ಭಾರತೀಯ ವಾಯುಪಡೆಗೆ ತೇಜಸ್

Update: 2016-07-01 18:36 GMT

ಬೆಂಗಳೂರು, ಜು.1: ತೇಜಸ್ ಹಗುರ ಯುದ್ಧವಿಮಾನವು (ಎಲ್‌ಸಿಎ) ಶುಕ್ರವಾರ ಭಾರತೀಯ ವಾಯುದಳಕ್ಕೆ (ಐಎಎಫ್) ಔಪಚಾರಿಕವಾಗಿ ಸೇರ್ಪಡೆಗೊಂಡಿದ್ದು, ಬೆಂಗಳೂರಿನಲ್ಲಿ ಪ್ರಥಮ ಹಾರಾಟ ನಡೆಸಿದೆ.

ಸರಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಹಾಗೂ ಏರೊನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಗಳು(ಎಡಿಎ) ಮೊದಲ 2 ಸ್ವದೇಶಿ ನಿರ್ಮಿತ ವಿಮಾನಗಳನ್ನು ‘ಫ್ಲೈಯಿಂಗ್ ಡ್ಯಾಗರ್ಸ್’ ಹೆಸರಿನ ಹೊಸ ಸ್ಕ್ವಾಡ್ರನ್‌ನ ಭಾಗವಾಗಿ ವಾಯುಪಡೆಗೆ ಹಸ್ತಾಂತರಿಸಿವೆ.

ತೇಜಸ್, ಒಂದು ಅತ್ಯಾಧುನಿಕ ಇಸ್ರೇಲಿ ಬಹು-ಕಾರ್ಯ ರಾಡಾರ್, ಸ್ವದೇಶಿ ನಿರ್ಮಿತ ಆಕಾಶದಿಂದ ನೆಗೆಯುವ ಡರ್ಬಿ ಕ್ಷಿಪಣಿ ಹಾಗೂ ನೆಲದ ಗುರಿಗಳನ್ನು ಭೇದಿಸುವ ಗುರಿ ಕೋಡುಗಳಿಂದ ಸಜ್ಜಾಗಿದೆ.

ಈ ಹಗುರ ಯುದ್ಧ ವಿಮಾಣ ಹಳೆಯ ಮಿಗ್-21ಗಳನ್ನು ಸ್ಥಳಾಂತರಿಸಲಿದೆ. ಹೊಸ ಸ್ಕ್ವಾಡ್ರನ್ 2018ರಲ್ಲಿ 4 ತರಬೇತಿ ವಿಮಾನಗಳ ಸಹಿತ ಒಟ್ಟು 18 ತೇಜಸ್ ವಿಮಾನಗಳನ್ನು ಪಡೆಯಲಿದೆ.

ಬೆಂಗಳೂರಿನ ವಿಮಾನ ವ್ಯವಸ್ಥೆ ಪರೀಕ್ಷಾ ಸ್ಥಾವರದಲ್ಲಿ ನಿಯೋಜನೆ ಸಮಾರಂಭವು ಪಾರಂಪರಿಕ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಆಕರ್ಷಕ ಜಲ ಫಿರಂಗಿ ವಂದನೆಯನ್ನೂ ಮಾಡಲಾಯಿತು.

ತೇಜಸ್‌ನ ಯಶಸ್ವಿ ನಿಯೋಜನೆಗಾಗಿ ಎಚ್‌ಎಎಲ್ ಹಾಗೂ ಎಡಿಎಗಳನ್ನು ಅಭಿನಂದಿಸಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ‘ರಾಷ್ಟ್ರದ ಹೆಮ್ಮೆಯ ಕ್ಷಣ’ ಇದೆಂದು ಟ್ವೀಟಿಸಿದ್ದಾರೆ.

ಲಘು ಯುದ್ಧ ವಿಮಾನ ಯೋಜನೆಯು 1985ರಲ್ಲಿ ಆರಂಭಗೊಂಡಿತ್ತು. ಮಿಗ್-21ರ ಬದಲಿಗೆ ಈ ವಿಮಾನಗಳನ್ನು 1994ರಲ್ಲೇ ಸೇರಿಸಲು ಐಎಎಫ್ ಯೋಜಿಸಿತ್ತು. ಆದರೆ, ಭಾರೀ ವಿಳಂಬದ ಬಳಿಕ 2013ರಲ್ಲಿ ಯೋಜನೆಯು ಮೊದಲ ಹಂತದ ಹಾರುವಿಕೆಯನ್ನು ಸಾಧಿಸಿತು.

ಮೊದಲ 2 ವರ್ಷಗಳ ಕಾಲ ಸ್ಕ್ವಾಡ್ರನ್ ಬೆಂಗಳೂರಿನಲ್ಲೇ ನೆಲೆಸಲಿದ್ದು, ಬಳಿಕ ತಮಿಳುನಾಡಿನ ಸುಲೂರ್‌ಗೆ ಹೋಗಲಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಮಾನಕ್ಕೆ ‘ತೇಜಸ್’ ಎಂದು ಹೆಸರಿಸಿದ್ದರು. ಉಜ್ವಲ ಪ್ರಭೆಯೆಂದು ಸಂಸ್ಕೃತದಲ್ಲಿ ಇದರರ್ಥ.
ತೇಜಸ್ ವಿಮಾನಗಳು ಮುಂದಿನ ವರ್ಷ ತನ್ನ ಸಮರ ಯೋಜನೆಯಲ್ಲಿ ಕಾಣಿಸಿಕೊಳ್ಳಲಿದೆ. ಅವುಗಳನ್ನು ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗುವುದೆಂದು ಐಎಎಫ್ ತಿಳಿಸಿದೆ. ಅದು ಈ ವರ್ಷ 6 ಹಾಗೂ ಮುಂದಿನ ವರ್ಷ 8 ವಿಮಾನಗಳನ್ನು ಸೇರಿಸುವ ಯೋಜನೆಯಲ್ಲಿದೆ.
ಆಕಾಶದಲ್ಲೇ ಇಂಧನಪೂರಣ ಹಾಗೂ ಅತ್ಯಾಧುನಿಕ ದೃಷ್ಟಿ ಪಥದಾಚೆಗಿನ ಕ್ಷಿಪಣಿ ಸಾಮರ್ಥ್ಯದ ತೇಜಸ್‌ನ ಉನ್ನತೀಕರಿಸಿದ ಮಾದರಿಗೆ ರೂ. 275ರಿಂದ 300 ಕೋಟಿ ವೆಚ್ಚ ತಗಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News