×
Ad

ಎಣ್ಣೆ ಬರುವ ಮೊದಲೇ ಗಾಣ ಕೈಕೊಡಬಹುದೇ?

Update: 2016-07-05 00:04 IST

ಜಾ  ತ್ಯತೀತ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷದ ನಂತರ ಈಗ ಭಾರತೀಯ ಜನತಾ ಪಕ್ಷದ ಸರದಿ. ಶಿಸ್ತಿನ ಪಕ್ಷವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಮತ್ತು ಚ್ಟಠಿ ಡಿಜಿಠಿ ಜ್ಛ್ಛಿಛ್ಟಿಛ್ಞ್ಚಿಛಿ ಎಂದು ಸದಾ ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷದಲ್ಲಿ ಇಂದು ಅಶಿಸ್ತು ಭುಗಿಲೆದ್ದಿದೆ. ಆ ಪಕ್ಷದವರ ಹೇಳಿಕೆ ಏನೇ ಇರಲಿ, ಅಶಿಸ್ತು ಮತ್ತು ಭಿನ್ನಮತ ಭಾಜಪಕ್ಕೆ ಹೊಸದೇನೂ ಅಲ್ಲ. ಅದರೆ, ಈ ಬಾರಿ ಇದರ ಸ್ವರೂಪ, ಆಳ ಮತ್ತು ವ್ಯಾಪ್ತಿ ತೀರಾ ಭಿನ್ನವಾಗಿದ್ದು, ಅನಿರೀಕ್ಷಿತ ತೀವ್ರತೆ ಮತ್ತು ತೂಕ ಪಡೆದಿದೆ. ರಾಜ್ಯ ಮತ್ತು ಕೇಂದ್ರದ ಧುರೀಣರನ್ನು ನೇರವಾಗಿ ಪ್ರಶ್ನಿಸುವ ಮತ್ತು ತರಾಟೆಗೆ ತೆಗೆದುಕೊಳ್ಳುವ ಹಂತಕ್ಕೆ ತಲುಪಿದೆ.

ಅನಿರೀಕ್ಷಿತ ಬೆಳವಣಿಗೆ ಮತ್ತು ತೀವ್ರತೆಗೆ ಕಾರಣ ಏನು?

ಹಿಂದೆ ಕರ್ನಾಟಕದಲ್ಲಿ ಭಾಜಪ ಆಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷದ ವೈಫಲ್ಯದ ಮೇಲೆ. ಹಾಗೆಯೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಭಾಜಪ ಆಡಳಿತ ಮಾಡಲಾಗದೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡು ಅಧಿಕಾರ ಕಳೆದು ಕೊಂಡಿದ್ದರಿಂದ. ಈಗ ಕೇಂದ್ರದಲ್ಲಿ ಭಾಜಪ ಸರಕಾರ ಗಟ್ಟಿಯಾಗಿ ತಳ ಊರಿರುವುದರಿಂದ, ಮುಂದಿನ ಚುನಾವಣೆಯಲ್ಲಿ ಅಧಿಕಾರ ಭಾಜಪದ ಜೋಳಿಗೆಗೆ ಬೀಳ ಬಹುದೆಂಬ ಅಭಿಪ್ರಾಯದಿಂದ ಭಾಜಪ ಈಗಾಗಲೇ ಗದ್ದುಗೆ ಹಿಡಿದಂತೆ ವರ್ತಿಸುತ್ತಿದೆ ಮತ್ತು ಅಧಿಕಾರದ ಹಂಚಿಕೆ ಕೂಡಾ ಮಾಡಿಕೊಂಡಿದೆ ಎನ್ನುವ ವ್ಯಂಗ್ಯ ಕೇಳಿಬರುತ್ತಿದೆ. ಅಧಿಕಾರ ಇಲ್ಲದಿರುವಾಗಲೇ, ಕುರ್ಚಿ ಹಿಡಿಯಲು ಸ್ಪರ್ಧೆ ಇರುವಾಗ, ಆಧಿಕಾರದ ಸಾಧ್ಯತೆ ಕುರಿತು ಸುಳಿವು ದೊರೆತಾಗ ‘‘ಕುರ್ಚಿ ಆಟ’’ ತೀವ್ರವಾಗುತ್ತದೆ ಮತ್ತು ತಮಗಲ್ಲದೆ ‘‘ತಮ್ಮವರಿಗೂ’’ ಕುರ್ಚಿ ಹಿಡಿಯುವ ಭಾರತದ ರಾಜಕೀಯದ ಗೌಪ್ಯ ಕಾರ್ಯ ಸೂಚಿಯನ್ನು ಈ ಭಿನ್ನಮತದ ಹಿಂದೆ ಕಾಣಬಹುದು.
       ಒಂದು ರಾಜಕೀಯ ಪಕ್ಷದಲ್ಲಿ ಅಂತರಿಕ ಪ್ರಜಾಸತ್ತೆ ಮತ್ತು ಸಮಾಲೋಚನೆಯನ್ನು ಹತ್ತಿಕ್ಕಿ, ಕೇವಲ ಒಬ್ಬರು ಅಥವಾ ಒಂದಿಬ್ಬರು ನಿರ್ಣಯವನ್ನು ಹೇರಲು ಆರಂಭಿಸಿದರೆ, ಅದಕ್ಕೆ ಪಕ್ಷ ಬಲಿಯಾಗುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಯಡಿಯೂರಪ್ಪನವರ ಶೈಲಿಯಲ್ಲಿ ಮತ್ತು ಕಾರ್ಯ ವೈಖರಿಯಲ್ಲಿ ಸರ್ವಾಧಿಕಾರತ್ವ ಎದ್ದು ಕಾಣುತ್ತದೆ ಎನ್ನುವ ಅರೋಪದಲ್ಲಿಯೂ ಹುರುಳಿಲ್ಲದಿಲ್ಲ. ತಾನು ಹೋಗಿದ್ದೇ ದಾರಿ, ತಾನು ಮಾಡಿದ್ದೇ ಸರಿ ಎನ್ನುವ ಅವರ ಮನೋಭಾವ ಪಕ್ಷದ ಇಂದಿನ ಸಮಸ್ಯೆಗಳಿಗೆ ಕಾರಣ ಎನ್ನುವ ಆರೋಪ ಜೋರಾಗಿ ಕೇಳಿಬರುತ್ತಿದೆ. ತಾವು ಭಾಜಪವನ್ನು ತೊರೆದಾಗ ತಮ್ಮಿಂದಿಗೆ ಬಂದವರನ್ನು ಈಗ ಆಯಕಟ್ಟಿನ ಸ್ಥಳದಲ್ಲಿ ಕೂರಿಸಿ, ಅಕಸ್ಮಾತ್ ಮುಂದಿನ ಚುನಾವಣೆಯಲ್ಲಿ ಗದ್ದುಗೆ ಹಿಡಿದರೆ, ತಮ್ಮ ಸ್ಥಾನಕ್ಕೆ ಚ್ಯುತಿಯಾಗದಂತೆ ಜಾಗ್ರತೆ ವಹಿಸಿದ್ದಾರೆ ಮತ್ತು ಚುನಾವಣಾ ಟಿಕೆಟ್ ನೀಡುವಾಗ ತಮ್ಮ ಮತ್ತು ತಮ್ಮವರ ಭವಿಷ್ಯವನ್ನು ನೋಡಿಕೊಂಡಿದ್ದಾರೆ ಎನ್ನುವ ಗುಮಾನಿ ಯಡಿಯೂರಪ್ಪನವರ ಮೇಲಿದೆ. ತಮ್ಮ ಮತ್ತು ತಮ್ಮ ಕಷ್ಟ ಕಾಲದ ಅನುಯಾಯಿಗಳ ಹಿತಾಸಕ್ತಿಗಾಗಿ, ಪಕ್ಷಕ್ಕೆ ದಶಕಗಳಿಂದ ಬದ್ಧ್ದರಾಗಿರುವವರನ್ನು ಕಡೆಗಣಿಸಲಾಗಿದೆ ಎನ್ನುವುದು ಬಹಳ ಜನರನ್ನು ಕೆರಳಿಸಿದೆ. ಹಾಗೆಯೇ ಶೋಭಾ ಕರಂದ್ಲಾಜೆಯವರಿಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವನ್ನು ನೀಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ‘‘ಮೇಡಂ ಫ್ಯಾಕ್ಟರ್’’ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು ಎನ್ನುವ ಕೆಲವು ಹಿರಿಯ ಸದಸ್ಯರ ಮಾತು ಅರ್ಥ ಪೂರ್ಣವಾಗಿದೆ. ಅವರಿಗೆ ಕೊಡುವ ಮಹತ್ವ ಮತ್ತು ಅವರು ನಾಯಕರಂತೆ ವರ್ತಿಸುವುದು ಟೀಕೆಗೆ ಒಳಗಾಗಿದೆ. ಆಂತರಿಕ ಪ್ರಜಾಸತ್ತೆ ಇಲ್ಲದಿರುವುದು ಮತ್ತು ಏಕಪಕ್ಷೀಯ ನಿರ್ಧಾರಗಳು ಹಲವರನ್ನು ಅತೃಪ್ತರನ್ನಾಗಿ ಮಾಡಿದೆ. ಕಾಂಗ್ರೆಸ್ ಪಕ್ಷ ಹೈಕಮಾಂಡ್ ಸಂಸ್ಕೃತಿಗೆ ಬಲಿಯಾದಂತೆ, ಭಾಜಪವು ವರಿಷ್ಠರ ಕೈಯಾಡಿಸುವಿಕೆಗೆ ಬಲಿಯಾಯಿತೇ ಎನ್ನುವ ಮಾತು ಕೇಳುತ್ತಿದೆ.
  ಚುನಾವಣೆ ಇನ್ನೂ ಎರಡು ವರ್ಷ ಇದೆ. ಚುನಾವಣೆ ಆಗಬೇಕು, ಬಹುಮತ ದೊರಕಬೇಕು...ಅಗಲೇ ಅಧಿಕಾರದ ಮಾತು. ಕೂಸು ಹುಟ್ಟುವ ಮೊದಲೇ ಈ ಕುಲಾವಿ ಏಕೆ? ಭಾಜಪವು ಈಗಾಗಲೇ ಅಧಿಕಾರದ ಗದ್ದುಗೆ ತಮ್ಮದಾದಂತೆ ವರ್ತಿಸುತ್ತಿರುವುದು, ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಅಧಿಕಾರ ಸಿಗುವ ಮೊದಲೇ ಇಷ್ಟು ಕಚ್ಚಾಡಿದರೆ, ಅಧಿಕಾರ ದೊರಕಿದರೆ ಇನ್ನೇನಾಗಬಹುದು ಎಂದು ಜನತೆ ಅಚ್ಚರಿಯಿಂದ ಬೆಳವಣಿಗೆಯನ್ನು ನೋಡುತ್ತಿದ್ದಾರೆ. 2009, 13ರ ಪ್ರಹಸನಗಳು ಮರುಕಳಿಸಬಹುದೇ ಎನ್ನುವ ಕಾತುರತೆ ಎದ್ದು ಕಾಣುತ್ತಿದೆ.
  ಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಇಂತಹ ಬೆಳವಣಿಗೆಯನ್ನು ಮತ್ತು ಸಂಘಷರ್ವನ್ನು ಕಾಣಬಹುದು. ಆದರೆ. ಶಿಸ್ತಿನ ಪಕ್ಷ ಎಂದು ದೊಡ್ಡದಾಗಿ ಸದಾ ಶಂಖ ಊದುವ ಪಕ್ಷದಲ್ಲಿ ಇಂತಹ ಬೆಳವಣಿಗೆ ವಿಷಾದನೀಯ. ಮುಂದೆ ಪಕ್ಷದ ವರಿಷ್ಠರು ಸಂಬಂಧ ಪಟ್ಟವರನ್ನು ಒಂದೇ ವೇದಿಕೆಗೆ ಕರೆಸಿ ಮಾತನಾಡಿ, ಹಸ್ತ ಲಾಘವ-ಅಪ್ಪುಗೆ ಮಾಡಿಸಿ ‘‘ಎಲ್ಲವೂ ಸರಿಯಾಗಿದೆ, ನಾವೆಲ್ಲ ಒಂದೆ, ಸಂವಹನ ಕೊರತೆಯಿಂದ ಆದ ಸಣ್ಣ ಭಿನ್ನಾಭಿಪ್ರಾಯಗಳು ಬಗೆ ಹರಿದಿವೆ, ನಾವೆಲ್ಲ ಕಾಂಗ್ರೆಸ್ ಮುಕ್ತ ಕರ್ನಾಟಕ್ಕಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಹೋರಾಡುತ್ತೇವೆ’’ ಎಂದು ಹೇಳಿಕೆ ಕೊಡಿಸಬಹುದು. ಆದರೆ, ಮೊಳಕೆಯೊಡೆದ ಭಿನ್ನ ಮತದ ಬೀಜಗಳು ಕತ್ತರಿಸಿದರೂ, ಮಣ್ಣು ಮುಚ್ಚಿದರೂ, ಅದು ಹೆಮ್ಮರವಾಗಿ ಬೆಳೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹಿಂದೆ 2013ರಲ್ಲಿ ಭಾಜಪ ಅಧಿಕಾರ ಕಳೆದುಕೊಂಡಾಗ ಯಡಿಯೂರಪ್ಪಕಾರಣರಾಗಿದ್ದರು. ಹಾಗೆಯೇ 2018ರಲ್ಲಿ ಕಮಲ ಅರಳದಿದ್ದರೆ ಯಡಿಯೂರಪ್ಪನವರೇ ಕಾರಣರಾಗಬಹುದೇನೋ? ಈ ಮಧ್ಯೆ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿಯಬಹುದು. ಭವಿಷ್ಯವನ್ನು ಊಹಿಸಲಾಗದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಬಹುದು. ಆದರೆ, ಸದ್ಯದ ಆ ಪಕ್ಷದಲ್ಲಿಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನೋಡಿದರೆ, ‘‘ಎಣ್ಣೆ ಬರುವ ಮೊದಲೇ ಗಾಣ ಕೈಕೊಟ್ಟೀತೆ’’ ಎಂಬ ಮಾತಿಗೆ ಹೋಲಿಸಬಹುದೇನೋ?

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News