ಗಾಝಾ: ಅಂಧ ಮುಸ್ಲಿಂ ಗೆಳೆಯನಿಗೆ ನಮಾಝಿಗೆ ಹೋಗಲು ಕ್ರೈಸ್ತ ಗೆಳೆಯನ ಆಸರೆ
ಗಾಝಾ: ರಂಝಾನ್ ಮಾಸ ಧರ್ಮ ಅಥವಾ ವರ್ಗಗಳ ವ್ಯತ್ಯಾಸವಿಲ್ಲದೆ ನೆರೆಹೊರೆಯವರು ಏಕತೆಯಿಂದ ಪರಸ್ಪರರಿಗೆ ನೆರವಾಗುವುದನ್ನು ಕಂಡಿದೆ. ಸಮುದಾಯದ ಪ್ರಜ್ಞೆ ಎದ್ದುಕಾಣುತ್ತಿದ್ದು, ಜನರು ಪರಸ್ಪರರ ನೆರವಿಗೆ ಧಾವಿಸುತ್ತಿದ್ದಾರೆ. ಆದರೆ ಇವರೆಲ್ಲರ ನಡುವೆ ಎದ್ದು ಕಾಣುತ್ತಿರುವುದು 55 ವರ್ಷ ಪ್ರಾಯದ ಕ್ರಿಶ್ಚಿಯನ್ ಸಮುದಾಯದ ಕಮಲ್ ತರಾಝಿ ಮತ್ತು ಆತನ ಕುರುಡ ನೆರೆಯವ 45 ವರ್ಷದ ಹತೀಮ್ ಖ್ರೈಸ್ ಅವರದು.
ರಂಝಾನ್ ಮಾಸದಲ್ಲಿ ತರಾಝೀ ಪ್ರತೀದಿನ ಖ್ರೈಸ್‌ರನ್ನು ಅಲ್-ಬರ್ನೋ ಮಸೀದಿಗೆ ದಿನಕ್ಕೆ ಐದು ಬಾರಿ ಕರೆದುಕೊಂಡು ಹೋಗಿ ಪ್ರಾರ್ಥನೆಗೆ ನೆರವಾಗುತ್ತಿದ್ದರು. ಪ್ರಾರ್ಥನೆ ಮುಗಿಯುವವರೆಗೂ ಕಾದು ಸ್ನೇಹಿತನನ್ನು ಜೊತೆಯಲ್ಲಿ ಮನೆಗೆ ಕರೆದೊಯ್ಯುತ್ತಾರೆ. ಮೊದಲ ಪ್ರಾರ್ಥನೆ ಬೆಳಗಿನ ಜಾವ ನಡೆದರೆ, ಕೊನೆಯ ಪ್ರಾರ್ಥನೆ ಸಂಜೆ ನಡೆಯುತ್ತದೆ. ಆದರೆ ನಿತ್ಯವೂ ಈ ಸಹಾಯ ಮಾಡುವುದು ತರಾಝಿಗೆ ಹೊರೆಯೆನಿಸುವುದಿಲ್ಲ.
ನಾವು 15 ವರ್ಷಗಳಿಂದ ಸ್ನೇಹಿತರು. ನಮ್ಮ ಸಂತೋಷ ಮತ್ತು ನೋವುಗಳನ್ನು ಹಂಚಿಕೊಂಡಿದ್ದೇವೆ. ನಾವೆಂದೂ ಪ್ರತ್ಯೇಕವಾಗಿದ್ದೇ ಇಲ್ಲ. ನಾನು ಕ್ರಿಶ್ಚಿಯನ್ ಮತ್ತು ಆತ ಮುಸ್ಲಿಂ ಎನ್ನುವುದು ಎಲ್ಲರಿಗೂ ಗೊತ್ತು. ನಮ್ಮ ಸ್ನೇಹದ ಬಗ್ಗೆ ಎಲ್ಲರೂ ಅಚ್ಚರಿ ಪಡುತ್ತಾರೆ ಎನ್ನುತ್ತಾರೆ ತರಾಝಿ. ಈ ಸ್ನೇಹ ಎಷ್ಟು ಆಳವಾಗಿದೆ ಎಂದರೆ ವರ್ಷದ ಉಳಿದ ದಿನಗಳಲ್ಲೂ ಖ್ರೈಸ್ ಜೊತೆಗೂಡಿ ತರಾಝಿ ಮಸೀದಿಗೆ ಹೋದರೆ ತರಾಝಿ ಜೊತೆಗೂಡಿ ಖ್ರೈಸ್ ಭಾನುವಾರ ಚರ್ಚಿಗೆ ಹೋಗುತ್ತಾರೆ.
ಔಷಧಿ ತಜ್ಞರಾಗಿದ್ದ ಖ್ರೈಸ್ ಐದು ವರ್ಷಗಳ ಹಿಂದೆ ಔದ್ಯಮಿಕ ಅಪಘಾತದಲ್ಲಿ ಕಣ್ಣು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ತರಾಝಿ ಬಹಳ ನೆರವಾಗಿದ್ದಾರೆ ಎಂದು ಖ್ರೈಸ್ ಹೇಳುತ್ತಾರೆ. ಇವರಿಬ್ಬರು ವರ್ಷಗಳಿಂದ ಬಡತನ, ಜೈಲು ಮತ್ತು ಯುದ್ಧದ ಸಂದರ್ಭದಲ್ಲಿ ಪರಸ್ಪರರಿಗೆ ನೆರವಾಗಿದ್ದಾರೆ. ತರಾಝಿಗೂ ಸಮಸ್ಯೆ ಬಂದಿತ್ತು. ಒಂಭತ್ತು ವರ್ಷಗಳ ಕಾಲ ಅವರು 1980ರಿಂದ 1990ವರೆಗೆ ತಮ್ಮ ರಾಜಕೀಯ ಚಳವಳಿ ಕಾರಣ ಜೈಲಿನಲ್ಲಿದ್ದರು. ಈಗ ಪಿಂಚಣಿಯಲ್ಲಿ ಬದುಕುವುದು ಅವರಿಗೆ ಕಷ್ಟವಾಗಿದೆ. ಹಾಗಿದ್ದರೂ ಪರಸ್ಪರರ ಜೊತೆ ಖುಷಿಯಾಗಿದ್ದಾರೆ.ಜೊತೆಯಾಗಿ ಖರೀದಿಗೆ ಹೋಗುವುದು, ಹಳೇ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಾರೆ. ತರಾಝಿ ಸ್ನೇಹಿತನಿಗೆ ಪುಸ್ತಕ, ಪತ್ರಿಕೆ ಓದಿ ಹೇಳುತ್ತಾನೆ. ರಾಜಕೀಯವನ್ನು ಇಬ್ಬರೂ ಚರ್ಚಿಸುತ್ತಾರೆ. ಜೊತೆಯಾಗಿ ರಂಝಾನ್ ಉಪವಾಸ ತ್ಯಜಿಸಿದ್ದಾರೆ. ಜೊತೆಯಾಗಿ ಇಫ್ತಾರ್ ಊಟ ಮಾಡಿದ್ದಾರೆ. ಮಸೀದಿಗೆ ಹೋಗಿದ್ದಾರೆ. ರಾತ್ರಿಯಲ್ಲಿ ಗಾಝಾ ಮತ್ತು ಪ್ಯಾಲೆಸ್ತೀನಿ ಬಗ್ಗೆ ಮಾತನಾಡುತ್ತಾರೆ. ಗಾಝಾದಲ್ಲಿ ಕ್ರಿಶ್ಚಿಯನ್ ಮುಸ್ಲಿಂನನ್ನು ರಕ್ಷಿಸಿದರೆ, ಮುಸ್ಲಿಮರು ಕ್ರಿಶ್ಚಿಯನ್ನರನ್ನು ರಕ್ಷಿಸುತ್ತಾರೆ. ನಾವೆಲ್ಲರೂ ಒಂದೇ. ಎಲ್ಲರೂ ಆರ್ಥಿಕ ದಿಗ್ಭಂಧನದಿಂದ ತೊಳಲಾಡುತ್ತೇವೆ ಎನ್ನುತ್ತಾರೆ ತರಾಝಿ.ಮುಸ್ಲಿಮರ ಹಬ್ಬ ಮತ್ತು ಕ್ರಿಶ್ಚಿಯನ್ನರ ಹಬ್ಬಗಳೆಲ್ಲವನ್ನೂ ಇಲ್ಲಿ ಜೊತೆಯಾಗಿ ಆಚರಿಸಲಾಗುತ್ತದೆ. ಗಾಜಾದಲ್ಲಿ ಈಗ 1300 ಕ್ರಿಶ್ಚಿಯನ್ನರಷ್ಟೇ ಇದ್ದಾರೆ. 2008-09ರಲ್ಲಿ ಅವರ ಸಂಖ್ಯೆ 3000 ಇತ್ತು. ಕೆಲವರು ಯುದ್ಧದ ಭೀತಿಯಿಂದ ಊರು ಬಿಟ್ಟಿದ್ದಾರೆ. ಇಲ್ಲಿನ ಸಂಪ್ರದಾಯವಾದಿ ಚರ್ಚ್ ಬಡ ಮುಸ್ಲಿಮರಿಗೆ ಆಹಾರ ಪೊಟ್ಟಣಗಳನ್ನು ಕೊಡುತ್ತದೆ. ಕಳೆದ ಈಸ್ಟರ್ ಹಬ್ಬದಲ್ಲಿ ಕ್ರಿಶ್ಚಿಯನ್ನರಿಗೆ ಗಾಝಾದಿಂದ ಹೊರಗೆ ಪ್ರಯಾಣಿಸಲು ಇಸ್ರೇಲ್ ಅವಕಾಶ ಕೊಟ್ಟಾಗ ಹುಳಿಯಾಗುವ ಬದಲು ಮುಸ್ಲಿಂ ಜನಾಂಗದವರು ಖುಷಿಪಟ್ಟಿದ್ದರು. ಇಸ್ರೇಲಿ ಅಧಿಕಾರದಲ್ಲಿ ಎರಡೂ ಜನಾಂಗ ಇಲ್ಲಿ ಸಮಾನವಾಗಿ ನೋವನ್ನು ಅನುಭವಿಸಿವೆ.