ಡಿವೈಎಸ್ಪಿ ಗಣಪತಿ ಆತ್ಮಹತ್ಯೆ: ಸಿಬಿಐ ತನಿಖೆಯಾಗಲಿ
ಅಧಿಕಾರಿಗಳು ರಾಜಕಾರಣಿಗಳ ಜೊತೆಗೆ ಅನೈತಿಕ ಸಂಬಂಧಗಳನ್ನು ಹೊಂದಿ, ವೃತ್ತಿಯ ಜೊತೆಗೆ ವೈಯಕ್ತಿಕ ಅಜೆಂಡಾಗಳನ್ನು ಕಲಬೆರಕೆ ಮಾಡಲು ಹೊರಟಾಗ ಸಂಭವಿಸುವ ದುರಂತಕ್ಕೆ ಉದಾಹರಣೆಯಾಗಿದ್ದಾರೆ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ. ಜಿಲ್ಲಾಧಿಕಾರಿ ಡಿ.ಕೆ. ರವಿ, ಡಿವೈಎಸ್ಪಿ ಮಲ್ಲಪ್ಪ ಹಂಡಿಬಾಗ್ ಸಾಲಿನಲ್ಲಿ ಇದೀಗ ಗಣಪತಿಯವರ ಹೆಸರೂ ರಾರಾಜಿಸುತ್ತಿದೆ. ಇತ್ತೀಚೆಗೆ ಇಂತಹದೇ ರಾಜಕೀಯದ ಸುಳಿಗೆ ಸಿಲುಕಿ ಅನುಪಮಾ ಶೆಣೈ ಕೂಡ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿ, ಬಳಿಕ ಸಾರ್ವಜನಿಕವಾಗಿ ಅಲವತ್ತುಕೊಳ್ಳಲು ಆರಂಭಿಸಿದರು.
ತಮ್ಮ ಸ್ವಯಂಕೃತಾಪರಾಧಗಳೇ ಅವರನ್ನು ಅಂತಿಮವಾಗಿ ದುರಂತದೆಡೆಗೆ ಮುನ್ನಡೆಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಳಸ್ತರದಿಂದ ಬಂದ ಡಿ.ಕೆ. ರವಿ ಜಿಲ್ಲ್ಲಾಧಿಕಾರಿಯಂತಹ ಉನ್ನತ ಹುದ್ದೆಯನ್ನು ತನ್ನದಾಗಿಸಿಕೊಂಡದ್ದು ಒಂದು ದೊಡ್ಡ ಸಾಹಸಗಾಥೆ. ಆದರೆ ಅದನ್ನು ಅತ್ಯಂತ ಕ್ಷುಲ್ಲಕ ಕಾರಣಕ್ಕಾಗಿ ಕಳೆದುಕೊಂಡರು ಮಾತ್ರವಲ್ಲ, ಜೀವವನ್ನೇ ಬಲಿಕೊಟ್ಟರು. ಪ್ರೇಮ ವ್ಯವಹಾರ, ರಿಯಲ್ ಎಸ್ಟೇಟ್ ವ್ಯವಹಾರ ಇತ್ಯಾದಿಗಳ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲಾಗದೆ ಅಂತಿಮವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು. ಡಿವೈಎಸ್ಪಿ ಮಲ್ಲಪ್ಪ ಹಂಡಿಬಾಗ್ ಅವರ ದುರಂತವೂ ಇದಕ್ಕೆ ಹೊರತಲ್ಲ. ಹಣದ ಅವಶ್ಯಕತೆ ಅವರನ್ನು ದುಷ್ಕರ್ಮಿಗಳ ಸಂಘದ ಬಲಿಪಶುವನ್ನಾಗಿಸಿತು. ಸಂಘಪರಿವಾರದ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ರೌಡಿಗಳು ಅವರನ್ನು ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಂಡರು. ಅಂತಿಮವಾಗಿ ಅವರ ಕೃತ್ಯ ಬಹಿರಂಗವಾಗಿ, ಕೆಲಸ ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾದಾಗ ಆತ್ಮಹತ್ಯೆ ಮಾಡಿಕೊಂಡರು.
ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಇನ್ನೊಂದು ಅತಿರೇಕದ್ದು. ಆಕೆ ರಾಜಕಾರಣಿಯೋ, ಪೊಲೀಸ್ ಅಧಿಕಾರಿಯೋ ಎಂದು ಸಂಶಯಿಸುವಂತಹ ಸನ್ನಿವೇಶ ನಿರ್ಮಾಣವಾಯಿತು. ತಾನೇ ರಾಜೀನಾಮೆ ನೀಡಿ, ಯಾವ ಕಾರಣಕ್ಕೂ ರಾಜೀನಾಮೆ ಹಿಂದೆಗೆದುಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಘೋಷಿ ಸಿದರು. ಇಷ್ಟೆಲ್ಲ ಆದ ಮೇಲೆ ತನ್ನ ರಾಜೀನಾಮೆ ಸ್ವೀಕರಿಸಿದ್ದಕ್ಕೆ ಸರಕಾರವನ್ನು ಹಿಗ್ಗಾಮುಗ್ಗಾ ಹೀಯಾಳಿಸತೊಡಗಿದರು. ಇದಾದ ಬಳಿಕ ಸಂಘಪರಿವಾರದ ನಾಯಕರ ಜೊತೆ ಬಹಿರಂಗವಾಗಿ ಗುರುತಿಸಿಕೊಳ್ಳತೊಡಗಿದರು. ಒಂದು ರೀತಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ಆಕೆಯನ್ನು ತಮಗೆ ಪೂರಕವಾಗಿ ಬಳಸಿಕೊಂಡವು. ಇಲಾಖೆಯಲ್ಲೇ ಇದ್ದು ಭ್ರಷ್ಟ ವ್ಯವಸ್ಥೆಯೊಂದಿಗೆ ಹೋರಾಡುವ ಬದಲು, ರಾಜಕಾರಣಿಯಾಗಲು ಹೊರಟು ಇನ್ನೇನೋ ಆಗಿ ಇದೀಗ ಮೂಲೆ ಸೇರಿದ್ದಾರೆ. ಇದೀಗ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಯೂ ಸ್ವಯಂಕೃತಾಪರಾಧಕ್ಕೆ ತೆತ್ತ ಬೆಲೆಯೇ ಎಂಬ ಅನುಮಾನವನ್ನು ರಾಜ್ಯದ ಜನರಲ್ಲಿ ಹುಟ್ಟಿಸಿದೆ.
ಆತ್ಮಹತ್ಯೆಗೊಳಗಾಗಿರುವ ಡಿವೈಎಸ್ಪಿ ಗಣಪತಿ, ತನ್ನ ಆತ್ಮಹತ್ಯೆಗೆ ಇಂತಹ ಪೊಲೀಸ್ ಅಧಿಕಾರಿಗಳು, ಇಂತಹ ಸಚಿವರೇ ಹೊಣೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅಂದರೆ ಅವರ ಒತ್ತಡ ತನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಅವರ ಮೇಲೆ ಎಂತಹ ಒತ್ತಡ, ಯಾವ ಸಂದರ್ಭದಲ್ಲಿ ಈ ಒತ್ತಡ ಬಿದ್ದಿದೆ ಎನ್ನುವ ವಿವರಗಳನ್ನು ಅವರು ಬಹಿರಂಗ ಪಡಿಸಿಲ್ಲ. ಆದರೆ ಅವರ ವೃತ್ತಿ ಇತಿಹಾಸವನ್ನು ನೋಡಿದರೆ ಅವರು ಎರಡೆರಡು ಬಾರಿ ಅಮಾನತುಗೊಂಡಿದ್ದಾರೆ. ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಅವರ ಮೇಲೆ ಚಾರ್ಜ್‌ಶೀಟ್ ಕೂಡ ಸಲ್ಲಿಸಲಾಗಿದೆ. ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇವರ ಮೇಲೆ ಲಕ್ಷಾಂತರ ರೂ. ಮುಳುಗಿಸಿದ ಆರೋಪವಿದೆ.
ಈ ಸಂಬಂಧ ತನಿಖೆ ನಡೆದು, ಇವರನ್ನು ಅಪರಾಧಿ ಎಂದು ಇಲಾಖೆ ಗುರುತಿಸಿತ್ತು. ಅಪರಾಧಿಗಳಿಂದ ಒಂದೂವರೆ ಕೋಟಿ ಹಣವನ್ನು ವಸೂಲಿ ಮಾಡಿ, ಕಡಿಮೆ ಲೆಕ್ಕವನ್ನು ತೋರಿಸಿದ ಆರೋಪ ಇವರ ಮೇಲಿತ್ತು. 79 ಲಕ್ಷ ರೂಪಾಯಿಗಳಿಗೆ ಈ ಅಸಾಮಿ ಲೆಕ್ಕವನ್ನೇ ತೋರಿಸಲಿಲ್ಲ. ಈ ಸಂಬಂಧ ಈತನನ್ನು ಒಂದು ತಿಂಗಳು ಅಮಾನತಿನಲ್ಲಿಡಲಾಗಿತ್ತು. ಹಾಗೆಯೇ ಬೆಂಗಳೂರಿನಲ್ಲಿ ಇವರು ಮಾಡಿದ ಎನ್‌ಕೌಂಟರ್ ಒಂದು ನಕಲಿ ಎಂದು ಸಾಬೀತಾಗಿತ್ತು. ಈ ಬಗ್ಗೆಯೂ ಉನ್ನತಾಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಂಡಿದ್ದರು. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇವರ ಕಾರ್ಯನಿರ್ವಹಣೆಯ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಿಕೆಯಾಗಿತ್ತು. ಮಂಗಳೂರಿನಲ್ಲಿ ಚರ್ಚ್ ದಾಳಿಗೆ ಸಂಬಂಧಪಟ್ಟಂತೆ ವರ ಕಾರ್ಯನಿರ್ವಹಣೆ ಬೆಚ್ಚಿ ಬೀಳಿಸುವಂತಹದು. ಚರ್ಚ್‌ನೊಳಗೆ ಪ್ರಾರ್ಥನೆಗೆಂದು ನೆರೆದಿದ್ದ ಕ್ರಿಶ್ಚಿಯನ್ನರ ಮೇಲೆ, ಮಹಿಳೆಯರೂ ಎಂದು ನೋಡದೆ ಬರ್ಬರವಾಗಿ ಲಾಠಿಜಾರ್ಜ್ ಮಾಡಿದ ಹೆಗ್ಗಳಿಕೆಯನ್ನು ಇವರು ಹೊಂದಿದ್ದರು. ಸಂಘಪರಿವಾರದೊಂದಿಗೆ ನೇರ ಸಂಬಂಧವನ್ನು ಹೊಂದಿದ್ದ ಆರೋಪ ಇವರ ಮೇಲಿದೆ. ವೃತ್ತಿ ಸಂಬಂಧವಾಗಿ ಇಷ್ಟೆಲ್ಲ ಕಳಂಕವನ್ನು ಮೈಮೇಲೆ ಅಂಟಿಸಿಕೊಂಡಿರುವ ಈ ವ್ಯಕ್ತಿ, ತನ್ನ ಮೇಲೆ ಉನ್ನತ ಅಧಿಕಾರಿಗಳು ಒತ್ತಡವನ್ನು ಹೇರಿದ್ದರು ಎಂದರೆ ಅದು ಪೂರ್ಣವಾಗಿ ನಂಬುವುದಕ್ಕೆ ಅರ್ಹವಾದುದಲ್ಲ.
ಕೆಲವು ವರ್ಷಗಳಿಂದ ಗಣಪತಿ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದರು, ಖಿನ್ನತೆ, ನರದೌರ್ಬಲ್ಯಗಳಿಂದ ಬಳಲುತ್ತಿದ್ದರು ಎನ್ನುವುದನ್ನು ಅವರ ತಂದೆಯೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಅವರ ಸೋದರ ತಮ್ಮಯ್ಯ ಕೂಡ ಡಿವೈಎಸ್ಪಿಯಾಗಿದ್ದು, ಅವರೂ ಇದನ್ನೇ ಹೇಳುತ್ತಾರೆ. ಮಾನಸಿಕವಾಗಿ ಸೋದರ ಸಂಪೂರ್ಣವಾಗಿ ಹತೋಟಿ ಕಳೆದುಕೊಂಡಿದ್ದ ಎಂದೇ ಅವರು ಅಭಿಪ್ರಾಯ ಪಡುತ್ತಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ದಾಖಲೆಗಳೂ ಇವೆ. ಅನುಕಂಪದ ಆಧಾರದ ಮೇಲೆ ಅವರನ್ನು ಐಜಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು ಎಂದೂ ಹೇಳಲಾಗುತ್ತದೆ. ಇಷ್ಟಕ್ಕೂ ತನ್ನ ಮೇಲಿನ ಅಮಾನತನ್ನು ಹಿಂದೆಗೆಯಬೇಕು ಎಂದು ಇವರು ಅಂದಿನ ಗೃಹ ಸಚಿವರನ್ನು ಮನವಿ ಮಾಡಿದ್ದರು ಎನ್ನಲಾಗುತ್ತಿದೆ. ಒಂದು ವೇಳೆ ಆಗ ಆ ಮನವಿಯನ್ನು ಗೃಹಸಚಿವ ಜಾರ್ಜ್ ತಿರಸ್ಕರಿಸಿದ್ದರೆ ಅದು ಅಪರಾಧ ಹೇಗಾಗುತ್ತದೆ? ಅಂದು ನಡೆದ ಆ ಘಟನೆಯನ್ನು ಮುಂದಿಟ್ಟು, ಇಂದು ಇವರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಇನ್ನೊಂದು ಪ್ರಶ್ನೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಕ್ಷಣದಲ್ಲಿ ಈ ಅಧಿಕಾರಿ ಮಾಡಿದ ಆರೋಪವನ್ನು ಪೂರ್ಣ ಪ್ರಮಾಣದಲ್ಲಿ ಗಂಭೀರವಾಗಿ ಸ್ವೀಕರಿಸಲು ಸಾಧ್ಯವಿಲ್ಲ.
ಈ ನಿಟ್ಟಿನಲ್ಲಿ ಒಂದು ಸಮಗ್ರ ತನಿಖೆಯಷ್ಟೇ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಬಹುದು. ರಾಜ್ಯ ಸರಕಾರ ಈಗಾಗಲೇ ಗಣಪತಿ ಆತ್ಮಹತ್ಯೆಯನ್ನು ಸಿಐಡಿಗೆ ವಹಿಸಿದೆ. ಆದರೆ ಈಗಾಗಲೇ ಗಣಪತಿಯ ಪರವಾಗಿ ಬೀದಿಗಿಳಿದಿರುವ ವಿರೋಧ ಪಕ್ಷಗಳು ಸಿಐಡಿ ವರದಿಯನ್ನು ಖಂಡಿತಾ ಒಪ್ಪುವುದಿಲ್ಲ. ಸಂಪುಟದಲ್ಲಿ ಮಹತ್ವದ ಖಾತೆಯನ್ನು ಹೊಂದಿರುವ ಸಚಿವರ ಮೇಲೇ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನ್ಯಾಯಸಮ್ಮತವಲ್ಲ. ಇಡೀ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಕರಣ ಇದಾಗಿರುವುದರಿಂದ, ಈ ತನಿಖೆಯನ್ನು ಸಿಬಿಐಗೆ ವಹಿಸುವುದೇ ಸರಕಾರಕ್ಕೆ ಕ್ಷೇಮ. ಈ ಮೂಲಕ ತನಿಖೆಯ ವಿಶ್ವಾಸಾರ್ಹತೆ ಉಳಿಯುತ್ತದೆ. ಸಿಬಿಐ ಕೇಂದ್ರದ ಕೈಯಲ್ಲಿರುವುದರಿಂದ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಿಬಿಐ ವರದಿಯ ಕುರಿತಂತೆ ರಾಜ್ಯ ಬಿಜೆಪಿ ನಾಯಕರು ಆಕ್ಷೇಪವೆತ್ತಲಾರರು. ಆದುದರಿಂದ ಅನಗತ್ಯ ಗದ್ದಲ, ಪ್ರತಿಭಟನೆಗಳಿಗೆ ಅವಕಾಶ ಕೊಡದೆ, ತಕ್ಷಣ ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು.