×
Ad

ಸೇನೆಯಲ್ಲಿ ಮಹಿಳಾ ಬೆಟಾಲಿಯನ್ ಆರಂಭಕ್ಕೆ ಪಾರಿಕ್ಕರ್ ಒಲವು

Update: 2016-07-05 23:33 IST

ಹೊಸದಿಲ್ಲಿ, ಜು.5: ರಾಷ್ಟ್ರೀಯ ರಕ್ಷಣಾ ಅಕಾಡಮಿಯಲ್ಲಿ ತರಬೇತಿ ಪಡೆದ ಬಳಿಕ ಯುದ್ಧನೌಕೆಗಳಿಗೆ ನಿಯೋಜಿಸುವುದರಿಂದ ಹಿಡಿದು, ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಗೆ ಹೀಗೆ ಯಾವುದಕ್ಕೆ ಬೇಕಾದರೂ ಸೇರಲು ಅವಕಾಶ ನೀಡುವ ಜೊತೆಗೆ ಇದೀಗ ಹೊಸದಾಗಿ ಸೇನೆಯಲ್ಲಿ ಮಹಿಳಾ ಬೆಟಾಲಿಯನ್ ಆರಂಭಕ್ಕೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಒಲವು ತೋರಿದ್ದಾರೆ.

ಮೂವರು ಮಹಿಳಾ ಪೈಲಟ್‌ಗಳನ್ನು ಭಾರತೀಯ ವಾಯುಪಡೆಗೆ ನಿಯೋಜಿಸಿದ ಬಳಿಕ ಈ ಸಂಬಂಧ ಇದ್ದ ಮಾನಸಿಕ ತಡೆ ನಿವಾರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಚಿಂತನೆಗೆ ಮುಂದಾಗಿದ್ದಾರೆ.
ಎಫ್‌ಐಸಿಸಿಐ ಮಹಿಳಾ ಸಂಘಟನೆ ಜೊತೆ ನಡೆಸಿದ ಸಂವಾದದಲ್ಲಿ ಸಚಿವರು, ಮಹಿಳಾ ಮೇಲಧಿಕಾರಿಗಳ ಆದೇಶಗಳಿಗೆ ಸೈನಿಕರು ಕಿವಿಗೊಡುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ನಾನು ಇದನ್ನು ಒಪ್ಪುವುದಿಲ್ಲ. ಆರಂಭದಲ್ಲಿ ಒಂದಷ್ಟು ಪ್ರತಿರೋಧ ಎದುರಾದರೆ, ಮಹಿಳಾ ಬೆಟಾಲಿಯನ್ ಈ ಬಗ್ಗೆ ನಿಗಾ ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕ್ರಮಗಳು ನಿಧಾನವಾಗಿ ಹಾಗೂ ಸುಲಲಿತವಾಗಿ ನಡೆಯಲಿವೆ. ಆದರೆ ರಾಷ್ಟ್ರದ ಭದ್ರತೆಯನ್ನು ಸಂರಕ್ಷಿಸುವ ಪ್ರಾಥಮಿಕ ಕಾರ್ಯದಲ್ಲಿ ಯಾವ ರಾಜಿಯೂ ಇಲ್ಲ ಎಂದರು. ಮಹಿಳಾ ಬೆಟಾಲಿಯನ್ ಆರಂಭದ ಬಗ್ಗೆ ಮೂರೂ ಸೇನೆಗಳ ಮುಖ್ಯಸ್ಥರ ಜೊತೆ ಚರ್ಚಿಸುವುದಾಗಿ ಸಚಿವರು ಹೇಳಿದರು. ಇದಕ್ಕೆ ಇರುವ ಏಕೈಕ ತಡೆ ಎಂದರೆ ಮೂಲಸೌಕರ್ಯ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News