ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ನೀಡುವುದೇ ಸುಬ್ರಮಣಿಯನ್ ವರದಿ?
ಶಿಕ್ಷಣ ವಲಯದಲ್ಲಿ ಮಹತ್ವದ ಬದಲಾವಣೆಗೆ ಉತ್ತೇಜನ ನೀಡುವಂಥ ಶಿಕ್ಷಣ ನೀತಿಗಾಗಿ ಹಲವು ವರ್ಷಗಳಿಂದ ಕಾಯಲಾಗುತ್ತಿದೆ. ನಿಸ್ತೇಜವಾದ ಕ್ಷೇತ್ರಕ್ಕೆ ಮರುಜೀವ ನೀಡಲು ಸಮರ್ಥವಾದ ನೀತಿ ಬದಲಾವಣೆಯ ನಿರೀಕ್ಷೆಯಲ್ಲಿದೆ ದೇಶ. ಸದ್ಯದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಇಲಾಖೆ ಶಿಕ್ಷಣವನ್ನು ಸಂಘಪರಿವಾರ ಕೇಂದ್ರಿತವಾಗಿಸಿಕೊಂಡು ಅದನ್ನು ಇನ್ನಷ್ಟು ಹದಗೆಡಿಸುತ್ತಿದೆ. ಈ ಹೊತ್ತಿನಲ್ಲೇ ಹೊಸ ಶಿಕ್ಷಣ ನೀತಿಯ ಮೌಲ್ಯಮಾಪನಕ್ಕೆ ನಿಯೋಜಿತವಾಗಿದ್ದ ಟಿ.ಎಸ್.ಆರ್.ಸುಬ್ರಮಣಿಯನ್ ಸಮಿತಿಯ ಬಹು ನಿರೀಕ್ಷಿತ ವರದಿ ಕೊನೆಗೂ ಸಾರ್ವಜನಿಕ ವೇದಿಕೆಗೆ ಬಂದಿದೆ. ಇದು ಮುಂದಿನ ರಾಷ್ಟ್ರೀಯ ಶಿಕ್ಷಣ ನೀತಿಗೆ ಚೌಕಟ್ಟು ಒದಗಿಸುವ ವರದಿಯಾಗಿದ್ದರೂ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅದನ್ನು ಬಿಡುಗಡೆ ಮಾಡಲು ಅಥವಾ ಆ ಬಗ್ಗೆ ಚರ್ಚಿಸಲೂ ನಿರಾಕರಿಸಿರುವುದು ನಿಜಕ್ಕೂ ವಿಷಾದನೀಯವಾಗಿದೆ.
ಕೇಂದ್ರ ಸರಕಾರ ಈ ವರದಿಯನ್ನು ಬಿಡುಗಡೆ ಮಾಡುವುದಕ್ಕೇ ಆಸಕ್ತಿ ತೋರದೇ ಇರುವುದರಿಂದ ಅದರಲ್ಲಿರುವ ಬಹುತೇಕ ಅಂಶಗಳು ಬಹಿರಂಗವಾಗದೇ ಉಳಿದಿವೆ. ಪ್ರಾಥಮಿಕ ವರದಿಗಳ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸಮಿತಿಯ ವರದಿಯನ್ನು ನಾವು ಚರ್ಚಿಸಬಹುದಾಗಿದೆ ಮತ್ತು ಇದರಲ್ಲಿ ಅನುಷ್ಠಾನಕ್ಕೆ ತರಬಹುದಾದ ಅಂಶಗಳನ್ನು ಗುರುತಿಸಬಹುದಾಗಿದೆ. ಶಿಕ್ಷಣ ವಲಯದ ಬಗ್ಗೆ ಹಾಗೂ ಸ್ಥಿತಿಗತಿಯ ವಾಸ್ತವಗಳನ್ನು ಮೌಲ್ಯಮಾಪನ ಮಾಡಿ, ನ್ಯಾಯಸಮ್ಮತ ಚಿತ್ರಣವನ್ನು ಈ ವರದಿ ನೀಡಿದೆ. ಶಿಕ್ಷಣದ ಕಡೆಗೆ ಸರಕಾರ ಹೆಚ್ಚು ಆಸಕ್ತಿಯನ್ನು ವಹಿಸುವ ಬಗ್ಗೆ ಈ ಸಮಿತಿ ಒತ್ತಿ ಹೇಳುತ್ತದೆ. ಅಂದರೆ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ವಿಕೇಂದ್ರೀಕರಣಗೊಳಿಸಬೇಕು ಮತ್ತು ಈ ಕ್ಷೇತ್ರಕ್ಕಾಗಿ ಇನ್ನಷ್ಟು ಹೂಡಿಕೆಯನ್ನು ಮಾಡಬೇಕು ಮತ್ತು ಶಿಕ್ಷಕರ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಮಿತಿ ಅಭಿಪ್ರಾಯ ಪಡುತ್ತದೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಬಗ್ಗೆಯೂ ಸಮಿತಿ ಮಾತನಾಡುತ್ತದೆ. ಸೂಕ್ತ ಅರ್ಹತೆ ಇಲ್ಲದ ಹಾಗೂ ಕಡಿಮೆ ವೇತನದ ಗುತ್ತಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಬೋಧನೆ ಮತ್ತು ಕಲಿಕೆಉ ಗುಣಮಟ್ಟಕ್ಕೆ ಮಾರಕವಾಗುತ್ತದೆ ಎಂದು ಸಮಿತಿ ಸೂಚಿಸಿರುವುದು ಸ್ವಾಗತಾರ್ಹವಾಗಿದೆ. ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಬಜೆಟ್ ಅನುದಾನದಲ್ಲಿ ಕಡಿತ ಮಾಡಿರುವುದೇ ಪ್ರಮುಖ ಕಾರಣ ಎನ್ನುವುದು ವರದಿಯಲ್ಲಿ ಸ್ಪಷ್ಟವಾಗಿದ್ದು, ಇದು ಮಹತ್ವದ ಅಂಶಗಳಲ್ಲೊಂದು. ಈ ನಿಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಿಸುವ ಅನಿವಾರ್ಯತೆಯನ್ನು ವರದಿ ಪ್ರತಿಪಾದಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿಲ್ಲ. ಎರಡೂ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಒದಗಿಸುವ ಅನುದಾನವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಯಾವುದೇ ಮಹತ್ವದ ಮೌಲ್ಯವನ್ನು ಸಾಧಿಸಬೇಕಾದರೆ ಈ ಪರಿಸ್ಥಿತಿ ಬದಲಾಗಬೇಕು ಎಂದು ವರದಿಯು ಸ್ಪಷ್ಟಪಡಿಸಿದೆ. ಸಮಿತಿಯ ಈ ವರದಿ ಕೇಂದ್ರಕ್ಕೆ ಪಥ್ಯವಾಗದೇ ಇದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇಡೀ ಶಿಕ್ಷಣ ಕ್ಷೇತ್ರವನ್ನೇ ಏಕ ಮುಖವಾಗಿ ಖಾಸಗಿಯವರಿಗೆ ಒಪ್ಪಿಸಲು ನೋಡುತ್ತಿರುವ ಸರಕಾರ ಇವೆಲ್ಲದರ ಬಗ್ಗೆ ವಿಶೇಷ ಆಸಕ್ತಿ ವಹಿಸಿದಂತಿಲ್ಲ. ಆದುದರಿಂದಲೇ, ಸಮಿತಿಯ ವರದಿಯನ್ನು ಸಾರಾಸಗಟಾಗಿ ಕಸದ ಬುಟ್ಟಿಗೆ ಹಾಕುವ ಆಲೋಚನೆಯಲ್ಲಿದೆ ಕೇಂದ್ರ ಸರಕಾರ. ಶಿಕ್ಷಣವೆನ್ನುವುದು ಲಾಭದಾಯಕ ದಂಧೆಯಾಗಿ ಪರಿವರ್ತನೆಗೊಂಡಿರುವ, ಅದನ್ನು ಉದ್ಯಮ ಎಂದು ನೋಡಲು ಆರಂಭಿಸಿರುವ ಈ ದಿನಗಳಲ್ಲಿ ಸಾಮಾಜಿಕ ದೃಷ್ಟಿಯಿಂದ ಸಮಿತಿ ಸೂಚಿಸುವ ನಿರ್ದೇಶವನ್ನು ಸರಕಾರ ಒಪ್ಪಿಕೊಳ್ಳುವುದು ಕಷ್ಟ. ಲಾಭವಿಲ್ಲದ ಒಂದು ಕ್ಷೇತ್ರಕ್ಕೆ ಯಾಕಾಗಿ ಹೂಡಿಕೆ ಮಾಡಬೇಕು ಎಂದು ಸರಕಾರ ಪರೋಕ್ಷವಾಗಿ ಕೇಳುತ್ತಿದೆ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ಶಿಕ್ಷಣಕ್ಕೆ ಸಂಬಂಧಿಸಿದ ದೇಶದ ಪ್ರಮುಖ ಸಂಸ್ಥೆ ಗಳಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾನಿಲಯ, ಶಿಕ್ಷಕರ ಶಿಕ್ಷಣದ ರಾಷ್ಟ್ರೀಯ ಮಂಡಳಿ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಂಥ ಸಂಸ್ಥೆಗಳ ಸುಧಾರಣೆ ಬಗ್ಗೆ ವರದಿ ಸಾಕಷ್ಟು ವಿವರಿಸಿದೆ. ಇದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಈ ಸಂಸ್ಥೆಗಳ ಬಗ್ಗೆ ಇದುವರೆಗೂ ಸಚಿವಾಲಯ ಜಾಣಕುರುಡು ಪ್ರದರ್ಶಿಸುತ್ತಾ ಬಂದಿತ್ತು. ವರದಿಯಲ್ಲಿ ಕಂಡುಬಂದಿರುವ ಇನ್ನೊಂದು ಸ್ವಾಗತಾರ್ಹ ಅಂಶವೆಂದರೆ ಶಿಕ್ಷಣಕ್ಕೆ ಸಂಬಂಧಿಸಿದ ಜಿಲ್ಲಾ ಮಾಹಿತಿ ವ್ಯವಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದರ ಪರಾಮರ್ಶೆ. ಶಾಲಾ ಶಿಕ್ಷಣದ ಬಗೆಗಿನ ಅಧಿಕೃತ ಅಂಕಿಅಂಶಗಳನ್ನು ಎನ್‌ಯುಇಪಿಎ ನಿರ್ವಹಿಸುತ್ತದೆ. ಶಿಕ್ಷಣ ವ್ಯವಸ್ಥೆಯ ಮಾಹಿತಿ ಹಾಗೂ ಅಂಕಿಅಂಶ ಬಗೆಗಿನ ಸಮಸ್ಯೆಗಳನ್ನು ಖಚಿತಪಡಿಸುವುದು ಅನಿವಾರ್ಯವಾಗಿತ್ತು. ಇದೇ ಮೊದಲ ಬಾರಿಗೆ ಮಾಹಿತಿ ವ್ಯವಸ್ಥೆಯಲ್ಲಿನ ಲೋಪ ದೋಷಗಳ ಬಗ್ಗೆ ಮತ್ತು ಅಸಮರ್ಪಕತೆ ಬಗೆ ವರದಿಯು ಗಮನಹರಿಸಿದೆ.
ಆದರೆ ದುರದೃಷ್ಟಕರ ಅಂಶವೆಂದರೆ, ಈ ಅಂಕಿಅಂಶ ವ್ಯವಸ್ಥೆಯ ಲೋಪಗಳ ಬಗ್ಗೆ ಮಾಡಿರುವ ವಿಶ್ಲೇಷಣೆ ಅಥವಾ ಶಿಫಾರಸುಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೇಲೆ ಗೂಬೆ ಕೂರಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ವ್ಯಾಖ್ಯೆಗಳನ್ನು ಮತ್ತು ಅಂದಾಜಿನ ವಿಧಾನಗಳನ್ನು ಸಮರ್ಪಕಗೊಳಿಸುವುದು, ಮಾಹಿತಿ ಸಂಗ್ರಹಕ್ಕೆ, ಮೂಲಭೂತ ಮಾಹಿತಿಗಳ ಕ್ರೋಡೀಕರಣ ಹಾಗೂ ನಿರ್ವಹಣೆಯಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಲು ಶಿಫಾರಸು ಮಾಡಲಾಗಿದೆ.
ಆದರೆ ಅಚ್ಚರಿಯ ಅಂಶವೆಂದರೆ, ಖಾಸಗಿ ವಲಯ ಹೇಗೆ ಶಿಕ್ಷಣದ ಮೇಲೆ ತನ್ನ ಪರಿಣಾಮ ವನ್ನು ಬೀರುತ್ತಾ ಬಂದಿದೆ ಮತ್ತು ಅದಕ್ಕೆ ಸರಕಾರ ಹೇಗೆ ಕಡಿವಾಣವನ್ನು ಹಾಕಬಹುದು ಎನ್ನುವುದರ ಬಗ್ಗೆ ಸಮಿತಿ ವಿಶೇಷ ಆಸಕ್ತಿ ವಹಿಸದೇ ಇರುವುದು. ಸಾರ್ವಜನಿಕ ವಲಯದಲ್ಲಿ ಶಿಕ್ಷಣ ಇನ್ನಷ್ಟು ಪರಿಣಾಮಕಾರಿ ಯಾಗಿ ಜಾರಿಯಾಗಬೇಕಾದರೆ ಖಾಸಗಿ ವಲಯದ ಪಾತ್ರದ ವಿಶ್ಲೇಷಣೆ ಅಗತ್ಯವಾಗಿ ನಡೆಯಬೇಕಾಗಿದೆ. ಸರಕಾರ ಖಾಸಗಿ ವಲಯವನ್ನು ಹೆಚ್ಚು ಅವಲಂಬಿಸಿರುವ ಈ ಸಂದರ್ಭದಲ್ಲಿ ಇದು ಅನಿವಾರ್ಯವಾಗಿತ್ತು. ಸಮಿತಿಯ ವರದಿಯಲ್ಲಿನ ಮುಖ್ಯವಾದ ಲೋಪವೆಂದರೆ, ಆಡಳಿತ ವ್ಯವಸ್ಥೆಯಲ್ಲಿನ ಹುಳುಕುಗಳ ಬಗ್ಗೆ ವಿಮರ್ಶಾತ್ಮಕ ದೃಷ್ಟಿ ಹರಿಸಲು ವಿಫಲವಾಗಿರುವುದು. ಉದಾಹರಣೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಚೇರಿಗಳು ಹಾಗೂ ರಾಜ್ಯದ ಶಿಕ್ಷಣ ಇಲಾಖೆಗಳು ಇದರಲ್ಲಿ ಪ್ರಮುಖವಾದವು. ವಾಸ್ತವವಾಗಿ ಇವುಗಳಲ್ಲಿ ವಿಸತ್ತೃತ ಪ್ರಮಾಣದ ಸುಧಾರಣೆಗಳ ಅಗತ್ಯವಿದೆ. ಕಳಪೆ ಸಾಮರ್ಥ್ಯ, ಕಾರ್ಯ ನಿರ್ವಹಣೆಗೆ ಅಸಮರ್ಪಕ ವಿಧಿವಿಧಾನ ಅನುಸರಿಸುವುದು, ತೀರಾ ಕಳಪೆ ಎನಿಸುವ ಅಭಿಪ್ರಾಯ ಸಂಗ್ರಹ ವ್ಯವಸ್ಥೆ ಹಾಗೂ ಹೊಣೆಗಾರಿಕೆಯ ಅಂಶಗಳು ಇಲ್ಲದಿರುವುದು ಇಂಥ ಸಂಸ್ಥೆಗಳ ಸಾಂಸ್ಥಿಕ ಅಧಃಪತನಕ್ಕೆ ಕಾರಣವಾಗಿವೆ. ಈ ಕಾರಣದಿಂದಾಗಿಯೇ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎನ್ನುವುದನ್ನು ವರದಿ ಉಲ್ಲೇಖಿಸಿದೆ. ಆದ್ದರಿಂದ ಪ್ರತ್ಯೇಕ ಶಿಕ್ಷಣ ಸೇವೆಯ ಕುರಿತಂತೆ ಸಾಮಾನ್ಯ ಶಿಫಾರಸು ಮಾಡಿರುವುದು ಶಿಕ್ಷಣ ಆಡಳಿತ ವ್ಯವಸ್ಥೆಯಲ್ಲಿ ಸಮಸ್ಯೆಗಳಿವೆ ಎನ್ನುವುದನ್ನು ಸೌಮ್ಯವಾಗಿ ವಿವರಿಸುವ ವಿಧಾನವಾಗಿದೆ. ಸಮಿತಿಯ ವರದಿಗಳಲ್ಲಿ ಹಲವು ಲೋಪಗಳೂ ಇವೆ. ಹಾಗೆಯೇ ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಸುಧಾರಣೆಗೆ ಕಾರಣವಾಗಬಹುದಾದ ಕೆಲವು ಮಹತ್ವದ ಸಲಹೆಗಳೂ ಇವೆ. ಮುಖ್ಯವಾಗಿ ಈ ಸಮಿತಿಯ ವರದಿಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಚಿವಾಲಯ ಅದನ್ನು ಬಿಡುಗಡೆ ಮಾಡಿ ಚರ್ಚೆಗೆ ದಾರಿ ಮಾಡಿಕೊಡಬೇಕು.
ಅಂದರೆ ಸಮಿತಿ ಕೆಲವು ರೋಗಗಳನ್ನಾದರೂ ಪತ್ತೆ ಮಾಡಿದೆ. ರೋಗಗಳನ್ನು ಪತ್ತೆ ಮಾಡಿದಾಕ್ಷಣ ಅದು ವಾಸಿ ಯಾಗುವುದಿಲ್ಲ. ಅದಕ್ಕೆ ಔಷಧಿ ಕೊಡುವ ಕೆಲಸವೂ ನಡೆಯಬೇಕು. ಈ ನಿಟ್ಟಿನಲ್ಲಿ ಸರಕಾರದ ಹೊಣೆ ಬಹು ದೊಡ್ಡದಿದೆ. ಅದೇ ದುರ್ಬಲ ತಳಹದಿಯ ಮೇಲೆ ಮತ್ತೆ ಮತ್ತೆ ಕಟ್ಟಡಗಳನ್ನು ನಿರ್ಮಿಸುತ್ತಾ ಹೋದರೆ, ಅಂತಿಮ ವಾಗಿ ನಮ್ಮ ಶಿಕ್ಷಣ ಕ್ಷೇತ್ರವೇ ಕುಸಿದು ಬೀಳಬಹುದು. ಶಿಕ್ಷಣ ಕ್ಷೇತ್ರ ಒಟ್ಟು ಸಮಾಜದ ಆತ್ಮ ಎನ್ನುವುದನ್ನು ಸರಕಾರ ಗಮನಿಸಬೇಕು. ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ಶಿಕ್ಷಣ ಕ್ಷೇತ್ರದ ಕೊಡುಗೆ ದೊಡ್ಡದು. ಶಿಕ್ಷಣ ಕ್ಷೇತ್ರ ವನ್ನು ನಿರ್ಲಕ್ಷಿಸಿದ ಅಭಿವೃದ್ಧಿಯ ಮಂತ್ರ ಬರೇ ಉಗುಳಾಗಿಯಷ್ಟೇ ಉಳಿಯಬಹುದು. ಆದುದರಿಂದ ತಾನು ಮರೆತು ಬಿಟ್ಟ ಕ್ಷೇತ್ರದ ಕಡೆಗೆ ಸರಕಾರ ಮತ್ತೆ ತನ್ನ ದೃಷ್ಟಿಯನ್ನು ಹಾಯಿಸಬೇಕಾಗಿದೆ. ಶಿಕ್ಷಣ ಕ್ಷೇತ್ರವನ್ನು ಸುಧಾ ರಿಸುವುದೆಂದರೆ ಪಠ್ಯಗಳನ್ನು ಬದಲಿಸುವುದು ಅಥವಾ ಅದರೊಳಗೆ ಆರೆಸ್ಸೆಸ್ ಚಿಂತನೆಯನ್ನು ತುರುಕುವುದು ಅಲ್ಲ. ಶಿಕ್ಷಣ ಕ್ಷೇತ್ರದ ಒಟ್ಟು ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವ ಕಡೆಗೆ ಸರಕಾರ ಗಮನಹರಿಸಬೇಕು.