×
Ad

ಮೂವರು ನಾಯಕರು ಮೂರು ದಾರಿಗಳು

Update: 2016-06-21 23:16 IST

ಒಂದು ರಾಜ್ಯದ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ರಾಜಕೀಯ ಪಕ್ಷವೊಂದು ತನ್ನ ಸಿದ್ಧ್ದಾಂತಗಳ ಪರಿಧಿಯಲ್ಲಿ ತಂತ್ರಗಳನ್ನು ಹೆಣೆಯುವುದು ಸಹಜ ಕ್ರಿಯೆ. ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಅಂತಹ ಕಸರತ್ತುಗಳನ್ನು ಮಾಡುವುದು ಅನಿವಾರ್ಯವೂ ಹೌದು. ಆದರೆ ತಂತ್ರಗಾರಿಕೆಯೇ ರಾಜಕಾರಣವಾಗಿ ಬಿಟ್ಟರೆ ಅದು ಅಪಾಯಕಾರಿಯೂ ಆಗಿಬಿಡುವುದುಂಟು. ಯಾಕೆಂದರೆ ವಾಸ್ತವದ ರಾಜಕಾರಣ ಯಾವುದು, ಚುನಾವಣಾ ತಂತ್ರಗಾರಿಕೆ ಯಾವುದು ಎನ್ನುವ ಗೊಂದಲದಲ್ಲಿ ಬೀಳುವ ಮತದಾರ ರಾಜಕೀಯದ ತಂತ್ರಗಾರಿಕೆಯೇ ನಿಜವಾದ ರಾಜನೀತಿಯೆಂದು ಭ್ರಮಿಸುತ್ತಾನೆ. ಇವತ್ತು ಕಾಂಗ್ರೆಸ್ಸಾಗಲಿ, ಭಾಜಪವಾಗಲಿ ಇಂತಹ ತಂತ್ರಗಾರಿಕೆಗಳನ್ನು ನಂಬಿಯೇ ರಾಜಕಾರಣ ಮಾಡುತ್ತಿವೆ. ಈ ಮಾತನ್ನು ನಾನೀಗ ಹೇಳಲು ಕಾರಣ ಉತ್ತರಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಭಾಜಪ ಈಗಿನಿಂದಲೆ ಕಸರತ್ತು ಆರಂಭಿಸಿದ್ದು, ಆ ಬಗ್ಗೆ ಕಳೆದ ವಾರವಷ್ಟೆ ಬರೆದಿದ್ದೆ. ಈಗ ಅದು ಇನ್ನೂ ಮುಂದೆ ಹೋಗಿ, ತನ್ನ ಮೂರು ಮುಖ್ಯ ನಾಯಕರನ್ನು ಮೂರು ರೀತಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿ, ಅದರಂತೆ ಚುನಾವಣಾ ಸಿದ್ಧತೆ ನಡೆಸುತ್ತಿದೆ.
 ಈ ತಂತ್ರಗಾರಿಕೆಯಲ್ಲಿ ಬಹುಮುಖ್ಯವಾದ ಮೂರು ಪಾತ್ರ ವಹಿಸಲಿರುವ ನಾಯಕರೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವರಾದ ರಾಜನಾಥ ಸಿಂಗ್ ಮತ್ತು ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ. ಈಗಾಗಲೇ ರಾಜಕೀಯ ರ್ಯಾಲಿಗಳ ಮೂಲಕ ಪ್ರಚಾರಸಭೆಗಳನ್ನು ನಡೆಸುತ್ತಿರುವ ಭಾಜಪ ಆ ಸಭೆಗಳಲ್ಲಿ ಈ ಮೂವರಲ್ಲಿ ಯಾರು ಯಾವ ವಿಷಯವನ್ನು ಮಾತನಾಡಬೇಕೆಂಬುದನ್ನು ನಿರ್ಧರಿಸಿ ತನ್ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗೆ ಮಾತನಾಡುವ ವಿಷಯಗಳನ್ನು ಹಂಚಿಕೊಂಡಿರುವ ಈ ನಾಯಕತ್ರಯರು ಉತ್ತರ ಪ್ರದೇಶದ ಜನರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರಿಗೆ ನಿಗದಿಮಾಡಲ್ಪಟ್ಟಿರುವ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:
ಮೊದಲನೆಯದಾಗಿ, ನರೇಂದ್ರ ಮೋದಿಯವರ ಮಾತುಗಳು ಕೇವಲ ಅಭಿವೃದ್ದಿಯ ಕುರಿತಾಗಿರುತ್ತವೆ. ರಾಷ್ಟ್ರದ ಆರ್ಥಿಕ ಪ್ರಗತಿ, ಕೈಗಾರಿಕೆಗಳ ಸಬಲೀಕರಣ, ವಿದೇಶಿ ಬಂಡವಾಳ ತರುವ ಬಗ್ಗೆ ಮತ್ತು, ಜನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತ್ರ ತಮ್ಮ ಭಾಷಣವನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಆಗಾಗ ವಿದೇಶದಲ್ಲಿರುವ ಕಪ್ಪುಹಣವನ್ನು ಇಂಡಿಯಾಗೆ ತರುವ ಬಗ್ಗೆ ತಾನು ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಮಜಾಯಿಷಿ ನೀಡುತ್ತಾ, ಜನರನ್ನು ಮರುಳು ಗೊಳಿಸುವಂತಹ ಭಾಷಣಗಳನ್ನು ಮಾಡುತ್ತಾರೆ. ಅಲ್ಲಿಗೆ ಮೋದಿಯವರ ವ್ಯಕ್ತಿತ್ವಕ್ಕೆ ಹಿಂದುತ್ವದ ಪರವಾದ ಮನುಷ್ಯನೆಂಬ ಹಣೆಪಟ್ಟಿ ಬೀಳದಂತೆ ನೋಡಿಕೊಳ್ಳುವ ಕೆಲಸವಾಗುತ್ತದೆ. ಜನರು ನಮ್ಮ ಪ್ರಧಾನಿಯವರು ಕೇವಲ ಜನರ ಜೀವನಮಟ್ಟ ಸುಧಾರಣೆಯ ಬಗ್ಗೆ ಮತ್ತು ದೇಶದ ಪ್ರಗತಿಯ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯೆಂದು ಪರಿಗಣಿಸುವಂತೆ ಮಾಡುವ ಒಂದು ತಂತ್ರಗಾರಿಕೆ ಇದಾಗಿದೆ. ಮೋದಿ ಅಪ್ಪಿತಪ್ಪಿಯೂ ಅಯೋಧ್ಯೆಯ ವಿವಾದದ ಬಗ್ಗೆಯಾಗಲಿ, ಹೆಚ್ಚುತ್ತಿರುವ ದಲಿತ, ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆಯಾಗಲಿ, ಇತ್ತೀಚೆಗೆ ವಿಷಾದನೀಯ ಘಟನೆಗಳು ನಡೆದ ಹೈದರಾಬಾದ್ ಮತ್ತು ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯಗಳ ಘಟನೆಗಳ ಬಗ್ಗೆಯಾಗಲಿ ಸೊಲ್ಲೆತ್ತುವುದಿಲ್ಲ. ಅವರದೇನಿದ್ದರೂ ಅಭಿವೃದ್ದಿ, ಜನಕಲ್ಯಾಣಕಾರ್ಯಕ್ರಮಗಳು ಮತ್ತು ವಿದೇಶಿ ರಾಷ್ಟ್ರಗಳೊಂದಿಗಿನ ಸಂಬಂಧ ಸುಧಾರಣೆಯ ದೊಡ್ಡ ದೊಡ್ಡ ಮಾತುಗಳು ಮಾತ್ರ. ಅಲ್ಲಿಗೆ ಭಾಜಪದ ಸಾಂಸ್ಕೃತಿಕ ರಾಜಕಾರಣವಾಗಲಿ, ಪಕ್ಷದ ಎರಡನೆ ಸಾಲಿನ ನಾಯಕರು ನೀಡುವ ಮತಾಂಧತೆಯ ಹೇಳಿಕೆಗಳಾಗಲಿ ಮೋದಿಯವರದಲ್ಲ ಮತ್ತು ಅವುಗಳ ಹೊಣೆಗಾರಿಕೆಯೂ ಅವರದಲ್ಲವೆಂಬ ಸಂದೇಶವನ್ನು ಜನತೆಗೆ ನೀಡುವ ಭಾಜಪದ ಉದ್ದೇಶ ಸಫಲವಾಗುತ್ತದೆ.
ಇನ್ನು ಪಕ್ಷದ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾರವರು ತಮ್ಮ ಭಾಷಣದ ಉದ್ದಕ್ಕೂ ಕೈರಾನದಲ್ಲಿನ ಹಿಂದೂ ಕುಟುಂಬಗಳ ವಾಪಸಾತಿ ಬಗ್ಗೆ, ಅಲ್ಪಸಂಖ್ಯಾತರಿಂದ ಬಹುಸಂಖ್ಯಾತ ಹಿಂದುಗಳಿಗಿರುವ ಆತಂಕಗಳ ಬಗ್ಗೆ ಘಂಟಾಘೋಷವಾಗಿ ಮಾತನಾಡುತ್ತಾರೆ. ಜೊತೆಗೆ ಈಗಿರುವ ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷವು ಮುಸ್ಲಿಮರನ್ನು ಓಲೈಸುವ ಕೆಲಸದಲ್ಲಿ ತೊಡಗಿದೆಯೆಂದೂ ಕಾಂಗ್ರೆಸ್ ಕೂಡ ಅದನ್ನು ಸಮರ್ಥಿಸುವ ಹಾದಿಯಲ್ಲಿ ಕೆಲಸ ಮಾಡುತ್ತಿದೆಯೆಂಬ ಅರ್ಥದಲ್ಲಿ ಮಾತಾಡುತ್ತಾ ಜನರ ಭಾವನೆಗಳನ್ನು ಬಡಿದೆಬ್ಬಿಸುವ ಭಾಷಣ ಮಾಡುತ್ತಾರೆ. ಜೊತೆಗೆ ಸಂಘ ಪರಿವಾರದ ಮುಖವಾಣಿಯಂತೆ, ವಿಶ್ವ ಹಿಂದೂ ಪರಿಷತ್ತಿನ ಧ್ವನಿಯಲ್ಲಿ ಮಾತಾಡುತ್ತಾರೆ. ಅಲ್ಲಿಗೆ ಜನರ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಅವನ್ನು ಹಿಂದೂ ಸಮುದಾಯಕ್ಕೆ ತಲುಪಿಸುವ ಭಾಜಪದ ಎರಡನೆ ಗುರಿಯೂ ಸಫಲವಾದಂತಾಗುತ್ತದೆ.
  
ಉಳಿದಂತೆ ಭಾಜಪದ ಮಾಜಿ ಅಧ್ಯಕ್ಷರೂ, ಕೇಂದ್ರದ ಹಾಲಿ ಗೃಹ ಸಚಿವರೂ ಆಗಿರುವ ರಾಜನಾಥ ಸಿಂಗ್ ಅವರು ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾಷಣ ಮಾಡುತ್ತಾರೆ. ಅವರ ಪ್ರಕಾರ ಸಮಾಜವಾದಿಪಕ್ಷದ ಮುಖ್ಯಮಂತ್ರಿಯಾದ ಅಖಿಲೇಶ್ ಯಾದವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಜನತೆ ಇದರಿಂದ ಬೇಸತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಮುಝಪ್ಫರ್ ನಗರದ ಕೋಮುಗಲಭೆಗಳನ್ನು ಮತ್ತು ಇತ್ತೀಚೆಗೆ ನಡೆದ ಮಥುರಾ ಹಿಂಸಾಚಾರವನ್ನು ಉಲ್ಲೇಖಿಸುತ್ತಾರೆ. ಉತ್ತರ ಪ್ರದೇಶವು ಜಂಗಲ್ ರಾಜ್ಯವಾಗುತ್ತಿದೆಯೆಂದು ಜನರಲ್ಲಿ ಸರಕಾರದ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟಿಸುವ ಮಾತಾಡುತ್ತಿದ್ದಾರೆ. ಕಳೆದ ವಾರ ಅಹ್ಮದಾಬಾದ್‌ನಲಿ ನಡೆದ ಬೃಹತ್ ರ್ಯಾಲಿಯೊಂದರಲ್ಲಿ ಈ ಮೂವರು ಸಹ ಇಂತಹುದೇ ಭಾಷಣ ಮಾಡಿದ್ದು, ಈ ವರ್ಷದ ಕೊನೆಯ ವೇಳೆಗೆ ಉತ್ತರಪ್ರದೇಶದಾದ್ಯಂತ ಇನ್ನೂ ಇಪ್ಪತ್ತು ರ್ಯಾಲಿಗಳನ್ನು ಆಯೋಜಿಸುವ ಯೋಜನೆಯನ್ನು ಭಾಜಪ ಹೊಂದಿದೆಯೆಂದು ಅದರ ವಕ್ತಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅದು ಇವತ್ತಿನವರೆಗೂ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಭಾಜಪದ ಒಂದು ವರ್ಗ ರಾಜನಾಥ ಸಿಂಗ್ ಅವರೇ ಸೂಕ್ತವೆಂದು ಹೇಳುತ್ತಾ ಬಂದಿದ್ದರೂ ಸ್ವತ: ರಾಜನಾಥ್ ಅದನ್ನು ನಿರಾಕರಿಸಿ ತಮಗೆ ರಾಜ್ಯದ ಮುಖ್ಯಮಂತ್ರಿಯ ಪಟ್ಟ ಇಷ್ಟವಿಲ್ಲವೆಂದು ಹೇಳಿಕೊಂಡಿದ್ದಾರೆ. ಇನ್ನು ಪಕ್ಷದ ಇನ್ನೊಂದು ವರ್ಗ ಯುವನಾಯಕ ವರುಣ್ ಗಾಂಧಿಯವರನ್ನು ಮುಖ್ಯಮಂತ್ರಿ ಗಾದಿಗೆ ಹೆಸರಿಸುವಂತೆ ಒತ್ತಡ ಹೇರುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದರೂ ಭಾಜಪ ಯಾವ ನಿರ್ಧಾರವನ್ನೂ ಪ್ರಕಟಿಸಿಲ್ಲ.
 
ಬಹುಶ: ಈ ವಿಚಾರದಲ್ಲಿ ಮಾಯಾವತಿಯವರ ಬಹುಜನಪಕ್ಷದ ಮುಂದಿನ ನಡೆಯನ್ನು ಭಾಜಪ ಕಾದು ನೋಡುತ್ತಿದೆ. ಯಾಕೆಂದರೆ ಇವತ್ತಿನವರೆಗೂ ಮಾಯಾವತಿಯವರು ಮುಂದಿನ ಚುನಾವಣೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸದ್ಯದ ಪರಿಸ್ಥಿತಿಯಲ್ಲ್ಲಿ ಮಾಯಾವತಿ ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕಿನ ಮೇಲೆ ಹಿಡಿತ ಹೊಂದಿರುವಂತೆ ಕಂಡುಬರುತ್ತಿದ್ದು ಕಾಂಗ್ರೆಸ್ ಜೊತೆ ಅದು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾಧ್ಯತೆಗಳು ಗೋಚರಿಸುತ್ತಿವೆ. ಈ ದೃಷ್ಟಿಯಿಂದಲೇ ಕಾಂಗ್ರೆಸ್ ಮತ್ತು ಸಮಾವಾದಿಪಕ್ಷಗಳ ವಿರುದ್ಧ ಹರಿಹಾಯುತ್ತಿರುವ ಭಾಜಪ, ಬಹುಜನ ಪಕ್ಷದ ಬಗ್ಗೆ ಚಕಾರವೆತ್ತುತ್ತಿಲ್ಲ. ತನ್ನ ವಿರುದ್ಧವಿರುವ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಆಗುವ ಅನುಕೂಲವನ್ನು ಮನಗಂಡಿರುವ ಭಾಜಪ ಆ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಭಾಜಪ 1999ರಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ತೊಡಿಸಿದ ಜಾತ್ಯತೀತ ಮುಖವಾಡವನ್ನು ಮೋದಿಯವರಿಗೆ ತೊಡಿಸಿ ಉತ್ತರ ಪ್ರದೇಶದ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ.
   

Writer - ಕು.ಸ.ಮಧುಸೂದನ ನಾಯರ್

contributor

Editor - ಕು.ಸ.ಮಧುಸೂದನ ನಾಯರ್

contributor

Similar News