ಜರ್ಮನಿ: ಶಿರವಸ್ತ್ರ ಧರಿಸುವ ಹಕ್ಕು ಪಡೆದ ಮುಸ್ಲಿಂ ವಕೀಲೆ

Update: 2016-07-04 15:46 GMT

ಬರ್ಲಿನ್, ಜು. 4: ಜರ್ಮನಿಯ ಮುಸ್ಲಿಮ್ ವಕೀಲೆಯೊಬ್ಬರಿಗೆ ಕೆಲಸದ ಸ್ಥಳದಲ್ಲಿ ಶಿರವಸ್ತ್ರ ಧರಿಸಲು ನ್ಯಾಯಾಲಯವೊಂದು ಅನುಮತಿ ನೀಡಿದೆ. ಶಿರವಸ್ತ್ರ ಧರಿಸುವುದರಿಂದ ಆಕೆಯನ್ನು ತಡೆಯಲು ಬವೇರಿಯ ರಾಜ್ಯಕ್ಕೆ ಯಾವುದೇ ಕಾನೂನು ನೆಲೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆಗ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿನಿ ಅಕಿಲಾ ಸಂಧು ತನ್ನ ವಾರ್ಷಿಕ ಪರೀಕ್ಷೆಗಳ ಬಳಿಕ ಬವೇರಿಯನ್ ನ್ಯಾಯಾಂಗ ವ್ಯವಸ್ಥೆಯಲ್ಲಿ ತರಬೇತಿ ಅಧ್ಯಯನ ನಡೆಸುತ್ತಿದ್ದರು. ಆದರೆ, ನೀವು ಶಿರವಸ್ತ್ರ ಧರಿಸಿ ಸಾಕ್ಷಿಗಳ ವಿಚಾರಣೆ ನಡೆಸುವಂತಿಲ್ಲ ಹಾಗೂ ನ್ಯಾಯಾಲಯದ ಕೊಠಡಿಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂಬುದಾಗಿ ಸೂಚಿಸುವ ಪತ್ರವೊಂದನ್ನು ಅವರಿಗೆ ನೀಡಲಾಯಿತು.

ಈ ಸಂಬಂಧದ ಪತ್ರವನ್ನು ರಾಜ್ಯದ ಅತ್ಯುನ್ನತ ನ್ಯಾಯಾಲಯ 2014 ಜುಲೈಯಲ್ಲಿ ಆಕೆಗೆ ನೀಡಿತು.

‘‘ಆ ಪತ್ರವನ್ನು ನೋಡಿದ ಕ್ಷಣವೇ ನನಗೆ ಅನಿಸಿತು, ಆ ಪತ್ರ ಕಾನೂನುಬಾಹಿರವೆಂದು’’ ಎಂದು ಅವರು ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು.
ನಿಷೇಧದ ಬಗ್ಗೆ ತನಗೆ ವಿವರಣೆ ನೀಡಬೇಕು ಎಂದು 25 ವರ್ಷದ ಯುವತಿ ಆಗ್ರಹಿಸಿದರು. ‘‘ಧಾರ್ಮಿಕ ಉಡುಗೆ ಮತ್ತು ಸಂಕೇತಗಳು ನ್ಯಾಯ ಆಡಳಿತ ವ್ಯವಸ್ಥೆಯ ಧಾರ್ಮಿಕ ತಟಸ್ಥತೆಯ ಮೇಲೆ ಪರಿಣಾಮ ಬೀರಬಹುದು’’ ಎಂಬುದಾಗಿ ಆಕೆಯ ಹೇಳಲಾಯಿತು.

ಈ ನಿರ್ಧಾರ ತನ್ನ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಅಕಿಲಾ ವಾದಿಸಿದರು.

ಆಕೆಯ ವಾದ ಸರಿಯೆಂದು ನಿರ್ಧರಿಸಿದ ನ್ಯಾಯಾಧೀಶ ಬರ್ನ್‌ಹರ್ಡ್ ರೋತಿಂಗರ್, ಆಕೆಯ ಧಾರ್ಮಿಕ ಹಕ್ಕಿನ ಮೇಲೆ ಆಕ್ರಮಣ ನಡೆಸಲು ರಾಜ್ಯಕ್ಕೆ ಕಾನೂನು ನೆಲೆಯಿಲ್ಲ ಎಂದು ತೀರ್ಪು ನೀಡಿದರು.

ಈಗ ಅಕಿಲಾ 2000 ಯುರೋ ಪರಿಹಾರ ಕೋರಿದ್ದಾರೆ. ಆದರೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬವೇರಿಯ ರಾಜ್ಯ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News