ಐರೋಪ್ಯ ಒಕ್ಕೂಟದಲ್ಲೇ ಉಳಿಯಲು ತುರ್ತು ಮಾತುಕತೆ: ಸ್ಕಾಟ್‌ಲ್ಯಾಂಡ್

Update: 2016-06-25 18:27 GMT

ಸ್ಕಾಟ್‌ಲ್ಯಾಂಡ್ ಎಡಿನ್‌ಬರ್ಗ್, ಜೂ. 25: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ನಿರ್ಧಾರ ತೆಗೆದುಕೊಂಡಿರುವ ಬೆನ್ನಿಗೇ, ಒಕ್ಕೂಟದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅದರೊಂದಿಗೆ ತುರ್ತು ಮಾತುಕತೆ ನಡೆಸಲು ಸ್ಕಾಟ್‌ಲ್ಯಾಂಡ್ ಬಯಸಿದೆ ಎಂದು ಸ್ಕಾಟ್‌ಲ್ಯಾಂಡ್‌ನ ಫಸ್ಟ್ ಮಿನಿಸ್ಟರ್ ನಿಕೋಲಾ ಸ್ಟರ್ಜನ್ ಇಂದು ಹೇಳಿದ್ದಾರೆ. ತನ್ನ ಸಚಿವ ಸಂಪುಟದ ತುರ್ತು ಸಭೆಯ ಬಳಿಕ ಮಾತನಾಡಿದ ಸ್ಟರ್ಜನ್, ಐರೋಪ್ಯ ಒಕ್ಕೂಟದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸ್ಕಾಟ್‌ಲ್ಯಾಂಡ್ ಒಕ್ಕೂಟದ ಸಂಸ್ಥೆಗಳು ಮತ್ತು ಇತರ ಸದಸ್ಯ ದೇಶಗಳೊಂದಿಗೆ ತುರ್ತಾಗಿ ಮಾತುಕತೆಗಳನ್ನು ನಡೆಸಬೇಕು ಎಂಬ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಹೇಳಿದರು. ಗುರುವಾರ ನಡೆದ ಜನಮತಗಣನೆಯಲ್ಲಿ ಒಟ್ಟಾರೆಯಾಗಿ ಒಕ್ಕೂಟದಿಂದ ಹೊರಬರಲು ಬ್ರಿಟನ್ 52-48 ಶೇಕಡಾ ಅಂತರದಿಂದ ನಿರ್ಧರಿಸಿದೆ. ಆದರೆ, ಬ್ರಿಟನ್‌ನ ಘಟಕವಾಗಿರುವ ಸ್ಕಾಟ್‌ಲ್ಯಾಂಡ್ 62-38 ಶೇಕಡಾ ಅಂತರದಿಂದ ಐರೋಪ್ಯ ಒಕ್ಕೂಟದಲ್ಲೇ ಉಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ. ‘ಬ್ರೆಕ್ಸಿಟ್’ ಜನಮತಗಣನೆಯ ಫಲಿತಾಂಶವು ಸ್ಕಾಟ್‌ಲ್ಯಾಂಡ್‌ನ ಸ್ವಾತಂತ್ರಕ್ಕೆ ಹೊಸದಾಗಿ ಜನಮತಗಣನೆ ನಡೆಯುವ ಅವಕಾಶವನ್ನು ಉಜ್ವಲಗೊಳಿಸಿದೆ ಎಂದು ಸ್ಟರ್ಜನ್ ಶುಕ್ರವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News