ಮಸ್ಜಿದುನ್ನಬವಿ ಸಮೀಪ ಸ್ಫೋಟ: ಕನಿಷ್ಠ ಇಬ್ಬರು ಬಲಿ
ಜಿದ್ದಾ, ಜು.4: ಮದೀನಾದ ಮಸ್ಜಿದುನ್ನಬವಿಯ ಸಮೀಪದ ಪ್ರದೇಶವೂ ಸೇರಿದಂತೆ ಸೌದಿ ಅರೇಬಿಯಾದಲ್ಲಿ ಸೋಮವಾರ ಮೂರು ಸ್ಫೋಟಗಳು ಸಂಭವಿಸಿದ್ದು, ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಬೆಳಗಿನ ಜಾವ ಇಲ್ಲಿಯ ಅಮೆರಿಕನ್ ದೂತಾವಾಸದ ಮೇಲಿನ ಸಂಭಾವ್ಯ ಆತ್ಮಹತ್ಯಾ ಬಾಂಬ್ ದಾಳಿಯನ್ನು ರಾಜತಾಂತ್ರಿಕ ಭದ್ರತಾ ಅಧಿಕಾರಿಗಳು ವಿಫಲಗೊಳಿಸಿದ್ದರು. ಇದಾದ ಬಳಿಕ ಸಂಜೆ ಸೌದಿಯ ಕತೀಫ್ ಮತ್ತು ಮಸ್ಜಿದುನ್ನಬವಿ ಸಮೀಪ ಎರಡು ಸ್ಫೋಟಗಳು ಸಂಭವಿಸಿವೆ.
ಘಟನೆಯಲ್ಲಿ ಭದ್ರತಾ ಸಿಬ್ಬಂದಿಗಳಿಬ್ಬರು ಗಾಯಗೊಂಡಿದ್ದಾರೆನ್ನಲಾಗಿದೆ.
ನಸುಕಿನ 2.15ರ ಸುಮಾರಿಗೆ ಸಮೀಪದ ಜಿದ್ದಾದ ಆಸ್ಪತ್ರೆಯೊಂದರ ಪಾರ್ಕಿಂಗ್ ಸ್ಥಳದ ಬಳಿ ಶಂಕಿತ ವ್ಯಕ್ತಿಯನ್ನು ಕಂಡ ಭದ್ರತಾ ಅಧಿಕಾರಿಗಳು ಆತನನ್ನು ಸಮೀಪಿಸಿದಾಗ ಆತ ತನ್ನ ದೇಹಕ್ಕೆ ಅಳವಡಿಸಿಕೊಂಡಿದ್ದ ಸ್ಫೋಟಕವನ್ನು ಸ್ಫೋಟಿಸಿದ್ದ. ಈ ಘಟನೆಯಲ್ಲಿ ಆತನೊಬ್ಬನೇ ಸಾವನ್ನಪ್ಪಿದ್ದಾನೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದರು.
ಕಾರುಗಳು ಹಾನಿಗೀಡಾಗಿದ್ದು,ಇಬ್ಬರು ಭದ್ರತಾ ಸಿಬ್ಬಂದಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಆತ್ಮಹತ್ಯಾ ಬಾಂಬರ್ ವಲಸಿಗನೆಂದು ಗುರುತಿಸಲಾಗಿದೆ ಎಂದು ಅಲ್-ಟರ್ಕಿ ಹೇಳಿದೆ. ಆದರೆ ಆತನ ರಾಷ್ಟ್ರೀಯತೆಯನ್ನು ಅದು ಬಹಿರಂಗಗೊಳಿಸಿಲ್ಲ.
ರಸ್ತೆಗಳಲ್ಲಿ ಮಾನವ ದೇಹದ ಅಂಗಾಂಗಗಳು ಹರಡಿ ಬಿದ್ದಿದ್ದನ್ನು ಕಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು. ನಿಜಕ್ಕೂ ಆತ ಆತ್ಮಹತ್ಯಾ ಬಾಂಬರ್ ಆಗಿದ್ದ,ಚೂರುಚೂರಾಗಿದ್ದ ಶವವನ್ನು ನಾನು ಕಂಡಿದ್ದೇನೆ ಎಂದು ಸ್ಥಳೀಯ ನಿವಾಸಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸ್ಥಳೀಯ ಕಾಲಮಾನ ಸಂಜೆ ಏಳು ಗಂಟೆಗೆ ಕೆಲವೇ ನಿಮಿಷಗಳಿರುವಾಗ ಮೊದಲ ಸ್ಫೋಟ ಸಂಭವಿಸಿದ್ದು, ಮಸೀದಿಯ ಬಳಿ ನಿಲ್ಲಿಸಿದ್ದ ಕಾರೊಂದಕ್ಕೆ ಹಾನಿಯಾಗಿದೆ. ಅದರ ಬೆನ್ನಲ್ಲೇ ಇನ್ನೊಂದು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.