ರಶ್ಯ: ದೋಣಿಗಳು ಮಗುಚಿ 14 ಮಕ್ಕಳು ಸಾವು
Update: 2016-06-20 23:56 IST
ಮಾಸ್ಕೊ, ಜೂ. 20: ರಶ್ಯದ ವಾಯುವ್ಯ ಭಾಗದ ಕರೇಲಿಯದಲ್ಲಿ ದೋಣಿಯಲ್ಲಿ ಸರೋವರ ವಿಹಾರಕ್ಕೆ ತೆರಳಿದ್ದ ವೇಳೆ ಬಿರುಗಾಳಿ ಅಪ್ಪಳಿಸಿ 14 ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳನ್ನು ಒಯ್ಯುತ್ತಿದ್ದ ಹಲವಾರು ದೋಣಿಗಳು ಶನಿವಾರ ಬಿರುಗಾಳಿಗೆ ಸಿಲುಕಿ ಮಗುಚಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದೋಣಿಗಳಲ್ಲಿ 47 ಮಕ್ಕಳು ಮತ್ತು ನಾಲ್ವರು ವಯಸ್ಕ ಮಾರ್ಗದರ್ಶಿಗಳಿದ್ದರು. ಆ ಪೈಕಿ 14 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು.
ಅದೇ ವೇಳೆ, ಬಿರುಗಾಳಿ ಕುರಿತ ಎಚ್ಚರಿಕೆ ಇದ್ದ ಹೊರತಾಗಿಯೂ ಸುರಕ್ಷತೆ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು. ಬಂಧಿತರಲ್ಲಿ ಇಬ್ಬರು ಮಾರ್ಗದರ್ಶಿಗಳು ಹಾಗೂ ಮಕ್ಕಳು ತಂಗಿದ್ದ ಹೊಟೇಲೊಂದರ ನಿರ್ದೇಶಕ ಮತ್ತು ಉಪ ನಿರ್ದೇಶಕರು ಸೇರಿದ್ದಾರೆ. ಇದೇ ಹೊಟೇಲ್ ದೋಣಿ ವಿಹಾರವನ್ನು ಆಯೋಜಿಸಿತ್ತು ಎನ್ನಲಾಗಿದೆ.