×
Ad

ಬಿಲ್ಲವರು ಒಮ್ಮೆ ತಮ್ಮನ್ನು ತಾವೇ ಪರಾಮರ್ಶಿಸಿಕೊಳ್ಳಲಿ

Update: 2016-06-22 23:16 IST

ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಬಿಲ್ಲವ ಜಾತಿಯವರಿಗೆ ಸಿದ್ದರಾಮಯ್ಯನವರು ಅನ್ಯಾಯ ಮಾಡಿದ್ದಾರೆ ಎಂದು ಬಿಲ್ಲವ ಜನಾಂಗದ ಮುಖಂಡರು ಮತ್ತು ಸ್ವಾಮೀಜಿಗಳು ಹುಯಿಲೆಬ್ಬಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಎಣ್ಣೆ ಸುರಿಯುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಬಯ್ಯುವ ಮೊದಲು ಬಿಲ್ಲವ ಜನಾಂಗದ ಧುರೀಣರು ಮತ್ತು ಸಾಮಾನ್ಯ ಮತದಾರರು ತಮ್ಮ ತಮ್ಮ ಜವಾಬ್ದಾರಿ ಎಷ್ಟರ ಮಟ್ಟಿಗೆ ನಿಭಾಯಿಸಿದ್ದಾರೆ ಎಂದು ಒಮ್ಮೆ ತಮ್ಮನ್ನು ತಾವೇ ಪರಾಮರ್ಶಿಸಿಕೊಳ್ಳಲಿ. ಬಿಲ್ಲವರ ಸಹಿತ ಬಡ ಜನರಿಗಾಗಿ ಅಪಾರ ಕೆಲಸ ಮಾಡಿರುವ ಜನಾರ್ದನ ಪೂಜಾರಿಯವರನ್ನು ಹಲವು ಬಾರಿ ಸೋಲಿಸಿ ಬೇರೆ ಮೇಲ್ಜಾತಿಯವರನ್ನು ಗೆಲ್ಲಿಸುವಾಗ ಬಿಲ್ಲವರ ಅಭಿಮಾನ ಎಲ್ಲಿ ಹೋಗಿತ್ತು? ಸಂಘ ಪರಿವಾರದ ಮೇಲ್ಜಾತಿಯ ನಾಯಕರ ಪ್ರಚೋದನೆಗೆ ಒಳಗಾಗಿ ತಮ್ಮದೇ ಜಾತಿಯ ಹುಡುಗ ಹುಡುಗಿಯರ ಮೇಲೆ ಅನೈತಿಕ ಪೊಲೀಸ್‌ಗಿರಿ ಮಾಡುವಾಗ ಬಿಲ್ಲವರ ಜಾತಿ ಪ್ರೇಮ ಎಲ್ಲಿ ಹೋಗಿತ್ತು? ತಮ್ಮದೇ ಧಾರ್ಮಿಕ ನೇತಾರರು ನಾರಾಯಣ ಗುರುಗಳ ತತ್ವಗಳನ್ನು ಗಾಳಿಗೆ ತೂರಿ ವೈದಿಕರ ಕಾಲುಚೀಲ ಆದಾಗ ಬಿಲ್ಲವರ ಅಭಿಮಾನ ಎಲ್ಲಿ ಅಡಗಿತ್ತು?

ದೇವರಾಜ ಅರಸರ ಕಾಲದಲ್ಲಿ ತುಳುನಾಡಿನಲ್ಲಿ ಭೂಮಸೂದೆಯಿಂದ ಅತೀ ಹೆಚ್ಚು ಲಾಭ ಪಡೆದವರೆಂದರೆ ಬಿಲ್ಲವರು. ತುಳುನಾಡಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಲ್ಲವರಿಗೆ ಅಸ್ಮಿತತೆ ಹಾಗೂ ಒಂದು ಐಡೆಂಟಿಟಿ ತಂದು ಕೊಟ್ಟವರೆಂದರೆ ದೇವರಾಜ ಅರಸರು. ಆದರೆ ಈಗ ಈ ಅಸ್ಮಿತತೆಯನ್ನು ಬೇರೆ ಮೇಲ್ಜಾತಿಯವರಿಗೆ ಒತ್ತೆ ಇಟ್ಟು ಅವರ ಮಾನಸಿಕ ಗುಲಾಮರಾಗಿ ಹಿಂದೊಮ್ಮೆ ತಮಗೇ ಸಹಾಯ ಮಾಡಿದ ಪರಧರ್ಮೀಯರ ವಿರುದ್ಧ ಕತ್ತಿ ಮಸೆಯುವಾಗ ಬಿಲ್ಲವರ ಸ್ವಂತ ಬುದ್ಧಿ ಎಲ್ಲಿ ಹೋಗಿತ್ತು? ಈಗ ಬೇರೆಯವರ ಪ್ರಚೋದನೆಗೆ ಒಳಗಾಗಿ ಸಿದ್ದರಾಮಯ್ಯನವರ ವಿರುದ್ಧ ಬೊಬ್ಬೆ ಹಾಕುವಾಗ ಇತ್ತೀಚಿನ ಲೋಕ ಸಭೆ- ವಿಧಾನ ಸಭೆ- ಜಿಲ್ಲಾ ಪಂಚಾಯತ್ ಅಥವಾ ನಗರ ಪಾಲಿಕೆ ಚುನಾವಣೆಗಳಲ್ಲಿ ಬಿಲ್ಲವ ಮತದಾರರು ಸ್ವತಃ ತಾವೇ ಬಿಲ್ಲವ ಅಭ್ಯರ್ಥಿಗೆ ಓಟು ಹಾಕಿಲ್ಲ ಎಂಬುದು ಯಾಕೆ ಮರೆತು ಹೋಯಿತು?

ಚುನಾವಣೆಯಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಓಟು ಹಾಕದವರು ಈಗ ರಾಜ್ಯದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹೈಕಮಾಂಡ್‌ನಿಂದ ಬಿಲ್ಲವ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಹುಯಿಲೆಬ್ಬಿಸುವ ನೈತಿಕ ಅಧಿಕಾರ ಹೊಂದಿಲ್ಲ. ಒಂದು ವೇಳೆ ಉಡುಪಿ-ದ.ಕ.ಜಿಲ್ಲೆಗಳ ಬಿಲ್ಲವರು ಒಗ್ಗಟ್ಟಾಗಿ ಕೇವಲ ಬಿಲ್ಲವ ಅಭ್ಯರ್ಥಿಗೆ ಮಾತ್ರ ಮತ ಹಾಕುವುದಾಗಿ ಪಣ ತೊಟ್ಟರೆ ಯಾವುದೇ ಪಕ್ಷದ ಬಿಲ್ಲವ ಅಭ್ಯರ್ಥಿ ಸೋಲಲು ಸಾಧ್ಯವೇ ಇಲ್ಲ, ಅಷ್ಟೊಂದು ಮತದಾರರ ಸಂಖ್ಯೆ ಬಿಲ್ಲವ ಜನಾಂಗ ಹೊಂದಿದೆ (ಎರಡು ಪಕ್ಷದಿಂದ ಎದುರು ಬದುರು ಬಿಲ್ಲವರೇ ನಿಂತಿದ್ದರೆ ಆಗ ಇಬ್ಬರಲ್ಲಿ ಯಾರ ಪಕ್ಷದಿಂದ ತಮ್ಮ ಜನಾಂಗಕ್ಕೆ ಹಿಂದೆಲ್ಲಾ ಹೆಚ್ಚು ಪ್ರಯೋಜನವಾಗಿತ್ತು ಎಂದು ಪರಾಮರ್ಶಿಸಿ ಓಟು ಹಾಕಿದರೆ ಸರಿ ಹೋಗುತ್ತದೆ). ಬಿಲ್ಲವರೇ ಇನ್ನಾದರೂ ನೀವು ಸ್ವಂತ ಬುದ್ಧ್ದಿ ಬೆಳೆಸಿಕೊಳ್ಳಿ, ಯಾರದೋ ಕೈಗೊಂಬೆ ಆಗಬೇಡಿ

Writer - ಭಾಸ್ಕರ ಸುವರ್ಣ, ಕೂಳೂರು

contributor

Editor - ಭಾಸ್ಕರ ಸುವರ್ಣ, ಕೂಳೂರು

contributor

Similar News