ಶಾಸಕನ ಪುತ್ರ ಸಿದ್ಧಾರ್ಥ್ ಮೆಹರಿಯಾ ಪೊಲೀಸ್ ಕಸ್ಟಡಿಗೆ
ಜೈಪುರ, ಜು.3: ಬಿಎಂಡಬ್ಲು ಕಾರು ಚಲಾಯಿಸಿ ಮೂರು ಮಂದಿಯ ಸಾವಿಗೆ ಕಾರಣನಾದ ಜೈಪುರದ ಶಾಸಕ ನಂದಕಿಶೋರ್‌ರ ಪುತ್ರ ಸಿದ್ಧಾರ್ಥ್ ಮೆಹರಿಯಾಗೆ ಒಂದು ದಿನದ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಶುಕ್ರವಾರ ರಾತ್ರಿ ಸೈಂಟ್ ಕ್ಸೇವಿಯರ್ ಶಾಲೆಯ ಸಮೀಪ ಮೆಹರಿಯಾ ತನ್ನ ಬಿಎಂಡಬ್ಲು ಕಾರನ್ನು ಚಲಾಯಿಸುತ್ತಿದ್ದಾಗ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಮೂವರು ಸಾವನ್ನಪಿದ್ದು, ಇತರ ಐವರು ಗಂಭೀರ ಗಾಯಗೊಂಡಿದ್ದರು. ಸಿದ್ಧಾರ್ಥ್ ಮೆಹರಿಯಾರ ವಕೀಲ ದೀಪಕ್ ಚೌಹಾಣ್, ತನ್ನ ಕಕ್ಷಿದಾರರ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಹಾಗೂ ಅಪಘಾತಕ್ಕೆ ಕಾರಣದವನು ರಮೇಶ್ ಎಂಬಾತನಾಗಿದ್ದಾನೆಂದು ಪ್ರತಿಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್,ಮೂರು ದಿನಗಳ ಕಾಲ ವಶಕ್ಕೊಪ್ಪಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಆದರೆ,ಸಿದ್ಧಾರ್ಥ್ ಮೆಹರಿಯಾ ಬಿಎಂಡಬ್ಲು ಕಾರು ಚಲಾಯಿಸುತ್ತಿರಲಿಲ್ಲ ಎಂದು ತಾವು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ನಿಜವಾಗಿಯೂ ರಮೇಶ್ ಎಂಬಾತ ಕಾರು ಚಲಾಯಿಸುತ್ತಿದ್ದ .ಅಪಘಾತ ಸಂಭವಿಸಿದ ಬಳಿಕ ಆತ ಪರಾರಿಯಾಗಿದ್ದಾನೆ ಎಂದು ಹೇಳಿದರು. ಅಪಘಾತ ಸಂಭವಿಸಿರುವುದು ಮಧ್ಯರಾತ್ರಿ 1 ಗಂಟೆಗೆ ,ಆದರೂ ಪೊಲೀಸರು ರಮೇಶ್‌ನನ್ನು ಬಂಧಿಸಿಲ್ಲ .12 ಗಂಟೆಗಳ ನಂತರ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಯಾವುದೇ ನ್ಯಾಯಬದ್ಧ ಸ್ಪಷ್ಟನೆಯನ್ನು ನೀಡಿಲ್ಲ.ಸಿದ್ಧಾರ್ಥ್ ವಿರುದ್ಧ ನಕಲಿ ಪ್ರಕರಣವನ್ನು ಪೊಲೀಸರು ದಾಖಲು ಮಾಡಿರುವುದು ಸಾಬೀತಾಗಿದೆ ಎಂದು ಅವರು ಆರೋಪಿಸಿದರು.
ರಾಜಸ್ಥಾನದ ಪಕ್ಷೇತರ ಶಾಸಕ ನಂದಕಿಶೋರ್ ರ ಪುತ್ರ 20 ವರ್ಷದ ಸಿದ್ಧಾರ್ಥ್, ಮದ್ಯಸೇವಿಸಿ ಬಿಎಂಡಬ್ಲು ಕಾರು ಚಲಾಯಿಸಿದ್ದ ನೆಂದು ಪೊಲೀಸರು ಆರೋಪಿಸಿದ್ದಾರೆ.ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಜೇತಾನಂದ್, ಕೈಲಾಶ್ ಮತ್ತು ವಿಷ್ಣು ಎಂಬ ಮೂರು ಮಂದಿ ಮೃತಪಟ್ಟಿದ್ದರು.