ಭೇಂಡಿ ಬಝಾರ್‌ಗೆ ಬರಲಿದೆ ಅತ್ಯಾಧುನಿಕ ಹೊಸರೂಪ
ಭೇಂಡಿ ಬಝಾರ್‌ನಲ್ಲಿ ಇರುವ ಸೈಫುದ್ದೀನ್ ತಾಹಿರಾಲಿ ಪಠಾಣ್ವಾಲ ಮನೆಯಲ್ಲಿ ಒಂದು ಫ್ರಿಡ್ಜ್, ಟಿವಿ ಸೆಟ್, ಮಂಚಗಳು ಮತ್ತು ಎರಡು ಕಪಾಟುಗಳಿವೆ. ಅದರಲ್ಲಿ ಒಂದು ಬಹಳ ಪುರಾತನವಾದುದು. ಒಂದು ಮೂಲೆಯಲ್ಲಿ ಅಡುಗೆ ನಡೆಯುತ್ತದೆ. ಕಿಟಕಿಗೆ ವಾತಾನುಕೂಲಿ ನೇತಾಡುತ್ತಿದೆ. ಇದೆಲ್ಲವೂ 125 ಚದರ ಅಡಿಯಲ್ಲಿದೆ. ಶೌಚಾಲಯವು ಹೊರಗೆ ಇದ್ದು, ಇಡೀ ಫ್ಲೋರ್‌ನ ಕುಟುಂಬಗಳು ಅದನ್ನು ಬಳಸುತ್ತವೆ. ಪಠಾಣ್ವಾಲ ಇಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ನೆಲೆಸಿದ್ದಾರೆ. ಮೂರನೆ ಮಗಳು ಮದುವೆಯಾಗಿ ಹೋಗಿದ್ದಾಳೆ. ಆತನಿಗೂ ಮನೆ ಬದಲಿಸುವ ಇಚ್ಛೆ ಇದ್ದರೂ ಮುಂಬೈನ ದುಬಾರಿ ಆಸ್ತಿ ಬೆಲೆಗಳಿಂದಾಗಿ ಸುಮ್ಮನಿದ್ದಾರೆ. ಆದರೆ ಈಗ ಹೊಸ ಯೋಜನೆಯಿಂದಾಗಿ ಪಠಾಣ್ವಾಲರಿಗೆ ಮತ್ತು ಅವರಂತಹ ಸಾವಿರಾರು ಮಂದಿಗೆ ಭರವಸೆ ಸಿಕ್ಕಿದೆ. ಬಾಡಿಗೆದಾರನಾಗುವ ಅವರಿಗೆ ಉಚಿತವಾಗಿ ತಾನು ಈಗ ಇರುವುದಕ್ಕಿಂತ ಮೂರು ಪಟ್ಟು ದೊಡ್ಡದಾದ ಹೊಸ ಅಪಾರ್ಟ್ ಮೆಂಟಲ್ಲಿ ನೆಲೆಸುವ ಅವಕಾಶ ಸಿಗಲಿದೆ.
ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿದಾರರು ತಮ್ಮ ಸಣ್ಣ ಮುದ್ರಣದ ಹಿಂದಿರುವ ಅಹಿತಕರ ವಿಷಯಗಳನ್ನು ಮುಚ್ಚಿಟ್ಟು ನೀಡುವ ಭರವಸೆಗಳಂತೆ ಇದು ಕಾಣಬಹುದು. ‘‘ಇದು ಸಮುದಾಯವನ್ನು ಮೇಲೆತ್ತುವ ನಿಟ್ಟಿನ ಯೋಜನೆಯೇ ವಿನಾ ವಾಣಿಜ್ಯ ಉದ್ದೇಶಗಳಿಲ್ಲ’’ ಎನ್ನುತ್ತಾರೆ ಸೈಫೀ ಬರ್ಹಾನಿ ಅಪ್ಲಿಫ್ಟ್ಮೆಂಟ್ ಟ್ರಸ್ಟ್ ವಕ್ತಾರ ಮುರ್ತಝ ಸದ್ರಾವಾಲ. ಈ ಯೋಜನೆ ಇಲ್ಲಿನ ಚಿತ್ರಣವನ್ನೇ ಬದಲಿಸಲಿದೆ. ನಗರದ ಪುನರ್‌ನಿರ್ಮಾಣದ ಯೋಜನೆ ಇದು. ಹಿಂದೆಂದೂ ಭಾರತ ನೋಡಿರದೆ ಇರುವಂತಹ ಯೋಜನೆಯನ್ನು ಪಠಾಣ್ವಾಲಾ ನಂಬಿರುವ ದಾವೂದಿ ಬೋಹ್ರಾ ಸಮುದಾಯದ ಧಾರ್ಮಿಕ ನಾಯಕ ಸೈಯದ್‌ನ ಮುಫ್ದಾಲ್ ಸೈಫುದ್ದೀನ್ ಮುಂದಿಟ್ಟಿದ್ದಾರೆ. ದಾವೂದಿ ಬೋಹ್ರಾ ಸಮುದಾಯ ಉನ್ನತ ವ್ಯಾಸಂಗ ಮಾಡಿರುವ ಶಿಯಾಗಳ ವಿಭಾಗ. ಇವರು ಮೂಲತಃ ಯೆಮನ್‌ನ ವ್ಯಾಪಾರಿಗಳು ಎನ್ನಲಾಗುತ್ತಿದ್ದು, 11ನೆ ಶತಮಾನದಲ್ಲಿ ಭಾರತಕ್ಕೆ ಬಂದಿದ್ದರು. ಮಹಿಳೆಯರು ಧರಿಸುವ ರಿದಾ ಎನ್ನುವ ಬಣ್ಣದ ಬುರ್ಖಾಗಳು ಮತ್ತು ತಲೆ ಮೇಲಿನ ಹೆಣೆದ ಟೋಪಿ ಮತ್ತು ಗಡ್ಡಗಳ ಪುರುಷರು ಈ ಸಮುದಾಯದವರು.
ಸೈಯದ್‌ನ ಅವರಿಗೆ ಬೊಹ್ರಾ ಸಮುದಾಯದ ಮೇಲೆ ಧಾರ್ಮಿಕ ಮತ್ತು ಸಾಮಾಜಿಕ ನಿಯಂತ್ರಣವಿದೆ. ಅವರ ಬೆಂಬಲಿಗರು ತಮ್ಮ ಮಕ್ಕಳಿಗೆ ಹೆಸರಿಡಲೂ ಸೈಯದ್‌ನ ಅವರತ್ತ ನೋಡುತ್ತಾರೆ. ಸೈಯದ್‌ನ ಅವರನ್ನು ನಂಬದ ವ್ಯಕ್ತಿ ಸಾಮಾಜಿಕವಾಗಿ ಬಹಿಷ್ಕಾರ ಹೊಂದುವ ಸಾಧ್ಯತೆಯೂ ಇರಬಹುದು. ‘‘ಭೇಂಡಿ ಬಝಾರ್‌ಗೆ ಸಂಪೂರ್ಣ ಹೊಸ ರೂಪ ಕೊಡುವ ಯೋಜನೆ ಸೈಯದ್‌ನ ಅವರದು. ಇಲ್ಲಿನ ಜನರ ಜೀವನದ ಬಗ್ಗೆ ಅವರು ಬಹಳ ಕಾಳಜಿ ಹೊಂದಿದ್ದಾರೆ. ಹೀಗಾಗಿ ಜೀವನ ಸುಧಾರಣೆ ಅವರ ಉದ್ದೇಶವಾಗಿದೆ’’ ಎನ್ನುತ್ತಾರೆ ಟ್ರಸ್ಟ್ ಸಿಇಒ ಅಬ್ಬಾಸ್ ಮಾಸ್ಟರ್. ಭೇಂಡಿ ಬಝಾರ್‌ನಲ್ಲಿ ಶೇ. 70ರಿಂದ 80ರಷ್ಟು ಮಂದಿ ಬೋಹ್ರಾ ಸಮುದಾಯದವರು. ಹೀಗಾಗಿ ಇದನ್ನು ಬೋಹ್ರಿ ಮೊಹಲ್ಲಾ ಎಂದೂ ಕರೆಯಲಾಗುತ್ತದೆ. ಬಹುತೇಕರು ತಲೆಮಾರುಗಳಿಂದ ಇಲ್ಲಿ ನೆಲೆಸಿದ್ದು, ಸಮೀಪದಲ್ಲೇ ತಮ್ಮ ವ್ಯಾಪಾರ ವನ್ನೂ ಹೊಂದಿದ್ದಾರೆ. ಐದು ಮಸೀದಿಗಳಲ್ಲಿ ಮೂರು ಬೊಹ್ರಾ ಸಮುದಾಯಕ್ಕೆ ಸೇರಿದೆ. ರೌದತ್ ತಹೇರದಲ್ಲಿ ಸೈಯದ್‌ನರ ತಂದೆ ಮತ್ತು ಮುತ್ತಾತ ರನ್ನು ಧಪನ ಮಾಡಲಾಗಿದೆ. ವರ್ಷಗಳಿಂದ ಇಲ್ಲಿನ ಕಟ್ಟಡಗಳು ಶಿಥಿಲವಾಗುತ್ತಲೇ ಹೋಗಿವೆ. ಜೋರಾಗಿ ಮಳೆ ಬಿದ್ದರೆ ಇವು ಕುಸಿಯಲಾರಂಭಿಸುತ್ತವೆ. ಅಲ್ಲದೆ ಹಿರಿಯ ನಿವಾಸಿಗಳಿಗೆ ಮೂರ್ನಾಲ್ಕು ಮಹಡಿ ಹತ್ತುವುದೂ ಕಷ್ಟವಾಗುತ್ತಿದೆ. ಭೇಂಡಿ ಬಝಾರ್ ಎನ್ನುವುದು ತರಕಾರಿಯಿಂದ ಬಂದ ಹೆಸರಲ್ಲ. ಬದಲಾಗಿ 1889ರ ಇಲ್ಲಿನ ಕ್ರಾಫರ್ಡ್ ಮಾರುಕಟ್ಟೆಯನ್ನು ಉದ್ದೇಶಿಸಿ ಹೇಳುತ್ತಿದ್ದ ‘ಬಿಹೈಂಡ್ ದ ಬಝಾರ್’ ಎನ್ನುವ ಹೆಸರೇ ಹೀಗೆ ಬದಲಾಗಿದೆ. ಕಾರ್ಮಿಕರಿಗಾಗಿ ಈ ಮನೆಗಳನ್ನು ಕಟ್ಟಲಾಗಿತ್ತು. ಬೊಹ್ರಾ ಮತ್ತು ಇತರ ಮುಸ್ಲಿಮರು 20ನೆ ಶತಮಾನದಲ್ಲಿ ಇಲ್ಲಿ ಬಂದು ನೆಲೆಸಲಾರಂಭಿಸಿದ್ದರು. ಈ ಸ್ಥಳ ಹಲವು ದಂತಕತೆಗಳನ್ನು ಕೊಟ್ಟಿದೆ. ಹಿಂದೂಸ್ಥಾನಿ ಸಂಗೀತ ಘರಾನ ಇದೇ ಹೆಸರನ್ನು ಹೊಂದಿದೆ. ಆಹಾರಕ್ಕೂ ಇಲ್ಲಿನ ಕಂಪಿದೆ. ರಮಝಾನ್ ಸಂದರ್ಭದಲ್ಲಿ ಮುಂಬೈ ನಿವಾಸಿಗಳು ದೂರದೂರದಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿನ ಮಟನ್ ಸ್ಟ್ರೀಟ್ ಅಥವಾ ಚೋರ್ ಬಝಾರ್ ಅತೀ ಪ್ರಸಿದ್ಧ. ಅಸಲಿ, ನಕಲಿ ವಸ್ತುಗಳನ್ನು ಹುಡುಕುವವರಿಗೆ, ಹಳೇ ಜಮಾನದ ವಸ್ತುಗಳು, ಪೀಠೋಪಕರಣಗಳು, ಆಟೋ ಭಾಗಗಳು, ಸಿನೆಮಾ ಪೋಸ್ಟರ್‌ಗಳು, ಹಳೇ ವಿನಿಲ್ ರೆಕಾರ್ಡ್‌ಗಳು, ಲ್ಯಾಂಪ್‌ಗಳು ಮತ್ತಿತರ ವಸ್ತುಗಳಿಗೂ ಕುಖ್ಯಾತ.
ಮುಂಬೈ ನಿವಾಸಿಗಳಿಗೆ ಭೇಂಡಿ ಬಝಾರ್ ಮುಸ್ಲಿಮರ ಅಡ್ಡಾ. ಪಾಕ್ಮೋಡಿಯ ರಸ್ತೆ ಭೇಂಡಿ ಬಝಾರ್ ಹೃದಯಭಾಗ. ದೇಶದ ಕುಖ್ಯಾತ ಕ್ರಿಮಿನಲ್ ದಾವೂದ್ ಇಬ್ರಾಹೀಂ ಇಲ್ಲೇ ಬೆಳೆದದ್ದು. ಕುಖ್ಯಾತನಾದ ಮೇಲೆ ಅವರ ಕುಟುಂಬ ಬೇರೆಡೆಗೆ ಹೋಯಿತು. ಆದರೆ ಕುಖ್ಯಾತಿ ಈ ಪ್ರದೇಶಕ್ಕೆ ಅಂಟಿಕೊಂಡಿತು. ‘‘ಇಲ್ಲಿಗೆ ಪಿಜ್ಜಾ ಬರುವುದೂ ಕಷ್ಟ. ಯಾರೂ ಇಲ್ಲಿಗೆ ತಂದುಕೊಡಲು ಸಿದ್ಧರಿರುವುದಿಲ್ಲ. ಗೌರವಯುತವಾಗಿ ನೆಲೆಸಿರುವ ನಮ್ಮಂತಹವರು ಇದರಿಂದ ಕಷ್ಟಪಡುತ್ತಿದ್ದೇವೆ’’ ಎಂದು ಹಿರಿಯರೊಬ್ಬರು ಹೇಳುತ್ತಾರೆ. ಪಠಾಣ್ವಾಲ ಸ್ವತಃ ಈ ಕುಖ್ಯಾತಿಯ ಬಿಸಿ ಅನುಭವಿಸಿದವರು. ‘‘ನನ್ನ ಮಗಳಿಗೆ ಮದುವೆ ಮಾಡಬೇಕಾದಾಗ ಭಾವೀ ಹುಡುಗ ನಾವು ಭೇಂಡಿ ಬಝಾರ್ ನಿವಾಸಿಗಳೆಂದು ತಿಳಿದು ಚಿಂತೆಗೊಳಗಾಗಿದ್ದ’’ ಎನ್ನುತ್ತಾರೆ. ಆತನಿಗೆ ಮತ್ತು ಆತನಂತಹ ಹಲವರಿಗೆ ಟ್ರಸ್ಟ್ ಈ ಸ್ಥಳಕ್ಕೆ ಹೊಸ ರೂಪ ನೀಡುವುದು ಬಹಳ ಖುಷಿಯಾಗಿದೆ. ನಿವಾಸಿಗಳಿಗೆ ಗಗನಚುಂಬಿ ಕಟ್ಟಡಗಳಲ್ಲಿ ಮನೆ ಸಿಗಲಿದೆ. ಕನಿಷ್ಠ 350 ಚದರ ಕಿ.ಮೀ. ಅವರಿಗೆ ಸಿಗಲಿದ್ದು, ಹಾಲ್, ಮಲಗುವ ಕೋಣೆ ಮತ್ತು ಒಳಾಂಗಣ ಶೌಚಾಲಯ ಸಿಗಲಿದೆ. ನಿವಾಸಿಗಳಿಗೆ ಇದು ಅತ್ಯುತ್ತಮ ಅವಕಾಶ.
ಈಗ ಬೀದಿಯಲ್ಲಿರುವ ಉದ್ಯಮಗಳು, ಆಹಾರ ಮಳಿಗೆಗಳು ಮತ್ತು ಅನಧಿಕೃತ ಬಝಾರ್‌ಗಳು ಶಾಪಿಂಗ್ ಮಾಲ್‌ಗಳಿಗೆ ಹೋಗಲಿವೆ. ಮೊದಲ ಕೆಲವು ಮಹಡಿಗಳು ಮತ್ತು ಕಟ್ಟಡಗಳನ್ನು ವ್ಯಾಪಾರಿಗಳು ಪಡೆಯಲಿದ್ದಾರೆ. ಆದರೆ ಇದರ ನಿರ್ಮಾಣಕ್ಕೆ ಎಷ್ಟು ಸಮಯ ಹಿಡಿಯಬಹುದು ಎನ್ನುವುದು ಪ್ರಶ್ನೆ. ಈ 16.5 ಎಕರೆ ಮುಂಬೈನ ಅತಿ ಹಳೇ ಪ್ರದೇಶ. ಇದು ಹೊಳೆಯುವ ಸ್ಮಾರ್ಟ್ ಸಿಟಿಯಾಗಿ ಬದಲಾಗಲಿದೆ. ಪಾದಚಾರಿ ಸ್ನೇಹಿ ರಸ್ತೆಗಳು ಮತ್ತು ಭೇಂಡಿ ಬಝಾರ್ ಮರೆಯಾಗಲಿದೆ. ಮಸೀದಿಗಳು, ರೌದತ್ ತಾಹಿರಾ ಹಾಗೇ ಇರುವಂತೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕೆಲಸ ನಡೆಯುತ್ತಿದೆ. ಶತಮಾನದ ಹಳೇ ಕಟ್ಟಡಗಳನ್ನು ಮುರಿದು ಭೇಂಡಿ ಬಝಾರಿಗೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಈಗಾಗಲೇ ನೂರಾರು ಕುಟುಂಬಗಳು ಪರ್ಯಾಯವಾಗಿ ಕೊಡಲಾದ ಆಶ್ರಯ ತಾಣಗಳಿಗೆ ಹೋಗಿದ್ದಾರೆ. ಹಲವಾರು ಅಂಗಡಿಗಳು ಕೆಲವು ಕಿ.ಮೀ. ದೂರದ ತಾತ್ಕಾಲಿಕ ಮಾಲ್ ಅಲ್ಲಿ ಸ್ಥಾನ ಪಡೆದಿವೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವ ಆರೋಪಗಳಿವೆ.
ಈಗಾಗಲೇ 16.5 ಎಕರೆಯಲ್ಲಿ 250 ಕಟ್ಟಡಗಳನ್ನು, 3,000 ಮನೆಗಳನ್ನು ಮತ್ತು 1,250 ಅಂಗಡಿಗಳನ್ನು ನೆಲಸಮ ಮಾಡಲಾಗಿವೆ. ಇವುಗಳನ್ನು 13 ಟವರ್‌ಗಳಲ್ಲಿ ಸ್ಥಳಾಂತರಿಸಲಾಗುತ್ತಿದೆ. ಸಂಪೂರ್ಣ ಯೋಜನೆ ರೂ. 4,000 ಕೋಟಿಗಳದ್ದಾಗಿದೆ. ನಾಲ್ಕು ದುಬಾರಿ ಗಗನಚುಂಬಿ ಕಟ್ಟಡಗಳಲ್ಲಿ 65 ಮಹಡಿಗಳು ಇರಲಿವೆ. ಆರಂಭದಲ್ಲಿ ಈ ಯೋಜನೆ ಕಾಗದದಲ್ಲಿಯೇ ಇತ್ತು. ಆದರೆ 2009ರಲ್ಲಿ ಹೊಸ ಯೋಜನೆಗೆ ಮಹಾರಾಷ್ಟ್ರ ಸರಕಾರ ಹೊಸ ಹಾದಿ ತೋರಿಸಿತು. ಸಂಪೂರ್ಣ ಪರಿಸರವನ್ನು ಗುಂಪುಗಳಾಗಿ ಅಭಿವೃದ್ಧಿಪಡಿಸುವ ಯೋಜನೆ. ಹಳೆ ನಿವಾಸಿಗಳಿಗೆ ಹೊಸ ಜಾಗಕ್ಕೆ ವರ್ಗಾಯಿಸಿದ ವೆಚ್ಚವನ್ನು ಕಟ್ಟಡ ನಿರ್ಮಾಪಕರು ಭರಿಸುತ್ತಾರೆ. ಕನಿಷ್ಠ ಶೇ. 70ರಷ್ಟು ಬಾಡಿಗೆದಾರರು ಮತ್ತು ಮಾಲಕರು ಒಪ್ಪಿದಲ್ಲಿ ಮಾತ್ರ ಆಸ್ತಿಯನ್ನು ಬದಲಿಸಲು ಅವಕಾಶವಿರುತ್ತದೆ ಎಂದು ನಿಯಮ ಹೇಳಿತ್ತು. ಆದರೆ ಪ್ರತಿಯೊಬ್ಬರು ವಿಭಿನ್ನ ಬೇಡಿಕೆ ಇಡುವಾಗ ಖಾಸಗಿ ಅಭಿವೃದ್ಧಿದಾರರಿಗೆ ಇದನ್ನು ಭರಿಸುವುದು ಸಾಧ್ಯವಾಗಲಿಲ್ಲ. ಹೀಗಾಗಿ ಆಸಕ್ತಿ ಕಡಿಮೆಯಾಯಿತು. ಆದರೆ ಸೈಯದ್‌ನ ಮಾತೇ ಕಾನೂನು ಆಗಿರುವಾಗ ಅವರ ಟ್ರಸ್ಟ್ ಇದಕ್ಕಾಗಿ ಮುಂದೆ ಬರುವುದನ್ನು ಯಾರೂ ಇಲ್ಲ ಎನ್ನಲು ಸಾಧ್ಯವಿಲ್ಲ. ವ್ಯಾಜ್ಯಗಳಿಲ್ಲದಂತೆ ಮಾಡಲು ಅವರು ಪ್ರತೀ ಮಾಲಕರನ್ನು ಒಪ್ಪಿಸಿದರು. ಆರಂಭದಲ್ಲಿ ಹಣ ಮತ್ತು ಹೊಸ ಕಟ್ಟಡದಲ್ಲಿ ಅಧಿಕ ಜಾಗ ಪಡೆಯುವ ಬೇಡಿಕೆಗಳಿಂದಾಗಿ ಯೋಜನೆ ನಿಧಾನವಾದರೂ ನಂತರ ಎಲ್ಲರೂ ಒಪ್ಪಿಕೊಂಡರು. ಈಗ ಹೊಸ ಮನೆಗಳಲ್ಲಿ ತಮ್ಮದೇ ಮನೆಗಳಿಗಾಗಿ ಕಾಯುತ್ತಿದ್ದಾರೆ. ಹಾಗಿದ್ದರೂ ನಿಧಾನವಾಗಿ ಕೆಲಸ ನಡೆಯುತ್ತಿದೆ. ಹೊಸ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಈ ಯೋಜನೆಯಲ್ಲಿ ಅತೀವ ಆಸಕ್ತಿ ತೋರಿಸಿವೆ. ರಾಜ್ಯ ಸರಕಾರ ಬಹಳ ಸಹಕಾರಿಯಾಗಿದೆ. ಪ್ರತೀ ತಿಂಗಳು ನಾವು ಯೋಜನೆಗಳ ಬಗ್ಗೆ ಚರ್ಚಿಸುತ್ತೇವೆ ಎನ್ನುತ್ತದೆ ಟ್ರಸ್ಟ್. ವಿವಿಧ ಅಧಿಕಾರಿಗಳ ಅಂಗೀಕಾರವೂ ಸುಲಭವಾಗಿ ಸಿಗುತ್ತಿದೆ. ಕಳೆದ ಮೇನಲ್ಲಿ ಟ್ರಸ್ಟ್ ಅತ್ಯುತ್ತಮ ಸ್ಮಾರ್ಟ್ ಸಿಟಿ ಯೋಜನೆ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಹೀಗಾಗಿ ಭೇಂಡಿ ಬಝಾರ್ ಹೊಸ ರೂಪ ಶೀಘ್ರವೇ ಕಾಣುವ ಸಾಧ್ಯತೆಯಿದೆ.
ಆದರೆ ಈ ಪರಿಯ ಮರು ಅಭಿವೃದ್ಧಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಸ್ವಂತ ಮನೆ ಇದ್ದವರಿಗೆ ಇದರಿಂದ ನೆರವಾಗಬಹುದು. ಅವರು ಆಧುನಿಕ ಫ್ಲಾಟ್ ಮತ್ತು ಸೌಲಭ್ಯ ಪಡೆಯುತ್ತಾರೆ. ಆದರೆ ವ್ಯಾಪಾರಿಗಳು ಮತ್ತು ಗ್ರಾಹಕರ ನಡುವಿನ ಸಂಪರ್ಕ ಹಿಂದಿನ ರೀತಿ ಇರದು. ಚೋರ್ ಬಝಾರ್‌ನಲ್ಲಿ ಆರಾಮವಾಗಿ ಬೀದಿ ಸುತ್ತಿ ಖರೀದಿ ಮಾಡುವಂತಹ ವ್ಯವಸ್ಥೆ ಮಾಲ್ ವ್ಯವಸ್ಥೆಯಲ್ಲಿ ಇರುವುದಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಅಲ್ಲದೆ ಪರಂಪರೆಯೊಂದು ಅಳಿಸಿ ಹೋಗುವ ಕಾಳಜಿಯೂ ಕಂಡಿದೆ. ಪಾರಂಪರಿಕ ಕಟ್ಟಡಗಳು, ವಾಸ್ತು, ವರ್ಚಸ್ಸು ಇಲ್ಲವಾಗಲಿದೆ. ‘‘ಕಟ್ಟಡಗಳು ಸಾಮಾನ್ಯ ಗಗನಚುಂಬಿಗಳಿಗಿಂತ ಭಿನ್ನವಾಗಿರುವ ಪ್ರಯತ್ನ ಮಾಡುತ್ತಿದ್ದೇವೆ. ಈಜಿಪ್ಟ್ ಶೈಲಿಯ ವಾಸ್ತುವನ್ನು ಬಳಸುತ್ತಿದ್ದೇವೆ. ಭೇಂಡಿ ಬಝಾರ್ ಸಾಂಕೇತಿಕ ರೂಪ ವಾದ ಇತಿಹಾಸದ ದಾಖಲೆಗಳನ್ನು ಉಳಿಸಿಕೊಳ್ಳುವ ಯೋಜನೆಯನ್ನೂ ಆರಂಭಿಸಿದ್ದೇವೆ’’ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಮಾಹಿತಿ ನೀಡುತ್ತಾರೆ.
ಎಲ್ಲಾ ಗಗನಚುಂಬಿ ಕಟ್ಟಡಗಳೂ ನಿರ್ಮಾಣವಾಗಲು ಕನಿಷ್ಠ 7-10 ವರ್ಷ ಬೇಕೆಂದು ಟ್ರಸ್ಟ್ ಹೇಳಿದೆ. ಭೇಂಡಿ ಬಝಾರ್‌ಸಿಂಗಾಪೂರ ರೀತಿಯ ಅಭಿವೃದ್ಧಿ ಕಾಣಲಿದೆ. ಪಠಾಣ್ವಾಲ ಮತ್ತು ಅವರ ಕುಟುಂಬ ತಮ್ಮ ಹೊಸ ಮನೆಗೆ ಸ್ಥಳಾಂತರಗೊಳ್ಳುವ ದಿನಕ್ಕಾಗಿ ಕಾಯುತ್ತಿದ್ದಾರೆ. ಅದು ಬೇಗನೇ ಬಾರದು ಎನ್ನುವುದು ಅವರಿಗೂ ತಿಳಿದಿದೆ. ಆದರೆ ಅವರು ಕಾಯಲು ಸಿದ್ಧರಿದ್ದಾರೆ. ಇದು ನಮಗೆ ಗುರುಗಳ ಉಡುಗೊರೆ. ಇಲ್ಲದೆ ಇದ್ದಲ್ಲಿ ಮುಂಬೈನಲ್ಲಿ ನಮ್ಮದೇ ಮನೆ ಪಡೆಯುವ ಅವಕಾಶ ಹೇಗೆ ಸಿಗುತ್ತಿತ್ತು ಎನ್ನುತ್ತಾರೆ ಪಠಾಣ್ವಾಲ