ಜಲಮೂಲಗಳ ರಕ್ಷಣೆ
ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬುದನ್ನು ನಮ್ಮ ಪ್ರಭುತ್ವ ಸೇರಿದಂತೆ ಇಡೀ ವ್ಯವಸ್ಥೆ ಒಪ್ಪಿಕೊಂಡಿದೆ. ಆದರೆ, ಆ ಹಕ್ಕಿಗೆ ವ್ಯತಿರಿಕ್ತವಾಗಿ ಜಲಮೂಲಗಳನ್ನು ನಾವು ನಾಶಮಾಡಲು ಹೊರಟಿದ್ದೇವೆ. ಅಭಿವೃದ್ಧಿಯ ಭರಾಟೆಯಲ್ಲಿ ನಮ್ಮ ಜೀವನದಿಗಳನ್ನು ಹಂತಹಂತವಾಗಿ ನಿರ್ನಾಮ ಮಾಡುತ್ತಿದ್ದೇವೆ. ನಮ್ಮ ಬಹುತೇಕ ನಗರ ಮತ್ತು ಹಳ್ಳಿಗಳಿಗೆ ನದಿಗಳೇ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ. ಅವುಗಳನ್ನು ಕಾಪಾಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಆದರೆ, ವಾಸ್ತವಾಂಶ ಭಿನ್ನವಾಗಿದೆ. ಗಂಗೆ, ಯಮುನೆ ಸೇರಿದಂತೆ ಉತ್ತರಭಾರತದ ಬಹುತೇಕ ನದಿಗಳು ಕೈಗಾರಿಕಾ ಮಾಲಿನ್ಯದಿಂದಾಗಿ ಅವನತಿಯ ಅಂಚಿಗೆ ಬಂದು ನಿಂತಿವೆ. ನಮ್ಮ ರಾಜ್ಯದ 15 ನದಿಗಳ 665 ಕಿ.ಮೀ. ತೀರ ಪ್ರದೇಶ ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದಿಂದ ತಿಳಿದುಬಂದಿದೆ. ಕಾವೇರಿ, ಕೃಷ್ಣಾ, ಭೀಮಾ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಬಹುತೇಕ ಮಲಿನಗೊಂಡಿವೆ. ನದಿಗಳ ರಕ್ಷಣೆ ಮಾಡಬೇಕಾದ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ವುೂಕಪ್ರೇಕ್ಷಕನಂತೆ ನೋಡುತ್ತಿವೆ.
ನಮ್ಮ ನದಿ ತೀರಗಳು ತಿಪ್ಪೆಗುಂಡಿಗಳಾಗಿವೆ. ಅನೇಕ ನಗರ ಮತ್ತು ಪಟ್ಟಣಗಳಲ್ಲಿ ಚರಂಡಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ಅನೇಕ ಉದ್ಯಮಗಳು ನದಿಗಳಿಗೆ ತ್ಯಾಜ್ಯ ನೀರನ್ನು ಶುದ್ದೀಕರಿಸದೆ ಬಿಡುತ್ತಿವೆ. ಹರಿಹರ, ಶಿವಮೊಗ್ಗ, ಎಂ.ಕೆ.ಹುಬ್ಬಳ್ಳಿ, ಭದ್ರಾವತಿ, ಗೋಕಾಕ್, ನಂಜನಗೂಡು, ಶಹಬಾದ್ ಮತ್ತು ದಾಂಡೇಲಿ, ಬೀದರ್ ಮತ್ತಿತರ ನದಿ ಸಮೀಪದ ಊರುಗಳಲ್ಲಿ ಇದೇ ಪರಿಸ್ಥಿತಿ ಇದೆ. ಉದ್ಯಮಗಳ ತ್ಯಾಜ್ಯ ನೀರಿನಿಂದ ನಮ್ಮ ನದಿಗಳು ಹಾಳಾಗಿ ಹೋಗುತ್ತಿವೆ. ಇವುಗಳನ್ನೆಲ್ಲ ತಡೆಯಬೇಕಾದ ಸಂಬಂಧಿಸಿದ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ. ಬೆಂಗಳೂರಿನಲ್ಲಿ ಈ ನಿರ್ಲಕ್ಷದಿಂದಾಗಿ ವೃಷಭಾವತಿ ಎಂಬ ನದಿ ಕೊಳಚೆ ನೀರು ಹರಿಯುವ ಮೋರಿಯಾಗಿದೆ. ನಾಳೆ ಉಳಿದ ನದಿಗಳಿಗೂ ಇದೇ ಪರಿಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.
ಜಗತ್ತಿನ ಜೀವ ಸಂಕುಲ ಬೆಳೆದಿದ್ದು ನದಿಗಳ ತೀರದಲ್ಲಿ. ಅದಕ್ಕಾಗಿ ವಿಶ್ವದ ಪ್ರಮುಖ ನಾಗರಿಕತೆಗಳನ್ನು ಈಗಲೂ ಕೂಡಾ ಆಯಾ ನದಿಗಳ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಜಲಮೂಲಗಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದೇವೆ. ಅವುಗಳನ್ನು ಪೂಜಿಸುತ್ತವೆ. ಆದರೆ, ಅವು ಕೊಳಚೆ ಗುಂಡಿಯಾಗುವುದನ್ನು ಕಂಡು ತೆಪ್ಪಗಿರುತ್ತೇವೆ.
ನದಿಗಳ ಶುದ್ಧೀಕರಣದ ಕೆಲಸ ಬರೀ ಸರಕಾರದ ಕೆಲಸ ಮಾತ್ರವಲ್ಲ ಅದು ಸಾಮಾಜಿಕ ಹೊಣೆಗಾರಿಕೆ ಕೂಡಾ ಆಗಿದೆ. ನಮ್ಮ ನದಿಗಳನ್ನು ಉಳಿಸಿಕೊಳ್ಳಲು ನಾಗರಿಕ ಪ್ರಜ್ಞೆ ಜಾಗೃತವಾಗಬೇಕಾಗಿದೆ. ನದಿಗಳನ್ನು ಕಾಪಾಡಿಕೊಳ್ಳಲು ಜನಸಾಮಾನ್ಯರು ಹೋರಾಟಕ್ಕಿಳಿಯಬೇಕಾಗಿದೆ. ಆದರೆ, ಈಗ ಹೋರಾಟಕ್ಕಿಳಿದಾಗ ಅಭಿವೃದ್ಧಿಯ ವಿರೋಧಿಗಳೆಂದು ಅಪಪ್ರಚಾರ ಮಾಡಲಾಗುತ್ತದೆ. ಸರಕಾರವೇ ಪೊಲೀಸರ ಮೂಲಕ ಇಂತಹ ಹೋರಾಟಗಳನ್ನು ಹತ್ತಿಕ್ಕುತ್ತದೆ. ಛತ್ತೀಸ್‌ಗಡದ ಬಸ್ತಾರ್‌ನಲ್ಲಿ ತಮ್ಮ ಕಾಡು ಮತ್ತು ನೀರನ್ನು ಉಳಿಸಿಕೊಳ್ಳಲು ಅಲ್ಲಿನ ಮೂಲನಿವಾಸಿಗಳಾದ ಆದಿವಾಸಿಗಳು ಹೋರಾಟಕ್ಕಿಳಿದರೆ, ಅವರನ್ನು ನಕ್ಸಲೀಯರೆಂದು ಕರೆದು ಪೊಲೀಸ್ ಮತ್ತು ಸೇನಾ ಪಡೆಗಳನ್ನು ನುಗ್ಗಿಸಿ ದಮನಕಾಂಡ ಮಾಡಲಾಗುತ್ತಿದೆ. ನದಿಗಳ ಸಂರಕ್ಷಣೆಗಾಗಿ ಶಾಂತಿಯುತವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ ಉತ್ತರಭಾರತದ ಸನ್ಯಾಸಿಯೊಬ್ಬರನ್ನು ಬದುಕಿಸಿಕೊಳ್ಳಲು ಕೂಡಾ ಆಗಲಿಲ್ಲ.
ಜಾಗತೀಕರಣದ ಈ ಕಾಲದಲ್ಲಿ ಎಲ್ಲವೂ ಮಾರಾಟದ ವಸ್ತುಗಳಾಗಿವೆ. ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ನದಿಗಳನ್ನು ಮತ್ತು ಕಾಡುಗಳನ್ನು ಖರೀದಿಸಲು ಆಸಕ್ತಿ ವಹಿಸಿವೆ. ಹೀಾಗಿ ನದಿಗಳ ಮೇಲಿನ ಸಾಮೂಹಿಕ ಒಡೆತನ ನಷ್ಟ ಹೊಂದಿ ಅವು ಕಾರ್ಪೊರೇಟ್ ಕಂಪೆನಿಗಳ ವಶವಾಗುವ ದಿನಗಳು ದೂರವಿಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ಜನಪರ ಸಂಘಟನೆಗಳು ಮಾತ್ರವಲ್ಲ, ಧಾರ್ಮಿಕ ಗುರುಗಳು ಕೂಡಾ ನದಿಗಳನ್ನು ಕಾಪಾಡಿಕೊಳ್ಳಲು ಹೋರಾಟಕ್ಕಿಳಿಯಬೇಕಾಗಿದೆ. ನದಿಗಳಿಗೆ ದೇವತಾ ಸ್ವರೂಪ ನೀಡಿ ಕೋಮುಪ್ರಚೋದನೆಗೆ ಬಳಸಿಕೊಳ್ಳುವ ಕೋಮುವಾದಿ ಸಂಘಟನೆಗಳು ನದಿಗಳು ಈ ರೀತಿ ಮಾಲಿನ್ಯದಿಂದ ನಾಶಹೊಂದುವುದನ್ನು ಯಾಕೆ ಪ್ರಶ್ನಿಸುವುದಿಲ್ಲ ಎಂಬುದು ಅರ್ಥವಾಗುವುದಿಲ್ಲ.
ಗಂಭೀರ ಸನ್ನಿವೇಶದಲ್ಲಿ ಇಡೀ ಸಮುದಾಯ ನದಿಗಳನ್ನು ಕಾಪಾಡಿಕೊಳ್ಳಲು ಮುಂದಾಗಬೇಕಾಗಿದೆ. ಈಗ ನಾವು ಎಚ್ಚರವಾಗದಿದ್ದರೆ ಇಡೀ ಜೀವರಾಶಿಗೆ ಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನದಿ ನೀರು ಶುದ್ಧೀಕರಣ ಬರೀ ಸರಕಾರದ ಕರ್ತವ್ಯವಾಗಬಾರದು ಇಡೀ ಜನಾಂದೋಲನವಾಗಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಗಳು ದೀರ್ಘ ನಿದ್ರೆಯಿಂದ ಎಚ್ಚೆತ್ತು ನಮ್ಮ ನದಿಗಳನ್ನು ಕಾಪಾಡಿಕೊಳ್ಳಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ಪಿೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ನದಿಗಳು ಮಾತ್ರಲ್ಲ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆಗಳೂ ನಾಶವಾಗಿ ಹೋಗುತ್ತಿವೆ. ಅನೇಕ ಕೆರೆಗಳು ಒತ್ತುವರಿಯಾಗಿವೆ. ಹೂಳು ತುಂಬಿಕೊಂಡಿವೆ. ಅವುಗಳನ್ನು ಶುದ್ಧೀಕರಿಸಿ ಕಾಪಾಡಿಕೊಳ್ಳಬೇಕಾಗಿದೆ.