ಮಲಾಲಾ ಈಗ ಭಾರೀ ಶ್ರೀಮಂತೆ!
ನೊಬೆಲ್ ಪುರಸ್ಕೃತೆ ಮಲಾಲಾ ಯುಸಫ್ಜೈ ಮತ್ತು ಆಕೆಯ ಕುಟುಂಬ ಈಗ ಲಕ್ಷಾಧಿಪತಿಯಾಗಿದೆ. ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಆಳ್ವಿಕೆಯಲ್ಲಿ ನಡೆಸಿದ ಜೀವನದ ಬಗ್ಗೆ ವಿವರಿಸಿದ ಪುಸ್ತಕಗಳಿಂದ ಬಂದ ಆದಾಯ ಮತ್ತು ಜಾಗತಿಕವಾಗಿ ನೀಡಿದ ಭಾಷಣಗಳು ಆಕೆಯನ್ನು ಶ್ರೀಮಂತವಾಗಿಸಿದೆ. 18 ವರ್ಷದ ಪಾಕಿಸ್ತಾನೀ ಯುವತಿ ತಾಲಿಬಾನ್ ತಲೆಗೆ ಹೊಡೆದ ಗುಂಡಿನಿಂದ ಬದುಕುಳಿದು ತನ್ನ ಸ್ವಾತ್ ಕಣಿವೆಯ ಜೀವನ ಮತ್ತು ತಾಲಿಬಾನ್ ವಿರುದ್ಧ ಹೋರಾಡಿ ಬದುಕಿದ ಕತೆಯನ್ನು ಐ ಆಮ್ ಮಲಾಲಾಎನ್ನುವ ಪುಸ್ತಕದಲ್ಲಿ ಸಂಡೇ ಟೈಮ್ಸ್‌ಪತ್ರಕರ್ತರಾದ ಕ್ರಿಸ್ಟಿನಾ ಲ್ಯಾಂಬ್ ಜೊತೆಗೂಡಿ ಬರೆದಿದ್ದಾರೆ.
ಆಕೆಯ ಜೀವನದ ಕತೆಯ ಹಕ್ಕುಗಳ ರಕ್ಷಣೆಗಾಗಿ ಸ್ಥಾಪಿಸಲಾದ ಕಂಪನಿಯ ಖಾತೆಗೆ 2015 ಆಗಸ್ಟಲ್ಲಿ 2.2 ಮಿಲಿಯನ್ ಪೌಂಡುಗಳು ಜಮೆಯಾಗಿವೆ ಮತ್ತು ಆಕೆಯ ಪುಸ್ತಕ 1.1 ಮಿಲಿಯನ್ ಪೌಂಡ್ ಬೆಲೆಬಾಳುತ್ತಿದೆ. ಮಲಾಲಾ, ಆಕೆಯ ತಂದೆ ಜಿಯಾವುದ್ದೀನ್ ಯುಸಫ್ಜೈ ಮತ್ತು ತಾಯಿ ತೂರ್ ಪೆಕೈ ಅವರು ಸಲರ್ಜೈ ಲಿಮಿಟೆಡ್ ಎನ್ನುವ ಈ ಕಂಪನಿಯ ಜಂಟಿ ಷೇರುದಾರರು.
ಮಲಾಲಾ ಕುಟುಂಬ ಈಗ ಬರ್ಮಿಂಗ್ಹಾಮ್‌ನಲ್ಲಿ ನೆಲೆಸಿದೆ. 2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅತೀ ಚಿಕ್ಕ ವಯಸ್ಸಿನವರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲಾಲಾ ಎಜ್ಬಸ್ಟನ್ ಹೈಸ್ಕೂಲಲ್ಲಿ ಓದುತ್ತಿದ್ದಾರೆ. ಆಕೆಯ ಆತ್ಮಕತೆಯಲ್ಲಿ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಆಡಳಿತದಲ್ಲಿ ಜೀವನ ನಡೆಸಿರುವುದು ಮತ್ತು ಶಾಲೆಯಿಂದ ಸ್ನೇಹಿತರ ಜೊತೆಗೆ ಮನೆಗೆ ಹೋಗುತ್ತಿದ್ದ ದಾರಿಯಲ್ಲಿ ಗುಂಡಿನ ದಾಳಿಗೆ ತುತ್ತಾಗಿರುವ ವಿವರಗಳಿವೆ.ವೆಡನ್ಫೆಲ್ಡ್ ಆಂಡ್ ನಿಕೋಲ್ಸನ್ ಸಂಸ್ಥೆಯ ಜೊತೆಗೆ 2 ಮಿಲಿಯನ್ ಪೌಂಡುಗಳ ಒಪ್ಪಂದದಲ್ಲಿ ಬರೆದ ಈ ಆತ್ಮಕತೆ 2013 ಅಕ್ಟೋಬರಲ್ಲಿ ಪ್ರಕಟವಾಗಿದೆ. ಈ ಪುಸ್ತಕವು ಜಾಗತಿಕವಾಗಿ 1.8 ಮಿಲಿಯ ಪ್ರತಿಗಳು ಮಾರಾಟವಾಗಿವೆ ಎಂದು ನೆಲ್ಸನ್ ಬುಕ್ ರೀಸರ್ಚ್ ಹೇಳಿದೆ. ಅದರಲ್ಲಿ ಇಂಗ್ಲೆಂಡಿನಲ್ಲಿ 2,87,000 ಪ್ರತಿಗಳು ಮಾರಾಟವಾಗಿ 2.2 ಮಿಲಿಯನ್ ಪೌಂಡುಗಳ ಆದಾಯ ತಂದಿದೆ. ಅಮೆರಿಕ ಮೂಲದ ಪಾಲಿಸಿ ಸ್ಟಡೀಸ್ ಪ್ರಕಾರ ಮಲಾಲಾ ಅತೀ ಹೆಚ್ಚು ಸಂಪಾದನೆ ಮಾಡುವ ನೊಬೆಲ್ ಪ್ರಶಸ್ತಿ ವಿಜೇತೆ. ಭಾಷಣವೊಂದಕ್ಕೆ ಅವರು 1,14,00 ಪೌಂಡ್ ಪಡೆಯುತ್ತಾರೆ. ಡೆಸ್ಮಂಟ್ ಟುಟು ಭಾಷಣವೊಂದಕ್ಕೆ 64,000 ಪೌಂಡ್ ಸಂಪಾದಿಸುತ್ತಾರೆ. ಆಕೆಯ ತಂದೆ ಶಿಕ್ಷಕ ಮತ್ತು ಮಾನವ ಹಕ್ಕುಗಳ ಪ್ರಚಾರಕರು. ಸ್ವಾತ್ ಕಣಿವೆಯಲ್ಲಿ ತಾನು ನಡೆಸುತ್ತಿದ್ದ ಶಾಲೆಯನ್ನು ಮುಚ್ಚಿದ ತಾಲಿಬಾನ್ ಕ್ರಮವನ್ನು ಅವರು ವಿರೋಧಿಸಿದ್ದರು. ಅವರೂ ಭಾಷಣಗಳನ್ನು ನೀಡುತ್ತಾರೆ. ಸಲರ್ಜೈ ಲಿಮಿಟೆಡ್ ಅನ್ನು 2013 ಆಗಸ್ಟ್‌ನಲ್ಲಿ ಸ್ಥಾಪಿಸಲಾಗಿದೆ. ಲಂಡನ್ ಅಲ್ಲಿರುವ ಈ ಸಂಸ್ಥೆ ಮಲಾಲಾ ಅನುದಾನ ಎನ್ನುವ ಚಾರಿಟೇಬಲ್ ಸಂಸ್ಥೆಯನ್ನೂ ನಡೆಸುತ್ತದೆ. ಜಾಗತಿಕವಾಗಿ ಬಾಲಕಿಯರ ಶಿಕ್ಷಣಕ್ಕಾಗಿ ಇದು ಕೆಲಸ ಮಾಡುತ್ತದೆ. ಇತ್ತೀಚೆಗೆ ಮಲಾಲಾ, ಕಳೆದ ವಾರ ತಮ್ಮ ಕ್ಷೇತ್ರದಲ್ಲಿ ಗುಂಡಿಗೆ ಬಲಿಯಾದ ಬ್ರಿಟಿಷ್ ಸಂಸದೆ ಜೆ ಕಾಕ್ಸ್‌ಗಾಗಿ ಭಾಷಣ ಮಾಡಿದ್ದರು
ಕೃಪೆ: indianexpress.com