ಮುಂಗಾರು ಮಳೆಗೆ ಭಿನ್ನಮತದ ಬೆಳೆ
ರಾಜ್ಯಕ್ಕೆ ಮುಂಗಾರು ಕಾಲಿರಿಸಿದೆ. ರೈತರು ಉತ್ತುವುದಕ್ಕೆ ಬಿತ್ತುವುದಕ್ಕೆ ಅಣಿಯಾಗುವ ಹೊತ್ತು. ಇಂತಹ ಸಂದರ್ಭದಲ್ಲಿ ಸರಕಾರದ ಹೊಣೆಗಾರಿಕೆ ಬಹುದೊಡ್ಡದಿರುತ್ತದೆ. ಒಂದೆಡೆ ಬಿತ್ತನೆ ಬೀಜ, ಮತ್ತೊಂದೆಡೆ ಗೊಬ್ಬರ ಇವೆಲ್ಲವುಗಳನ್ನು ಸರಿಯಾದ ರೀತಿಯಲ್ಲಿ ರೈತರಿಗೆ ತಲುಪಿಸುವ ಬಹುದೊಡ್ಡ ಹೊಣೆಗಾರಿಕೆ ಸರಕಾರದ್ದಾಗಿರುತ್ತದೆ. ಜೊತೆಜೊತೆಗೇ ನೆರೆನಾಶಗಳು ಇದೇ ಸಂದರ್ಭದಲ್ಲಿ ಸಂಭವಿಸುತ್ತವೆ.
ಈ ಸಂದರ್ಭದಲ್ಲೂ ಅವರೆಡೆಗೆ ನೆರವಿನ ಹಸ್ತವನ್ನು ಚಾಚುವುದು ಸರಕಾರದ ಕರ್ತವ್ಯ. ಕುರ್ಚಿಗೆ ಬೇರೂರಿರುವ ವಿವಿಧ ಅಧಿಕಾರಿಗಳು ಎದ್ದು ಜನರ ಬಳಿಗೆ ಸಾಗಬೇಕಾದ ಕಾಲ ಇದು. ಕೃಷಿ ಇಲಾಖೆ ತನ್ನ ಕಚೇರಿಗೆ ಅಂಟಿಕೊಂಡಿರುವ ಜೇಡರಬಲೆಗಳನ್ನು ಕೊಡವಿಕೊಳ್ಳುವ ಸಮಯ. ಆದರೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದರೆ ಸರಕಾರ ಜಾಗೃತಾವಸ್ಥೆಯಲ್ಲಿರಬೇಕು. ವಿಪರ್ಯಾಸವೆಂದರೆ ರಾಜ್ಯಕ್ಕೆ ಮುಂಗಾರು ಕಾಲಿಡುತ್ತಿರುವ ಸಂದರ್ಭದಲ್ಲೇ ಸರಕಾರದೊಳಗೆ ಭಿನ್ನಾಭಿಪ್ರಾಯಗಳು ಶುರುವಾಗಿವೆ. ಜನರ ಕಡೆಗೆ ಗಮನ ಹರಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಅತೃಪ್ತರ ಕಡೆಗೆ ಗಮನ ಕೇಂದ್ರೀಕರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ಸಿದ್ದರಾಮಯ್ಯ ವಿರೋಧಿಗಳು ಸರಕಾರದೊಳಗೆ ಭಿನ್ನಮತ, ಒಳಸಂಚುಗಳ ಬೀಜಗಳನ್ನು ಬಿತ್ತುತ್ತಿದ್ದರೆ, ಕಾಂಗ್ರೆಸ್‌ನ ನಿವೃತ್ತರು ಅದಕ್ಕೆ ಬೇಕಾದ ಗೊಬ್ಬರಗಳನ್ನು ಒದಗಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿರೋಧಪಕ್ಷಗಳು ಅದರಲ್ಲೂ ಬಿಜೆಪಿ, ಈ ಬಾರಿಯ ಮುಂಗಾರಿನಲ್ಲಿ ಭರ್ಜರಿ ಕೊಯ್ಲು ಕೊಯ್ಯುವ ಕನಸನ್ನು ಕಾಣುತ್ತಿದೆ. ಈ ಕೃಷಿಯ ಗದ್ದಲದ ನಡುವೆ ನಿಜವಾದ ಕೃಷಿಕರು ತಮ್ಮ ಗೋಳನ್ನು ಯಾರಲ್ಲಿ ತೋಡಿಕೊಳ್ಳಬೇಕು ಎನ್ನುವುದು ತಿಳಿಯದೆ ಕಂಗಾಲಾಗಿದ್ದಾರೆ.
ಸಂಪುಟ ಪುನಾರಚನೆಯ ಬೆನ್ನಿಗೇ ಸಿದ್ದರಾಮಯ್ಯ ಅವರ ವಿರೋಧಿಗಳ ಸಂಖ್ಯೆ ಹೆಚ್ಚಿದೆ. ಸರಕಾರ ರಚನೆಯ ಸಂದರ್ಭದಲ್ಲೂ ಅನಂತರವೂ ಸಿದ್ದರಾಮಯ್ಯ ಅವರ ಜೊತೆಗಿದ್ದ ಹತ್ತು ಹಲವು ನಾಯಕರು ಒಮ್ಮಿಂದೊಮ್ಮೆಲೆ ಸಿದ್ದರಾಮಯ್ಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರುವುದು ‘ನಾವೇ’ ಎಂದು ಹೊಣೆ ಹೊತ್ತುಕೊಳ್ಳುತ್ತ ಅವರನ್ನು ಕೆಳಗಿಳಿಸುವುದಕ್ಕೆ ಸಂಚು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದು ನಾನು ಎಂದು ಅಂಬರೀಷ್ ಖಳನಾಯಕನಂತೆ ಅಬ್ಬರಿಸುತ್ತಿದ್ದಾರೆ. ಇತ್ತ ಶ್ರೀನಿವಾಸ ಪ್ರಸಾದ್ ತನ್ನ ಎಲ್ಲ ಸಜ್ಜನಿಕೆಗಳನ್ನು ಬದಿಗಿಟ್ಟು ಮುಖ್ಯಮಂತ್ರಿಯನ್ನು ಏಕವಚನದಲ್ಲಿ ಕರೆಯುತ್ತಿದ್ದಾರೆ. ಮೂಢನಂಬಿಕೆಗಳ ವಿರುದ್ಧ ಸ್ಮಶಾನದಲ್ಲಿ ರಾತ್ರಿ ಕಳೆದ ಜಾರಕಿಹೊಳಿ ಮತ್ತು ಅವರ ಅಭಿಮಾನಿಗಳಿಗೆ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಒಂದು ವೌಢ್ಯವಾಗಿ ಪರಿವರ್ತನೆಗೊಂಡಿದ್ದಾರೆ. ಜಾರಕಿಹೊಳಿ ತನಗೆ ಸಚಿವ ಸ್ಥಾನ ಕೊಡದೇ ಇದ್ದರೆ ಮುಖ್ಯಮಂತ್ರಿಯನ್ನೇ ಇಳಿಸುವುದನ್ನು ತನ್ನ ಮುಂದಿನ ಚಳವಳಿಯನ್ನಾಗಿ ಮಾರ್ಪಡಿಸುವ ಹುನ್ನಾರದಲ್ಲಿದ್ದಾರೆ. ಮುಖ್ಯಮಂತ್ರಿಯನ್ನು ಇಳಿಸುವ ಇವರೆಲ್ಲರ ದುರುದ್ದೇಶಕ್ಕೆ ಇರುವ ಕಾರಣ ಒಂದೇ, ತಮ್ಮನ್ನು ಸಚಿವ ಸ್ಥಾನದಿಂದ ಇಳಿಸಿರುವುದು. ಇದರಲ್ಲೂ ಅಂಬರೀಷ್‌ಗೆ ಅದೆಷ್ಟು ಆತ್ಮವಿಶ್ವಾಸವೆಂದರೆ ತಾನಿನ್ನೂ ಚಲಾವಣೆಯಲ್ಲಿರುವ ರೆಬೆಲ್ ಸ್ಟಾರ್ ಎಂದೇ ತಿಳಿದುಕೊಂಡಿದ್ದಾರೆ. ಜೊತೆಗೆ ತನ್ನ ಬೆನ್ನಿಗಿರುವ ಜಾತಿಯನ್ನೂ ಸಿದ್ದರಾಮಯ್ಯ ಅವರ ವಿರುದ್ಧ ಬಳಸುವ ಉದ್ದೇಶವನ್ನು ಹೊಂದಿದ್ದಾರೆ.
ಆದರೆ ಅಂಬರೀಷ್ ಅವರು ಒಂದನ್ನು ನೆನಪಿನಲ್ಲಿಡಬೇಕು, ಸಚಿವ ಸ್ಥಾನಕ್ಕೆ ಬೇಕಾಗಿರುವುದು ಇವೆರಡು ಅರ್ಹತೆ ಮಾತ್ರವೇ? ಈ ವರೆಗೆ ಸಚಿವ ಸ್ಥಾನದಲ್ಲಿದ್ದು ತಾನು ಸಾಧಿಸಿದ್ದೇನು ಎನ್ನುವುದನ್ನು ಪ್ರಶ್ನಿಸಿಕೊಂಡರೆ ಸಾಕು. ನಿಜಕ್ಕೂ ಇದು ಅಂಬರೀಷ್ ಅವರಿಗೆ ರಾಜಕೀಯ ನಿವೃತ್ತಿ ಘೋಷಿಸಲು ಅರ್ಹ ಸಮಯ. ಇಂದು ಹೇಗೆ ಅಂಬರೀಷ್ ಅವರನ್ನು ನಾಯಕನಾಗಿ ಗಾಂಧಿನಗರ ಒಪ್ಪಿಕೊಳ್ಳುವುದಿಲ್ಲವೋ ಹಾಗೆಯೇ ಜನರೂ ರಾಜಕೀಯವಾಗಿ ಅವರ ಅಸಹಾಯಕತೆಯನ್ನು ಗಮನಿಸಿದ್ದಾರೆ ಮತ್ತು ಒಕ್ಕೊರಲಲ್ಲಿ ಅವರ ಬದಲಾವಣೆಯನ್ನು ಸ್ವೀಕರಿಸಿದ್ದಾರೆ. ಹೀಗಿರುವಾಗ ಕೇವಲ ವೈಯಕ್ತಿಕ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯ ವಿರುದ್ಧ ಮಾತನಾಡುವುದು ಯಾವ ರೀತಿಯಲ್ಲೂ ಶೋಭೆಯಲ್ಲ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಕೆಳಗಿಳಿಸಲು ಜಾಫರ್ ಶರೀಫ್‌ರಂತಹ ಹಿರಿಯ ನಾಯಕರೂ ಕೈ ಜೋಡಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಮಸಲತ್ತು ನಡೆಸಿ ಅದರಿಂದ ವಿಫಲರಾದವರಿಗೆಲ್ಲ ಇದೀಗ ಭಿನ್ನಮತದ ಮುಂಗಾರು ಹಿತಾನುಭವವನ್ನು ನೀಡಿದೆ. ಅವರೆಲ್ಲ ಅಂಬರೀಷ್, ಶ್ರೀನಿವಾಸ ಪ್ರಸಾದ್ ಅವರ ಜೊತೆ ಸೇರಿ ಅವರ ದುಃಖಕ್ಕೆ ಸಾಥ್ ನೀಡುತ್ತಿದ್ದಾರೆ. ಆದರೆ ಜಾಫರ್ ಶರೀಫ್ ಅವರ ನಿಜವಾದ ದುಃಖ ಏನು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸ್ವಜನಪಕ್ಷಪಾತವನ್ನು ಮುಂದಿಟ್ಟುಕೊಂಡೇ ಎಲ್ಲ ನಾಯಕರು ಇದೀಗ ಸಿದ್ದರಾಮಯ್ಯ ಅವರ ವಿರುದ್ಧ ನಿಂತಿದ್ದಾರೆ. ಅಧಿಕಾರ ಸಿಗದವರೆಲ್ಲ ಮುಂದೆ ನಿಂತು ಮುಖ್ಯಮಂತ್ರಿಯನ್ನು ಬದಲಿಸಬೇಕು ಎಂದು ಹೊರಟರೆ ಸರಕಾರದಲ್ಲಿರುವ ಅಷ್ಟೂ ಶಾಸಕರಿಗೆ ಅಧಿಕಾರವನ್ನು ನೀಡಬೇಕಾಗುತ್ತದೆ. ಇದು ಸಾಧ್ಯವಾಗುವ ಮಾತೇ? ಒಬ್ಬರು ಅಧಿಕಾರ ಪಡೆದುಕೊಳ್ಳುವಾಗ ಇನ್ನೊಬ್ಬರು ಅಧಿಕಾರ ಕಳೆದುಕೊಳ್ಳಲೇಬೇಕು. ಸುಮಾರು ಮೂರು ವರ್ಷಗಳ ಕಾಲ ಅಂಬರೀಷ್, ಶ್ರೀನಿವಾಸ ಪ್ರಸಾದ್, ವಿನಯಕುಮಾರ್ ಸೊರಕೆ ಮೊದಲಾದವರೆಲ್ಲ ಅಧಿಕಾರವನ್ನು ಅನುಭವಿಸುತ್ತ ಕಾಲ ಕಳೆಯುತ್ತಿರುವಾಗ ಉಳಿದ ಅಧಿಕಾರರಹಿತ ಶಾಸಕರು ಸಹಕರಿಸಿರಲಿಲ್ಲವೇ? ಇದೀಗ ಕೆಲವು ಮಾನದಂಡಗಳನ್ನು ಮುಂದಿಟ್ಟು ಸಂಪುಟವನ್ನು ಪುನಾರಚಿಸಿದಾಗ ಪಕ್ಷದೊಳಗಿರುವ ನಾಯಕರಿಗೇ ಸಿದ್ದರಾಮಯ್ಯ ಬೇಡವಾದದ್ದು ಹೇಗೆ?
ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೇರಿಸಿದ್ದು ಅಂಬರೀಷ್ ಅಥವಾ ಶ್ರೀನಿವಾಸ ಪ್ರಸಾದ್ ಅಲ್ಲ. ಈ ನಾಡಿನ ಜನತೆ. ಅಂಬರೀಷ್ ಅಥವಾ ಜಾರಕಿಹೊಳಿಯಂತಹ ನಾಯಕರಿಗೆ ಅಧಿಕಾರ ತಪ್ಪಿತು ಎಂದು ಸಿದ್ದರಾಮಯ್ಯ ಅವರನ್ನು ಕೆಳಗಿಳಿಯಲು ಒತ್ತಾಯಿಸುವುದು ಪ್ರಜಾಸತ್ತೆಗೆ ಮಾಡುವ ಅವಮಾನ. ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ನಿಜಕ್ಕೂ ವಿಫಲರಾಗಿದ್ದಾರೆ ಎಂದಾದರೆ ಅದನ್ನು ಜನರ ಮುಂದಿಡಲಿ. ಅದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಒತ್ತಾಯಿಸುವುದು ಸೂಕ್ತ. ಇದೀಗ ಹೊಸ ಸಂಪುಟ ರಚನೆಯಾಗಿದೆ. ಇವರು ಮುಂದಿನ ಎರಡು ವರ್ಷಗಳಲ್ಲಿ ರಾಜ್ಯವನ್ನು ಯಾವ ರೀತಿ ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಿದ ಬಳಿಕ ಸಿದ್ದರಾಮಯ್ಯ ವಿರುದ್ಧವಾಗಲಿ, ಸಚಿವರ ವಿರುದ್ಧವಾಗಲಿ ಹೇಳಿಕೆ ನೀಡುವುದು ಸೂಕ್ತ.
ಇದೀಗ ಮುಂಗಾರು ರಾಜ್ಯಕ್ಕೆ ಆಗಮಿಸಿದೆ. ಸಮಾಧಾನಕರ ರೀತಿಯಲ್ಲಿ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹೈಕಮಾಂಡ್‌ನ ಮನೆಯಲ್ಲಿ ಝಂಡಾ ಹೂಡುವುದನ್ನು ಬಿಟ್ಟು ರೈತರು, ಜನಸಾಮಾನ್ಯರ ಬಳಿಗೆ ಸಾಗಬೇಕಾಗಿದೆ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸನ್ನು ಬುಡಸಮೇತ ಕಿತ್ತೆಸೆದು, ಹೊಸಬೆಳೆಗಾಗಿ ಜನರು ಹುಡುಕಾಡುವ ಸಂದರ್ಭ ಎದುರಾಗಬಹುದು.