ಎನ್‌ಎಸ್‌ಜಿ ಸದಸ್ಯತ್ವ: ವಸ್ತುನಿಷ್ಠ ವಿಶ್ಲೇಷಣೆ ನಡೆಸಿ
Update: 2016-06-23 23:53 IST
ತಾಷ್ಕೆಂಟ್, ಜೂ. 23: ಪರಮಾಣು ಪೂರೈಕೆದಾರರ ಗುಂಪಿ(ಎನ್‌ಎಸ್‌ಜಿ)ನ ಸದಸ್ಯತ್ವಕ್ಕಾಗಿ ಭಾರತ ನಡೆಸುತ್ತಿರುವ ಪ್ರಯತ್ನದ ನ್ಯಾಯೋಚಿತ ಹಾಗೂ ವಸ್ತುನಿಷ್ಠ ವಿಶ್ಲೇಷಣೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚೀನಾವನ್ನು ಒತ್ತಾಯಿಸಿದರು.
48 ದೇಶಗಳ ಒಕ್ಕೂಟಕ್ಕೆ ಭಾರತದ ಸೇರ್ಪಡೆಯನ್ನು ಹೆಚ್ಚೆಚ್ಚು ದೇಶಗಳು ಅನುಮೋದಿಸುತ್ತಿದ್ದು, ‘‘ಒಮ್ಮತಕ್ಕೆ ಬರುವಂತೆ’’ಯೂ ಪ್ರಧಾನಿ ಚೀನಾವನ್ನು ಕೋರಿದರು.
ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಇಲ್ಲಿ ಭೇಟಿಯಾದರು. ಗುರುವಾರ ಸಿಯೋಲ್‌ನಲ್ಲಿ ಎನ್‌ಎಸ್‌ಜಿ ಸದಸ್ಯರ ಶೃಂಗಸಮ್ಮೇಳನ ನಡೆಯಲಿದ್ದು, ಇಲ್ಲಿ ಭಾರತದ ಸೇರ್ಪಡೆಯ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವ ನಿರೀಕ್ಷೆಯಿದೆ.
ಇಲ್ಲಿ ನಡೆಯುತ್ತಿರುವ ಶಾಂೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಮ್ಮೇಳನದ ನೇಪಥ್ಯದಲ್ಲಿ ಮೋದಿ ಮತ್ತು ಕ್ಸಿ ನಡುವಿನ ಭೇಟಿ ನಡೆದಿದೆ. ಎನ್‌ಎಸ್‌ಜಿ ಸದಸ್ಯತ್ವಕ್ಕಾಗಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಅರ್ಜಿ ಸಲ್ಲಿಸಿವೆ.