×
Ad

ನಿರೀಕ್ಷೆಗಳಿಲ್ಲದ ಸಂಪುಟ ವಿಸ್ತರಣೆ

Update: 2016-07-05 00:10 IST

ಸದಾ ವಿದೇಶಗಳಲ್ಲೇ ಸುತ್ತಾಡುತ್ತಾ ಸುದ್ದಿಯಲ್ಲಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ದೇಶದ ಕಡೆಗೆ ಗಮನ ಹರಿಸಿದ್ದಾರೆ. ನರೇಂದ್ರ ಮೋದಿ ತನ್ನ ಸಚಿವ ಸಂಪುಟವನ್ನು ಮಂಗಳವಾರ ಪುನಾರಚಿಸುವ ವಿಷಯ ಈ ಕಾರಣಕ್ಕೇ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸಚಿವ ಸ್ಥಾನದಲ್ಲಿ ಬದಲಾವಣೆಗಳು ಸರಕಾರದ ನಿಲುವುಗಳಲ್ಲಿ, ಆಡಳಿತದಲ್ಲಿ ಬದಲಾವಣೆ ತರಬಹುದು ಎನ್ನುವ ನಿರೀಕ್ಷೆಯನ್ನು ಖಂಡಿತ ಹೊಂದುವಂತಿಲ್ಲ. ಯಾಕೆಂದರೆ, ಸದ್ಯಕ್ಕೆ ಈ ದೇಶವನ್ನು ಮುನ್ನಡೆಸುವವರೇ ಕಾರ್ಪೊರೇಟ್ ಕುಳಗಳಾಗಿರುವುದರಿಂದ ಮತ್ತು ಎಲ್ಲ ಅಧಿಕಾರಗಳು ಮೋದಿ ಕೇಂದ್ರಿತವಾಗಿರುವುದರಿಂದ ಯಾವ ಬದಲಾವಣೆಯೂ ಸರಕಾರದ ಮೇಲೆ ಪರಿಣಾಮ ಬೀರಲಾರದು. ಹಾಗೆ ನೋಡಿದರೆ ಈ ಹಿಂದೆ ಸಂಪುಟದೊಳಗೆ ಬದಲಾವಣೆಗಳಿಗೆ ಹಲವು ಸಂದರ್ಭಗಳು ಒದಗಿ ಬಂದಿದ್ದವು. ಲಲಿತ್ ಮೋದಿ ಪ್ರಕರಣ ದೇಶದಲ್ಲಿ ಎಷ್ಟರಮಟ್ಟಿಗೆ ಸುದ್ದಿಯಾಗಿತ್ತೆಂದರೆ, ಸಂಪುಟದೊಳಗಿನ ಒಂದೆರಡು ದೊಡ್ಡ ತಲೆಗಳಾದರೂ ಉರುಳಬೇಕಾಗಿತ್ತು. ಆದರೆ ರಾಜ್‌ನಾಥ್ ಸಿಂಗ್ ಅವರು ‘‘ಕೇಳಿದಾಕ್ಷಣ ರಾಜೀನಾಮೆ ನೀಡಲು ನಮ್ಮದು ಯುಪಿಎ ಸರಕಾರ ಅಲ್ಲ’’ ಎಂದುಬಿಟ್ಟರು. ಅಂದ ಮೇಲೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಸಂಪುಟದ ಮುಖ್ಯ ಭಾಗ ಎಂದು ಸರಕಾರ ತಿಳಿದುಕೊಂಡಿಲ್ಲ ಎಂದಾಯಿತು. ಹೀಗಿರುವಾಗ, ಜನರ ಹಿತಾಸಕ್ತಿಗೆ ಪೂರಕವಾಗಿ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆಯೇ ತಪ್ಪಾಗುತ್ತದೆ. ದೇಶಕ್ಕೆ ಒಳಿತು ಮಾಡದೇ ಇದ್ದರೂ ಪರವಾಗಿಲ್ಲ, ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಾ ಓಡಾಡುವ, ಜನರಲ್ಲಿ ಉದ್ವಿಗ್ನಕಾರಿ ಚಿಂತನೆಗಳನ್ನು ಬಿತ್ತುವ ಒಂದೆರಡು ಉಗ್ರವಾದಿ ಸಚಿವರನ್ನಾದರೂ ಸರಕಾರದಿಂದ ದೂರ ಇಡುವ ಅವಕಾಶ ಪ್ರಧಾನಿ ಮೋದಿಗಿತ್ತು. ಆದರೆ ದೇಶದಾದ್ಯಂತ ಜನರು ಬೆಲೆಯೇರಿಕೆ, ಹಣದುಬ್ಬರ ಮತ್ತು ಇನ್ನಿತರ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ, ಇಂತಹ ಕೋಮು ಉದ್ವಿಗ್ನಕಾರಿ ಚಿಂತನೆಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಬಿಜೆಪಿಯ ರಾಜಕೀಯ ತಂತ್ರದ ಒಂದು ಭಾಗವೇ ಆಗಿದೆ. ಆದುದರಿಂದ ಸರಕಾರದಲ್ಲಿ ಬದಲಾವಣೆಗಳಾದರೂ ಆಗದೇ ಇದ್ದರೂ ಆಡಳಿತದಲ್ಲಿ ದೊಡ್ಡ ನಿರೀಕ್ಷೆಗಳನ್ನಂತೂ ಇಟ್ಟುಕೊಳ್ಳುವಂತಿಲ್ಲ.

 ಇದಕ್ಕೆ ಪೂರಕವಾಗಿ ಸಂಪುಟಕ್ಕೆ ಹೊಸಬರನ್ನು ಸೇರಿಸಲು ಅನುಭವಿಗಳ ಕೊರತೆಯಿದೆ ಎನ್ನುವುದನ್ನು ಬಿಜೆಪಿಯ ಹಿರಿಯರೇ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೂ ಇದೀಗ ಏಕಾಏಕಿ ಸಂಪುಟ ಪುನಾರಚನೆ ಮಾಡಲು ಮೋದಿ ತೀರ್ಮಾನಿಸಿದ್ದಾರೆ ಎಂದರೆ ಅದರರ್ಥ, ಬಿಜೆಪಿಯೊಳಗೆ ಹೊಸದಾಗಿ ಅನುಭವಿಗಳು ಹುಟ್ಟಿಕೊಂಡಿದ್ದಾರೆ ಎಂದಲ್ಲ. ಬದಲಿಗೆ ಭವಿಷ್ಯದ ದೃಷ್ಟಿಯಿಂದ ಕೆಲವು ಬದಲಾವಣೆಗಳು ಬಿಜೆಪಿಗೆ ಅತ್ಯಗತ್ಯವಾಗಿವೆೆ. ಒಂದು ದೇಶಾದ್ಯಂತ ಬಿಜೆಪಿಯ ಅದರಲ್ಲೂ ಮೋದಿಯ ಆಡಳಿತದ ಕುರಿತಂತೆ ಅಸಮಾಧಾನ ಹುಟ್ಟಿಕೊಂಡಿದೆ. ಮೋದಿಯ ಕುರಿತಂತೆ ಅವರ ಭಕ್ತರು ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಇಂತಹ ಹೊತ್ತಿನಲ್ಲಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಎದುರಾಗುತ್ತಿವೆ. ಈ ದೃಷ್ಟಿಯನ್ನಿಟ್ಟುಕೊಂಡೇ ಮೋದಿ ಸರಕಾರ ಕೆಲವು ಬದಲಾವಣೆಗಳನ್ನು ಮಾಡಲು ಹೊರಟಿದೆ. ಸರಕಾರ ನಿಜಕ್ಕೂ ಬದಲಾವಣೆ ಮಾಡಬೇಕಾದ ಖಾತೆಗಳಿದ್ದರೆ ಅದರಲ್ಲಿ ಮುಖ್ಯವಾಗಿರುವುದು ವಿತ್ತ ಖಾತೆ. ಆ ಬಳಿಕ ಗೃಹ ಮತ್ತು ವಿದೇಶಾಂಗ ಖಾತೆಗಳು ಬದಲಾವಣೆಗಳನ್ನು ಬೇಡುತ್ತಿವೆ. ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವಲ್ಲಿ ದೇಶದ ಆರ್ಥಿಕ ನೀತಿ ಸಂಪೂರ್ಣ ವಿಫಲವಾಗಿದೆ. ಹಾಗೆಯೇ ಸರಕಾರದ ವಿರುದ್ಧ ಹಿರಿಯ ಅರ್ಥಶಾಸ್ತ್ರಜ್ಞರು ಟೀಕೆಗಳನ್ನು ಮಾಡುತ್ತಿದ್ದಾರೆ. ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಕುರಿತಂತೆ ಸರಕಾರ ತಳೆದ ನೀತಿಯ ಬಗ್ಗೆಯೂ ವ್ಯಾಪಕ ಅಸಮಾಧಾನವಿದೆ. ಕಾರ್ಪೊರೇಟ್ ವಲಯವನ್ನಷ್ಟೇ ಕೇಂದ್ರೀಕರಿಸಿ ಅಭಿವೃದ್ಧಿಯಾಗುತ್ತಿದೆೆಯೇ ಹೊರತು, ತಳಸ್ತರದ ಜನರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಆದರೆ ವಿತ್ತ ಖಾತೆಯಲ್ಲಿ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸುವಂತಿಲ್ಲ. ಅಷ್ಟು ಎದೆಗಾರಿಕೆಯನ್ನು ಮೋದಿ ಸರಕಾರವೂ ಹೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿತ್ತಖಾತೆಯನ್ನು ಇನ್ನೊಬ್ಬರಿಗೆ ವಹಿಸಿದಾಕ್ಷಣ ಅವರು ತನ್ನ ಸ್ವತಂತ್ರ ಆಲೋಚನೆಗಳನ್ನು ಅಲ್ಲಿ ಅಳವಡಿಸಿಕೊಳ್ಳುವಂತಹ ಸಾಧ್ಯತೆಯೂ ಸರಕಾರದಲ್ಲಿಲ್ಲ. ಇನ್ನು ವಿದೇಶಾಂಗ ಖಾತೆ. ಸದ್ಯಕ್ಕೆ ಈ ದೇಶದ ವಿದೇಶಾಂಗ ಸಚಿವ ಯಾರು ಎಂದು ಕೇಳಿದರೆ ಸಿಗುವ ಉತ್ತರ ನರೇಂದ್ರ ಮೋದಿ. ವಿದೇಶಾಂಗ ಸಚಿವರು ಮಾಡಬೇಕಾದ ಪ್ರವಾಸಗಳನ್ನೆಲ್ಲ ಪ್ರಧಾನಿ ಮೋದಿಯೇ ಮಾಡಿ ಮುಗಿಸಿದ್ದಾರೆ. ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಕೇವಲ ಸಂತಾಪ, ಅಭಿನಂದನೆಗಳಂತಹ ಪ್ರಕಟಣೆಗಳನ್ನು ನೀಡಲಷ್ಟೇ ಸೀಮಿತವಾಗಿದ್ದಾರೆ. ಬೃಹತ್ ಉದ್ಯಮಿಗಳು ಗೊತ್ತುಪಡಿಸಿದ ಪ್ರವಾಸದ ದಿನಗಳನ್ನು ನರೇಂದ್ರ ಮೋದಿ ಅನುಸರಿಸುತ್ತಿದ್ದಾರೆ. ಕೇವಲ ಸಾಂಕೇತಿಕ ಭೇಟಿಗಳಿಗಷ್ಟೇ ಸುಷ್ಮಾ ಅವರನ್ನು ವಿಮಾನ ಹತ್ತಿಸಲಾಗುತ್ತದೆ. ಹಾಗೆಂದು ವಿದೇಶಾಂಗ ಖಾತೆಯಲ್ಲಿ ಬದಲಾವಣೆ ಮಾಡುವ ವಾತಾವರಣವೂ ಸರಕಾರದೊಳಗಿಲ್ಲ. ಸ್ವತಂತ್ರವಾಗಿ ಆಲೋಚಿಸಿ ತೀರ್ಮಾನ ಮಾಡುವಂತಹದು ಅಲ್ಲಿ ಏನೂ ಇಲ್ಲ ಎನ್ನುವುದನ್ನು ಮೊದಲೇ ಘೋಷಿಸಲಾಗಿದೆ. ಯಾವ ದೇಶಗಳ ಜೊತೆಗೆ ಯಾವ ರೀತಿಯ ಸಂಬಂಧಗಳನ್ನು ಹೊಂದಬೇಕು ಎನ್ನುವುದನ್ನು ಆರೆಸ್ಸೆಸ್ ಮತ್ತು ಕೆಲವು ಕಾರ್ಪೊರೇಟ್ ಕುಳಗಳು ನಿರ್ಧರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ನೆರೆಯ ಪಾಕಿಸ್ತಾನ, ಚೀನಾ, ನೇಪಾಳಗಳ ಜೊತೆಗಿನ ಸಂಬಂಧಗಳು ದಿನದಿಂದ ದಿನಕ್ಕೆ ಹದಗೆಡುತ್ತಿವೆೆ. ಗೃಹಖಾತೆಯನ್ನು ನಿಭಾಯಿಸುವಲ್ಲಿ ರಾಜ್‌ನಾಥ್ ಸಿಂಗ್ ಯಶಸ್ವಿಯಾಗಿದ್ದರೆ ದೇಶಾದ್ಯಂತ ಕೇಸರಿ ಉಗ್ರವಾದಿ ಸಂಘಟನೆಗಳು ಈ ಪರಿಯಲ್ಲಿ ವಿಸ್ತರಿಸುತ್ತಿರಲಿಲ್ಲ. ಉಗ್ರವಾದಿಗಳನ್ನು ಮಟ್ಟ ಹಾಕಬೇಕಾದ ಎನ್‌ಐಎ ಅವರ ಪರವಾಗಿ ನ್ಯಾಯಾಲಯದಲ್ಲಿ ಪರೋಕ್ಷ ವಕಾಲತು ಮಾಡುತ್ತಿರಲಿಲ್ಲ. ಉತ್ತರಪ್ರದೇಶ, ಹೈದರಾಬಾದ್ ಹೊತ್ತಿ ಉರಿಯುತ್ತಿರಲಿಲ್ಲ. ಅಂದರೆ ಈ ಬದಲಾವಣೆ ಆಡಳಿತದಲ್ಲಿ ಆಮೂಲಾಗ್ರ ಹೊಸತನ್ನು ಕಂಡುಕೊಳ್ಳುವ ಪ್ರಯತ್ನ ಖಂಡಿತಾ ಅಲ್ಲ. ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಉತ್ತರ ಪ್ರದೇಶದ ಜನರನ್ನು ತಮ್ಮ ಕಡೆಗೆ ಸೆಳೆಯಲು ಕೆಲವು ಸಚಿವ ಸ್ಥಾನಗಳು ಆ ರಾಜ್ಯದ ಪಾಲಾಗುವ ಸಾಧ್ಯತೆಗಳಿವೆ. ಹಾಗೆಯೇ ಕೆಲವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಸಚಿವರನ್ನು ಬದಲಾಯಿಸಿ, ಅಧಿಕಾರವನ್ನು ಉಳಿದವರಿಗೂ ಹಂಚಿ, ಪಕ್ಷದೊಳಗೆ ಎಲ್ಲರನ್ನೂ ಸಂತೃಪ್ತಿ ಪಡಿಸುವ ಉದ್ದೇಶವೂ ಸರಕಾರಕ್ಕಿರಬಹುದು. ಕೆಲವು ಅನುಪಯುಕ್ತ ಖಾತೆಗಳನ್ನು ದಲಿತ, ಅಲ್ಪಸಂಖ್ಯಾತ ನಾಯಕರಿಗೆ ಹೆಸರಿಗಷ್ಟೇ ವರ್ಗಾಯಿಸಿ ಅವರನ್ನು ಓಲೈಸುವ ಪ್ರಯತ್ನವೂ ಈ ಸಂಪುಟ ವಿಸ್ತರಣೆಯ ಮೂಲಕ ನಡೆಯಲಿದೆ. ನಿಜಕ್ಕೂ ಸರಕಾರಕ್ಕೆ ಈ ದೇಶವನ್ನು ಅಭಿವೃದ್ಧಿಯತ್ತ, ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶವಿದ್ದರೆ ಬದಲಾವಣೆ ನಡೆಯಬೇಕಾದುದು ಸಂಪುಟ ವಿಸ್ತರಣೆಯಲ್ಲ. ಅಭಿವೃದ್ಧಿಯ ಕುರಿತಂತೆ ಅದು ಹೊಂದಿರುವ ತನ್ನ ನೀತಿಯನ್ನೇ ಬದಲಿಸಬೇಕಾಗುತ್ತದೆ. ಆದರೆ ನರೇಂದ್ರ ಮೋದಿ ಸಾಗುತ್ತಿರುವ ವೇಗವನ್ನು ಗಮನಿಸಿದರೆ ಆ ಬದಲಾವಣೆ ಸದ್ಯಕ್ಕಂತೂ ನಡೆಯುವಂತಹದಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News