×
Ad

ಹಾರುತ್ತಿರುವ ಹಕ್ಕಿಗಾಗಿ ಕೈಯಲ್ಲಿದ್ದ ಹಕ್ಕಿಯನ್ನು ಚೆಲ್ಲಿದ ಮೋದಿ

Update: 2016-06-27 00:05 IST

ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯಲು ಹೋಗಿ ಮೋದಿ ಎಂಬ ಬೆಕ್ಕು ನಾಲಗೆ ಸುಟ್ಟುಕೊಂಡಿದೆ. ಒಂದು ರೀತಿಯಲ್ಲಿ ಕೈಯಲ್ಲಿರುವ ಹಕ್ಕಿಯನ್ನು ಹಾರಲು ಬಿಟ್ಟು, ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಯನ್ನು ಹಿಡಿಯಲು ಹೋಗಿ ಮುಖಭಂಗಕ್ಕೀಡಾದವನ ಸ್ಥಿತಿ ಭಾರತದ್ದಾಗಿದೆ. ಈ ಮುಖಭಂಗದ ಸರ್ವ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಿಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿರುವುದು ಇನ್ನೊಂದು ವಿಪರ್ಯಾಸ. ಯಾಕೆಂದರೆ, ದೇಶದಲ್ಲಿ ವಿದೇಶಾಂಗ ಸಚಿವ ಅಥವಾ ದೇಶಕ್ಕೊಂದು ವಿದೇಶಾಂಗ ನೀತಿ ಇದೆ ಎನ್ನುವ ವಿಷಯವೇ ಸದ್ಯಕ್ಕೆ ನಮಗೆ ಮರೆತುಹೋಗಿದೆ. ವಿದೇಶಾಂಗ ನೀತಿಯನ್ನು ಕಾರ್ಪೊರೇಟ್ ಶಕ್ತಿಗಳು ನಿರ್ವಹಿಸುತ್ತಿದ್ದರೆ, ವಿದೇಶಾಂಗ ಖಾತೆಯನ್ನು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಿಕೊಂಡಿದ್ದಾರೆ. ಭಾರತದ ತಳಸ್ತರದ ಅಭಿವೃದ್ಧಿಯ ಕುರಿತಂತೆ ಯಾವ ನಂಬಿಕೆಯನ್ನೂ ಹೊಂದಿಲ್ಲದ ಮೋದಿ, ಎನ್‌ಎಸ್‌ಜಿಯಿಂದ ಭಾರತದ ವರ್ಚಸ್ಸು, ಮುಖ್ಯವಾಗಿ ತನ್ನ ವರ್ಚಸ್ಸು ಬೆಳೆಯುತ್ತದೆ ಎಂಬ ಭ್ರಮೆಯಲ್ಲಿ ದೇಶದಿಂದ ಹಾರುತ್ತಿದ್ದವರು ಇದೀಗ ರೆಕ್ಕೆ ಮುರಿದ ಹದ್ದಿನಂತಾಗಿದ್ದಾರೆ. ಕೇವಲ ವಿರೋಧ ಪಕ್ಷಗಳ ಟೀಕೆಗಳನ್ನು ಮಾತ್ರವಲ್ಲ, ದೇಶದ ಅರ್ಥಶಾಸ್ತ್ರಜ್ಞರು, ರಾಜ್ಯಶಾಸ್ತ್ರಜ್ಞರ ಟೀಕೆಯನ್ನೂ ಅವರು ಎದುರಿಸಬೇಕಾಗಿದೆ. ಜೊತೆಗೆ ಬಿಜೆಪಿಯೊಳಗಿರುವ ಹಿರಿಯರೂ ಮೋದಿಯ ಮೂರ್ಖ ನಡೆಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತ ಎನ್‌ಎಸ್‌ಜಿಗೆ ಪ್ರಯತ್ನಿಸಿದೆಯಾದರೂ ಅದನ್ನು ಯಾವತ್ತೂ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿರಲಿಲ್ಲ. ಭಾರತದ ಪಾಲಿಗೆ ಎನ್‌ಎಸ್‌ಜಿ ಯಾವತ್ತೂ ಅನಿವಾರ್ಯ ಮನೆಯೂ ಆಗಿರಲಿಲ್ಲ. ಹಾಗಿದ್ದರೆ ಎನ್‌ಎಸ್‌ಜಿ ವಿಷಯದಲ್ಲಿ ಮೋದಿಯನ್ನು ಹಾದಿ ತಪ್ಪಿಸಿದವರು ಯಾರು? ಯಾವುದೇ ಅಂತಾರಾಷ್ಟ್ರೀಯ ನೀತಿಯ ಕುರಿತಂತೆ ಮುತ್ಸದ್ದಿಯನ್ನು ಹೊಂದಿರುವ ಅಧಿಕಾರಿ ಮೋದಿಗೆ ಎನ್‌ಎಸ್‌ಜಿಯನ್ನು ಬೆಂಬತ್ತುವ ಸಲಹೆಯನ್ನು ನೀಡಲಾರ. ಒಂದು ರೀತಿಯಲ್ಲಿ ಮೋದಿ ಸರಕಾರವನ್ನು ಕಾರ್ಪೊರೇಟ್ ಶಕ್ತಿಗಳ ಮೂಲಕ ಮೋಸಗೊಳಿಸಲಾಗಿದೆ. ಅಮೆರಿಕದ ಬೃಹತ್ ಕಂಪೆನಿಗಳೂ ಇದರ ಹಿಂದಿವೆ. ಈ ಹಿನ್ನೆಲೆಯಲ್ಲಿಯೇ ಎನ್‌ಎಸ್‌ಜಿಯ ಬೆನ್ನಿಗೆ ಬಿದ್ದು ಮೋದಿ ಹಾಕಿರುವ ಸಹಿಗಳೆಲ್ಲ ನೀರ ಮೇಲೆ ನಡೆಸಿದ ಹೋಮವಾಯಿತು. ಇದೇ ಸಂದರ್ಭದಲ್ಲಿ, ಎನ್‌ಎಸ್‌ಜಿ ಕುರಿತ ಭಾರತದ ತವಕವನ್ನು ಅಮೆರಿಕವೂ ಸರಿಯಾಗಿ ಬಳಸಿಕೊಂಡಿತು. ಮೂಗಿನ ತುದಿಗೆ ಬೆಣ್ಣೆ ಹಚ್ಚಿ, ಕಡೆಗೂ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿತು. ವಿಪರ್ಯಾಸವೆಂದರೆ, ಅಂತಿಮವಾಗಿ ಇದು ಇತರ ದೇಶಗಳ ಜೊತೆಗೆ ಅದರಲ್ಲೂ ಮುಖ್ಯವಾಗಿ ಚೀನಾ ಜೊತೆಗಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿತು. ಎನ್‌ಎಸ್‌ಜಿ ಸದಸ್ಯತ್ವಕ್ಕೆ ಸಂಬಂಧಪಟ್ಟಂತೆ ಚೀನಾ ಭಾರತದ ವಿರುದ್ಧವಿದೆ ಎನ್ನುವುದನ್ನೇ ಅಂತಾರಾಷ್ಟ್ರೀಯ ಸಂಬಂಧವನ್ನು ನಿರ್ವಹಿಸುವ ಮುಖ್ಯ ವಿಷಯವನ್ನಾಗಿಸಿದ್ದು ಅಮೆರಿಕ. ಚೀನಾದಿಂದ ಅತಿ ದೊಡ್ಡದನ್ನು ನಿರೀಕ್ಷಿಸಲು ಹೋಗಿ, ಮೂರ್ಖನಂತಾಗಿ ವಿಶ್ವದ ಮುಂದೆ ನಗೆಪಾಟಲಿಗೀಡಾಯಿತು. ಇದೇ ಸಂದರ್ಭದಲ್ಲಿ, ಭಾರತದ ಪರವಾಗಿದ್ದೇವೆ ಎನ್ನುವ ಕೆಲ ದೇಶಗಳ ಹೇಳಿಕೆಗಳೆಲ್ಲ ಉಲ್ಟಾ ಹೊಡೆದವು. ಇದೀಗ ಮುಖಭಂಗದ ಜೊತೆಗೆ ಮೋದಿ ಒಬ್ಬಂಟಿಯಾಗಿದ್ದಾರೆ. ಅವರ ಸ್ಥಿತಿಯ ಪಾಲನ್ನು ಹಂಚಿಕೊಳ್ಳಲು ಸ್ವತಃ ಬಿಜೆಪಿಯ ನಾಯಕರೇ ಸಿದ್ಧರಿಲ್ಲ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News