×
Ad

ಬ್ಲಾಗರ್‌ನ ಶಂಕಿತ ಹಂತಕ ಪೊಲೀಸ್ ಎನ್‌ಕೌಂಟರ್‌ಗೆ ಬಲಿ

Update: 2016-06-19 23:56 IST

ಢಾಕಾ,ಜೂ.19: ಜಾತ್ಯತೀತವಾದಿ ಬ್ಲಾಗರ್‌ಗಳ ಸರಣಿ ಕಗ್ಗೊಲೆಗಳನ್ನು ನಡೆಸಿದ್ದ ಆರೋಪ ಎದುರಿಸುತ್ತಿದ್ದ ಭಯೋತ್ಪಾದಕನೊಬ್ಬನನ್ನು ಬಾಂಗ್ಲಾ ಪೊಲೀಸರು ರವಿವಾರ ಹತ್ಯೆ ಮಾಡಿದ್ದಾರೆ. ಈತನ ತಲೆಗೆ ಬಾಂಗ್ಲಾ ಪೊಲೀಸರು 50 ಸಾವಿರ ಟಾಕಾ ಬಹುಮಾನವನ್ನು ಘೋಷಿಸಿದ್ದರು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಸರಣಿ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಭದ್ರತಾ ಅಧಿಕಾರಿಗಳು ದೇಶಾದ್ಯಂತ ಉಗ್ರರ ದಮನಕ್ಕೆ ಕಾರ್ಯಾಚರಣೆಯನ್ನು ಆರಂಭಿಸಿದ ಬೆನ್ನಲ್ಲೇ ಈ ಎನ್‌ಕೌಂಟರ್ ನಡೆದಿದೆ.

ಹತ್ಯೆಗೀಡಾದ ಭಯೋತ್ಪಾದಕನು ‘ ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಎಂಬ ಉಗ್ರಗಾಮಿ ಸಂಘಟನೆಯ ಸದಸ್ಯನಾಗಿದ್ದಾನೆ. ಪೊಲೀಸರ ಅಪರಾಧ ದಾಖಲೆಗಳಲ್ಲಿ ಆತನನ್ನು ಶರೀಪುಲ್ಲಾ ಅಥವಾ ಶರೀಫ್ ಎಂದು ಹೆಸರಿಸಿರುವುದಾಗಿ ತಿಳಿದುಬಂದಿದೆ. ಆತ ಸಕೀಬ್ ಯಾನೆ ಸಲೇಹ್ ಯಾನೆ ಆರೀಫ್ ಯಾನೆ ಹದಿ-1 ಎಂಬಿತ್ಯಾದಿ ಹಲವಾರು ನಾಮಧೇಯಗಳನ್ನು ಕೂಡಾ ಹೊಂದಿದ್ದನೆಂದು ಬಾಂಗ್ಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಢಾಕಾದ ಖಿಲಾಗಾಂವ್ ಪ್ರದೇಶದಲ್ಲಿ ಪತ್ತೆದಾರಿ ಪೊಲೀಸರು ನಡೆಸಿದ ಶೂಟೌಟ್‌ನಲ್ಲಿ ಆತನನ್ನು ಹತ್ಯೆಗೈಯಲಾಗಿದೆ. ಶನಿವಾರದಂದು ನೈಋತ್ಯ ಬಾಂಗ್ಲಾದ ಮಾದರಿಪುರ್‌ನಲ್ಲಿ ಕಾಲೇಜೊಂದರ ಪ್ರಾಧ್ಯಾಪಕಿಯ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಗುಲಾಮ್ ಫೈಝುಲ್ಲಾ ಫಾಹಿಮ್ ಎಂಬಾತನನ್ನು ಪೊಲೀಸರು ಹತ್ಯೆಗೈದಿದ್ದರು. ವಿಚಾರಣೆಗಾಗಿ ಫೈಝುಲ್ಲಾನನ್ನು ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯದ ಅನುಮತಿ ದೊರೆತ ಕೆಲವೇ ತಾಸುಗಳ ಬಳಿಕ ಆತ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದನು.

ಅಮೆರಿಕದ ಪೌರತ್ವ ಹೊಂದಿದ್ದ ಬಾಂಗ್ಲಾ ಮೂಲದ ವಿಜ್ಞಾನ ಸಾಹಿತಿ ಹಾಗೂ ಬ್ಲಾಗರ್ ಅವಿಜಿತ್ ರಾಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶರೀಫ್ ಪೊಲೀಸರಿಗೆ ಬೇಕಾಗಿದ್ದ. ಅವಿಜಿತ್ ರಾಯ್ ಕಳೆದ ವರ್ಷದ ಫೆಬ್ರವರಿಯಲ್ಲಿ ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕಮೇಳದಲ್ಲಿ ಪಾಲ್ಗೊಂಡು, ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಲಾಗಿತ್ತು. ತರುವಾಯ ನಡೆದ ಇನ್ನೋರ್ವ ಜಾತ್ಯತೀತವಾದಿ ಬ್ಲಾಗರ್ ನಿಲಾದ್ರಿಯವರ ಹತ್ಯೆಯಲ್ಲೂ ಶರೀಫ್ ಶಾಮೀಲಾಗಿದ್ದನೆನ್ನಲಾಗಿದೆ. ಬಾಂಗ್ಲಾದಲ್ಲಿ ಉಗ್ರರ ದಮನಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭದ್ರತಾಪಡೆಗಳು, ಕಳೆದ ವಾರದಿಂದೀಚೆಗೆ ಸುಮಾರು 11 ಸಾವಿರ ಶಂಕಿತ ಕ್ರಿಮಿನಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News