ತಣ್ಣಗಾದ ಭಿನ್ನಮತ
ಈ ದೇಶದಲ್ಲಿ ಅದರಲ್ಲೂ ಕಾಂಗ್ರೆಸ್, ಜನತಾದಳಗಳಂತಹ ಪಕ್ಷಗಳಲ್ಲಿ ಭಿನ್ನಮತ ಎನ್ನುವುದು ಎಂದಿಗೂ ಸೈದ್ಧಾಂತಿಕವಾಗಿರುವುದಿಲ್ಲ. ಎಲ್ಲ ಭಿನ್ನಾಭಿಪ್ರಾಯಗಳೂ ವ್ಯಕ್ತಿ ಕೇಂದ್ರಿತ ಮತ್ತು ಸ್ವಾರ್ಥ ಕೇಂದ್ರಿತವಾಗಿರುತ್ತವೆೆ. ಅಕಾರಕ್ಕಾಗಿ ಕಚ್ಚಾಡುವ ಗುಂಪುಗಳು ಇದ್ದೇ ಇರುತ್ತವೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ನಿರಂತರವಾಗಿ ಹಿನ್ನಡೆ ಉಂಟಾಗುತ್ತದೆ. ಅಕಾರ ಎನ್ನುವುದು ಹಣ ಮಾಡಿಕೊಳ್ಳುವ ದಂಧೆಯಾಗಿ ಮಾರ್ಪಟ್ಟಿರುವುದರಿಂದ ಇಂತಹ ಗೊಂದಲಗಳು ಆಗಾಗ ಉಂಟಾಗುತ್ತವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟ ಪುನಾರಚನೆಗೆ ಮುಂದಾದಾಗ ಅವರ ವಿರುದ್ಧ ಭುಗಿಲೆದ್ದ ಭಿನ್ನಮತಕ್ಕೆ ಯಾವುದೇ ತಾತ್ವಿಕ ತಳಹದಿ ಇರಲಿಲ್ಲ. ಮಂತ್ರಿ ಸ್ಥಾನ ಕಳೆದುಕೊಂಡ ಶ್ರೀನಿವಾಸ ಪ್ರಸಾದ್, ಖಮರುಲ್ ಇಸ್ಲಾಂ, ಮಂತ್ರಿಯಾಗಲು ಹಾತೊರೆಯುತ್ತಿರುವ ಮಾಲಕರೆಡ್ಡಿ, ಮಾಲಿಕಯ್ಯ ಗುತ್ತೇದಾರ್ ಅಂತಹವರ ಬಂಡಾಯಕ್ಕೆ ಯಾವುದೇ ತಾತ್ವಿಕ ಕಾರಣಗಳಿಲ್ಲ. ಖುರ್ಚಿ ಸಿಕ್ಕರೆ ತಣ್ಣಗಾಗುವ ಈ ಬಂಡಾಯದ ಚಾಳಿಯನ್ನು ಅರಿತ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರು ಇವರ ಭಿನ್ನಮತದ ಉತ್ಸಾಹಕ್ಕೆ ಪ್ರೋತ್ಸಾಹ ನೀಡಲಿಲ್ಲ. ಎಸ್.ಎಂ.ಕೃಷ್ಣ ಅವರ ಹೆಗಲ ಮೇಲೆ ಬಂದೂಕಿಟ್ಟು ಸಿದ್ದರಾಮಯ್ಯ ಅವರನ್ನು ಉಡಾಯಿಸಬೇಕೆಂದು ಮಸಲತ್ತು ನಡೆಸಿದ್ದ ವಯೋವೃದ್ಧ ರಾಜಕಾರಣಿಗಳಿಗೆ ನಿರಾಶೆಯಾದಂತೆ ಕಾಣುತ್ತದೆ. ತನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದೆಂದು ಹೊರಟಿದ್ದ ಇವರ ಬಲೆಗೆ ಕೃಷ್ಣ ಬಿದ್ದಿಲ್ಲ. ಶ್ರೀನಿವಾಸ್ ಪ್ರಸಾದ್, ಮಾಲಕರೆಡ್ಡಿ, ಖಮರುಲ್ ಇಸ್ಲಾಂ, ಮಾಲಿಕಯ್ಯ ಗುತ್ತೇದಾರ್ ಇವರೆಲ್ಲ ಬದುಕಿನಲ್ಲಿ ಸಾಕಷ್ಟು ಅಕಾರವನ್ನು ಅನುಭವಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ವಿಧಾನಸಭೆಯನ್ನು ಪ್ರವೇಶಿಸುತ್ತಲೇ ಇದ್ದಾರೆ. ಒಂದಲ್ಲ ಒಂದು ಬಾರಿ ಮಂತ್ರಿಯಾಗಿ ಗೂಟದ ಕಾರಿನಲ್ಲಿ ಓಡಾಡಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರಂತಹವರು ಕಳೆದ ವಾರದವರೆಗೂ ಸಚಿವರಾಗಿದ್ದರು. ಈಗ ಅವರಿಗೆ ಸಾಕಷ್ಟು ವಯಸ್ಸಾಗಿದೆ. ಆರೋಗ್ಯವೂ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ವಿಪರೀತ ಒತ್ತಡದ ಜವಾಬ್ಧಾರಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಇಂತಹ ಸ್ಥಿತಿಯಲ್ಲಿ ತಾನಾಗಿಯೇ ಅಕಾರದಿಂದ ದೂರ ಸರಿದು ಯುವಕರಿಗೆ ಅಕಾರ ನೀಡಿ ಮಾರ್ಗದರ್ಶನ ನೀಡಿದ್ದರೆ ಅವರ ದೊಡ್ಡಸ್ಥಿಕೆಯನ್ನು ರಾಜ್ಯದ ಜನ ಮೆಚ್ಚಿಕೊಳ್ಳುತ್ತಿದ್ದರು. ರಾಜಕಾರಣದಲ್ಲಿ ಈಗ ಹೊಸ ಪೀಳಿಗೆ ಪ್ರವೇಶಿಸಿದೆ. ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಅನುಭವದ ಕೊರತೆ ಎದ್ದುಕಾಣುತ್ತದೆ. ಶ್ರೀನಿವಾಸ ಪ್ರಸಾದ್ ಅವರಂತಹ ಅನುಭವಿ ರಾಜಕಾರಣಿ ಇಂತಹ ಯುವಕರಿಗೆ ತರಬೇತಿ ನೀಡಿ ಈ ನಾಡನ್ನು ಮುನ್ನೆಡೆಸಿಕೊಂಡು ಹೋಗಲು ಹೊಸ ನಾಯಕತ್ವವನ್ನು ಸಿದ್ಧಪಡಿಸಬೇಕಾಗಿದೆ. ಆದರೆ, ಅವರು ತಾವೇ ಅಕಾರಕ್ಕಾಗಿ ತಾನೇ ರಂಪಾಟ ನಡೆಸಿರುವುದು ಸರಿಯಲ್ಲ. ಸರಕಾರ ಯಾವುದೇ ಇರಲಿ, ಎಲ್ಲ ಶಾಸಕರೂ ಮಂತ್ರಿಗಳಾಗಲು ಸಾಧ್ಯವಿಲ್ಲ. ಎಲ್ಲ ಮಂತ್ರಿಗಳೂ ಮುಖ್ಯಮಂತ್ರಿಗಳಾಗಲು ಸಾಧ್ಯವಿಲ್ಲ. ಈ ವಾಸ್ತವವನ್ನು ಅರಿತು ಘನತೆ ಮತ್ತು ಗೌರವದಿಂದ ನಡೆದುಕೊಂಡರೆ ಹಿರಿಯ ರಾಜಕಾರಣಿಗಳಿಗೆ ಶೋಭೆ ತರುತ್ತದೆ. ಅದನ್ನು ಬಿಟ್ಟು ಖುರ್ಚಿಗಾಗಿ ಪಕ್ಷದ ಶಿಸ್ತನ್ನು ಉಲ್ಲಂಸಿ ಪತ್ರಿಕಾಗೋಷ್ಠಿ ನಡೆಸುವುದು, ಗುಂಪು ರಾಜಕಾರಣ ಮಾಡುವುದು ಸರಿಯಲ್ಲ. ಅಂಬರೀಷ್ ಅವರಂತಹವರು ಕಳೆದ ಮೂರು ವರ್ಷಗಳ ತಮ್ಮ ಅಕಾರಾವಯ ಸಾಧನೆ ಏನೆಂಬುದರ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ.
ಸಂಪುಟ ಪುನಾರಚನೆಯಲ್ಲಿ ಅಕಾರವನ್ನು ಕಳೆದುಕೊಂಡ ಎಲ್ಲ ಸಚಿವರು ಇವರಂತೆ ವರ್ತಿಸಲಿಲ್ಲ. ತೀರ್ಥಹಳ್ಳಿ ಶಾಸಕ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮುಖ್ಯಮಂತ್ರಿಗಳ ತೀರ್ಮಾನವನ್ನು ಒಪ್ಪಿ ತಮ್ಮ ಬದಲಿಗೆ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಸುವ ಕಾಗೋಡು ತಿಮ್ಮಪ್ಪನವರಿಗೆ ಸಕಲ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. ಅಕಾರ ಎಂಬುದು ಶಾಶ್ವತ ಅಲ್ಲ ಎಂದು ಹೇಳಿಕೆ ನೀಡಿದರು. ಉಳಿದ ಅತೃಪ್ತ ಸಚಿವರು ಅವರಂತೆಯೇ ನಡೆದುಕೊಂಡಿದ್ದರೆ ಸಮಾಜದ ಗೌರವಕ್ಕೆ ಪಾತ್ರರಾಗುತ್ತಿದ್ದರು. ಶ್ರೀನಿವಾಸ ಪ್ರಸಾದ್, ಖಮರುಲ್ ಇಸ್ಲಾಂ, ಅಂಬರೀಷ್, ಮಾಲಕರೆಡ್ಡಿ ಸಾಕಷ್ಟು ಅನುಭವ ಹೊಂದಿದ ಹಿರಿಯ ರಾಜಕಾರಣಿಗಳಾಗಿದ್ದಾರೆ. ಈ ನಾಡಿಗೆ ಸಾಕಷ್ಟು ಸೇವೆಯನ್ನೂ ಸಲ್ಲಿಸಿದ್ದಾರೆ. ಈಗ ಸೇವೆ ಮಾಡುವ ಅಕಾರವನ್ನು ಹೊಸ ಪೀಳಿಗೆಗೆ ಬಿಟ್ಟುಕೊಡಬೇಕಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಶೇ.60ಕ್ಕಿಂತ ಹೆಚ್ಚು ಯುವಕರಿದ್ದಾರೆ. ಅವರನ್ನು ನಾಯಕತ್ವಕ್ಕೆ ತರಬೇತಿಗೊಳಿಸುವ ಜವಾಬ್ದಾರಿ ಹಿರಿಯ ರಾಜಕಾರಣಿಗಳ ಮೇಲಿದೆ. ಅದನ್ನು ಅರ್ಥಮಾಡಿಕೊಂಡು ಭಿನ್ನಮತೀಯ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿತ್ತು. ಆದರೆ ಇವರು ಅದನ್ನು ಮುಂದುವರಿಸಿರುವುದರಿಂದ ಕೃಷ್ಣ ಅಂತಹವರಿಂದ ತಾತ್ಸಾರಕ್ಕೆ ಒಳಗಾಗಿದ್ದಾರೆ. ಈ ಅತೃಪ್ತ ರಾಜಕೀಯ ಧುರೀಣರ ಮಸಲತ್ತು ಏನೆಂಬುದು ಕೃಷ್ಣ ಅವರಿಗೆ ಗೊತ್ತಿದೆ. ಅಂತಲೇ ಅವರು ಇವರ ಬುಡಮೇಲು ಕೃತ್ಯಗಳಿಗೆ ಪ್ರೋತ್ಸಾಹ ನೀಡಲಿಲ್ಲ. ದೇಶದ ಜಾತ್ಯತೀತ ಜನತಂತ್ರ ವ್ಯವಸ್ಥೆ ಬಿಕ್ಕಟ್ಟಿನಲ್ಲಿ ಇರುವ ಈ ಸನ್ನಿವೇಶದಲ್ಲಿ ಇಂತಹ ಹಿರಿಯ ರಾಜಕಾರಣಿಗಳ ವರ್ತನೆಯನ್ನು ಯಾರೂ ಸಮರ್ಥಿಸುವುದಿಲ್ಲ. ಅಂತಲೇ ಈ ವಯಸ್ಸಿನಲ್ಲಿ ಬಂಡಾಯವೇಳಲು ಹೋಗಿ ಅವರು ನಿರಾಶರಾಗಿದ್ದಾರೆ. ಇನ್ನಾದರೂ ಈ ಭಿನ್ನಮತೀಯ ಚಟುವಟಿಕೆಗಳನ್ನು ಬಿಟ್ಟು ಮುಂದಿನ ಎರಡು ವರ್ಷಗಳ ಅವಗೆ ರಾಜ್ಯ ಸರಕಾರ ಸುಗಮವಾಗಿ ನಡೆದುಕೊಂಡು ಹೋಗಲು ಅವರು ಸಹಕಾರ ನೀಡಬೇಕಾಗಿದೆ. ಇಲ್ಲದಿದ್ದರೆ ಜನತೆಯ ತಿರಸ್ಕಾರಕ್ಕೆ ಗುರಿಯಾಗಬೇಕಾಗುತ್ತದೆ. ಶ್ರೀನಿವಾಸ ಪ್ರಸಾದ್ ಅವರು ಈ ಹಿಂದೆ ಅಕಾರಕ್ಕಾಗಿ ಬೇರೆ ಬೇರೆ ಪಕ್ಷಗಳಿಗೆ ಹೋಗಿ ಬಂದವರು. ಖಮರುಲ್ ಇಸ್ಲಾಂ ಅವರು ಕೂಡಾ ಮೂಲ ಕಾಂಗ್ರೆಸಿಗರಲ್ಲ. ಮಾಲಕರೆಡ್ಡಿಯಂತವರು ಮುಂಚಿನಿಂದಲೂ ಕಾಂಗ್ರೆಸ್‌ನಲ್ಲಿದ್ದರೂ ನಿರಂತರವಾಗಿ ಅಕಾರವನ್ನು ಅನುಭವಿಸಿದ್ದಾರೆ. ಈಗ ತಾನಾಗಿಯೇ ಅಕಾರ ಸಾಕೆಂದು ಇವರು ಹೇಳಬೇಕಾಗಿದೆ. ಇಲ್ಲವಾದರೆ ಇವರ ಭಿನ್ನಮತ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.