ಭಾರೀ ಮಳೆಗೆ ಇಂಡೊನೇಶ್ಯ ತತ್ತರ
ಜಕಾರ್ತ,ಜೂ.19: ಇಂಡೊನೇಶ್ಯದಲ್ಲಿ ಶನಿವಾರ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಭೂಕುಸಿತಗಳಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಹಾಗೂ 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮಧ್ಯ ಜಾವಾದಲ್ಲಿ ಶನಿವಾರದಿಂದೀಚೆಗೆ ಸುರಿದ ಭಾರೀ ಮಳೆಯಿಂದ ಸಾವಿರಾರು ಮನೆಗಳು ನೆರೆ ನೀರಿನಲ್ಲಿ ಮುಳುಗಿವೆ.ಭೂಕುಸಿತಗಳಿಂದಾಗಿ ನೂರಾರು ಮನೆಗಳು ಮಣ್ಣಿನ ರಾಶಿಯಲ್ಲಿ ಹೂತುಹೋಗಿವೆಯೆಂದುವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರು ಸುತೊಪೊ ಪುರ್ನೊ ನುಗ್ರೊ ತಿಳಿಸಿದ್ದಾರೆ.
ಪ್ರವಾಹದಿಂದ ಪಾರಾಗಲು, ಭಾಗಶಃ ಮುಳುಗಿರುವ ತಮ್ಮ ಮನೆಗಳ ಸೂರುಗಳ ಮೇಲೆ ಕುಳಿತು ಗ್ರಾಮಸ್ಥರು ನೆರವಿಗಾಗಿ ಕಾಯುತ್ತಿರುವ ದೃಶ್ಯಗಳನ್ನು ಸ್ಥಳೀಯ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿವೆ. ಮಧ್ಯ ಜಾವಾದ ಜಿಲ್ಲೆಯೊಂದರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ,ಮನೆಯೊಂದು ಮಣ್ಣಿನಡಿ ಹೂತುಹೋದ ಕಾರಣ ಐವರು ಜೀವಂತ ಸಮಾಧಿಯಾಗಿದ್ದಾರೆ. ಇನ್ನೊಂದೆಡೆ, ರಸ್ತೆಯಲ್ಲಿ ಚದುರಿಬಿದ್ದಿದ್ದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಹಠಾತ್ತನೆ ಭೂಕುಸಿತವುಂಟಾಗಿ 9 ಮಂದಿ ಸಾವನ್ನಪ್ಪಿದ್ದಾರೆ.ಪ್ರವಾಹಪೀಡಿತ ಪ್ರದೇಶಗಳಲ್ಲಿ 26 ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ನೆರೆ ಹಾಗೂ ಭೂಕುಸಿತ ಸಂಭವಿಸಿದ ಪ್ರದೇಶಗಳಿಂದ ತೆರವುಗೊಳಿಸಲ್ಪಟ್ಟ ಸಂತ್ರಸ್ತರಿಗಾಗಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲಾಗಿದೆಯೆಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.