ ಬಹುದೊಡ್ಡ ಮತಗಳ ಪಾಲು ಕಾಂಗ್ರೆಸ್‌ನಿಂದ ಕಳಚಿಕೊಳ್ಳುತ್ತಿರುವುದು ಯಾಕೆ ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಬೇಕು.

 ಈ ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಕಾಂಗ್ರೆಸ್‌ನೊಳಗೆ ಈಗ ಅವರ ಸ್ಥಾನಮಾನ ಹೇಗಿದೆ ಎನ್ನುವುದನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಒಮ್ಮೆ ಪುನರಾವಲೋಕನ ಮಾಡಿದರೆ ಸಾಕು. ಕಾರಣ ಸ್ಪಷ್ಟವಾಗಿ ಬಿಡುತ್ತದೆ. ಇಂದು ದೇಶದಲ್ಲಿ ಉಳಿದ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಪ್ರಾತಿನಿಧ್ಯಕ್ಕೆ ಹೋಲಿಸಿದರೆ, ಮುಸ್ಲಿಮರಿಗೆ ಸಿಗುವ ಪ್ರಾತಿನಿಧ್ಯ ಶೂನ್ಯ. ಕಾಶ್ಮೀರದ ಒಬ್ಬ ‘ಗುಲಾಮ’ ನಬಿ ಆಝಾದ್‌ರನ್ನು ಇಟ್ಟುಕೊಂಡು ದೇಶದ ಮುಸ್ಲಿಮರನ್ನು ಮರುಳು ಮಾಡುವುದಕ್ಕೆ ಕಾಂಗ್ರೆಸ್‌ಗೆ ಮುಂದಕ್ಕೆ ತುಂಬಾ ಕಷ್ಟವಾಗಬಹುದು. ರಾಜ್ಯದಲ್ಲೂ ಅಷ್ಟೇ. ಕಾಂಗ್ರೆಸ್ ನಾಯಕರೇ ‘ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಅವರು ಗೆಲ್ಲುವುದಿಲ್ಲ’ ಎಂಬ ಹೇಳಿಕೆಯನ್ನು ಬಹಿರಂಗವಾಗಿ ನೀಡುತ್ತಾರೆ. ಅಂದರೆ, ಕಾಂಗ್ರೆಸ್‌ನ ಹೆಸರಲ್ಲಿ ಯಾವನೇ ನಿಂತರೂ ಮುಸ್ಲಿಮರು ಮತ ಹಾಕಿ ಗೆಲ್ಲಿಸುತ್ತಾರೆ. ಆದರೆ ಕಾಂಗ್ರೆಸ್‌ನಿಂದ ಮುಸ್ಲಿಮನೊಬ್ಬ ಚುನಾವಣೆಗೆ ನಿಂತಾಗ, ಅವನನ್ನು ಕಾಂಗ್ರೆಸ್ಸಿಗ ಎಂದು ಸ್ವೀಕರಿಸಿ ಮತ ಚಲಾಯಿಸಲು ಕಾಂಗ್ರೆಸ್ಸಿಗರಿಗೇ ಕಷ್ಟವಾಗುತ್ತದೆ. ಎಲ್ಲೋ, ಮುಸ್ಲಿಮ್ ಪ್ರಾಬಲ್ಯವಿರುವ ಜಾಗದಲ್ಲಿ ಅನಿವಾರ್ಯ ಕಾರಣಕ್ಕಾಗಿಯಷ್ಟೇ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ದೊರಕುತ್ತದೆ.

ಸರಿ. ಇಂತಹ ಸಂದರ್ಭದಲ್ಲಿ ನಿಜಕ್ಕೂ ಮುಸ್ಲಿಮರ ಸಾಮಾಜಿಕ ಸ್ಥಿತಿಗತಿ, ಅವರ ಜನಸಂಖ್ಯೆ ಇವುಗಳಿಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ಪ್ರಾಮಾಣಿಕ ಉದ್ದೇಶ ಕಾಂಗ್ರೆಸ್‌ಗೆ ಇದ್ದರೆ ಅದಕ್ಕೆ ಖಂಡಿತವಾಗಿಯೂ ಅವಕಾಶವಿದೆ. ಮುಸ್ಲಿಮರಲ್ಲಿರುವ ಪ್ರಬಲ ನಾಯಕನನ್ನು ಗುರುತಿಸಿ ಅವರನ್ನು ರಾಜ್ಯಸಭೆ ಮತ್ತು ವಿಧಾನಪರಿಷತ್‌ಗೆ ಕಳುಹಿಸುವ ಅವಕಾಶ ಇದ್ದೇ ಇದೆ. ಆದರೆ ಈ ಹಿಂದೆ, ಮೇಲ್ಮನೆ ಚುನಾವಣೆಯಲ್ಲಿ ತಮ್ಮದೇ ಅಧಿಕೃತ ಮುಸ್ಲಿಮ್ ಅಭ್ಯರ್ಥಿಯನ್ನು ಸೋಲಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದೆ. ಈ ಬಾರಿಯೂ ವಿಧಾನಪರಿಷತ್ ಮತ್ತು ರಾಜ್ಯಸಭೆಗೆ ಮುಸ್ಲಿಮರಿಗೆ ಕಾಂಗ್ರೆಸ್ ಯಾವ ಅವಕಾಶವನ್ನೂ ನೀಡಲಿಲ್ಲ. ಅಂದರೆ ಮುಸ್ಲಿಮ್ ಮತಗಳು ಬಿಜೆಪಿಯ ಅಥವಾ ಸಂಘಪರಿವಾರ ಭಯದಿಂದ ಅನಿವಾರ್ಯವಾಗಿ ತಮ್ಮ ಮಡಿಲಿಗೆ ಬಂದು ಬೀಳುತ್ತವೆ ಎಂದು ಕಾಂಗ್ರೆಸ್ ಇಂದಿಗೂ ನಂಬಿಕೊಂಡಿವೆ. ಈ ನಂಬಿಕೆಯನ್ನು ಇನ್ನೂ ಬಿಡದಿದ್ದರೆ, ದೇಶ ನಿಜಕ್ಕೂ ಕಾಂಗ್ರೆಸ್ ಮುಕ್ತವಾಗಿ ಬಿಡುತ್ತದೆ, ಸಂಶಯವಿಲ್ಲ. 

90ರ ದಶಕದಿಂದ ಕೇಂದ್ರದಲ್ಲೂ, ರಾಜ್ಯದಲ್ಲೂ ಮುಸ್ಲಿಮ್ ಸಮುದಾಯದಿಂದ ಪ್ರಬಲ ನಾಯಕನೊಬ್ಬ ಹುಟ್ಟಿಕೊಳ್ಳದ ಹಾಗೆ ಕಾಂಗ್ರೆಸ್‌ನೊಳಗಿರುವ ಹಿರಿಯರು ನೋಡಿಕೊಂಡು ಬಂದಿದ್ದಾರೆ. ಮತ್ತು, ಅದಕ್ಕೆ ಸಂಘಪರಿವಾರವನ್ನು ಹೊಣೆ ಮಾಡಿ, ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಲೆಕ್ಕಗಳನ್ನು ಮತ್ತೊಮ್ಮೆ ತಾಳೆ ನೋಡಬೇಕಾಗಿದೆ. ಇಲ್ಲಿ ಆಸ್ಕರ್, ಮಾರ್ಗರೆಟ್ ಆಳ್ವ ಮೊದಲಾದವರು ನೇರ ಚುನಾವಣೆಯಲ್ಲಿ ಸೋತರೆ ಅವರಿಗೆ ರಾಜ್ಯಸಭೆಯ ಮೂಲಕ, ವಿಧಾನಪರಿಷತ್ ಮೂಲಕ ಅವಕಾಶವನ್ನು ನೀಡಲಾಗುತ್ತದೆ. ಅಥವಾ ಆ ನಾಯಕರನ್ನು ಗುರುತಿಸಿ ರಾಜ್ಯಪಾಲರನ್ನಾಗಿಸುತ್ತದೆ. ಇದೇ ಸಂದರ್ಭದಲ್ಲಿ ಒಬ್ಬ ಮುಸ್ಲಿಮ್ ನಾಯಕ ಸೋತರೆ, ಆ ಸೋಲನ್ನೇ ಮುಂದಿಟ್ಟು ಅವನನ್ನು ಮೂಲೆಗುಂಪು ಮಾಡಲಾಗುತ್ತದೆ. ಹೀಗಿರುವಾಗ ಮುಸ್ಲಿಮರು ಯಾವ ಲಾಭಕ್ಕಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕು. ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಬಿಜೆಪಿ ಆಯ್ಕೆಯಾಗುತ್ತದೆ ಎಂಬ ಗುಮ್ಮನನ್ನು ತೋರಿಸಿ ಇನ್ನೆಷ್ಟು ಕಾಲ ಅಲ್ಪಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂದು ಕಾಂಗ್ರೆಸ್ ಭಾವಿಸಿದೆ?

 ಈ ನಿಟ್ಟಿನಲ್ಲಿ ರಾಜ್ಯಸರಕಾರ ವಿಧಾನಪರಿಷತ್, ರಾಜ್ಯಸಭೆಗೆ ಜನಪ್ರತಿನಿಧಿಗಳನ್ನು ಕಲಿಸುವಾಗ ಆದ್ಯತೆಯ ಮೇಲೆ ಮುಸ್ಲಿಮ್ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆಯನ್ನು ನೀಡಬೇಕಾಗಿದೆ. ನಿಗಮ ಮಂಡಳಿಗಳಲ್ಲಿ ಆಯ್ಕೆ ನಡೆಯುವ ಸಂದರ್ಭದಲ್ಲೂ ಮುಸ್ಲಿಮರಲ್ಲಿ ಅರ್ಹ ನಾಯಕರಿಗೆ ದೊಡ್ಡ ಅವಕಾಶವನ್ನು ನೀಡಬೇಕು. ಹಾಗೆಯೇ, ದುರ್ಬಲ ಜಾತಿಯ ಮುಖಂಡರು ಕಾಂಗ್ರೆಸ್‌ನೊಳಗೆ ಇಳಿಕೆಯಾಗುತ್ತಿದ್ದಾರೆ. ಬಿಜೆಪಿಯನ್ನು ನಂಬಿ ಹೋದ ಬಿಲ್ಲವ, ಮೊಗವೀರ ನಾಯಕರು ಅಲ್ಲಿ ಸಂಪೂರ್ಣ ಮೋಸ ಹೋಗಿದ್ದಾರೆ. ಅಲ್ಪಸಂಖ್ಯಾತರ ಜೊತೆಗೆ ಇಂತಹ ದುರ್ಬಲ ಜಾತಿಗಳ ಮುಖಂಡರನ್ನು ಮತ್ತೆ ತಮ್ಮ ಮನೆಗೆ ಕರೆತರುವ ಕುರಿತಂತೆ ಪ್ರಾಮಾಣಿಕ ಯೋಚನೆ ಮಾಡದೇ ಇದ್ದರೆ ಕಾಂಗ್ರೆಸ್ ಈ ದೇಶದಲ್ಲಿ ಬೇಗನೇ ಮುಕ್ತವಾಗಿ ಬಿಡುತ್ತದೆ. ಆಟಕ್ಕುಂಟು, ಊಟಕ್ಕಿಲ್ಲ ಎಂಬ ಅಲ್ಪಸಂಖ್ಯಾತರ ಕುರಿತ ಧೋರಣೆಯನ್ನು ಕಾಂಗ್ರೆಸ್ ಕೈ ಬಿಡದಿದ್ದರೆ ಅದಕ್ಕೆ ಕೇಂದ್ರದಲ್ಲೂ, ರಾಜ್ಯದಲ್ಲೂ ಉಳಿಗಾಲವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News