ಕೊರಿಯದಿಂದ ಸಬ್‌ಮರೀನ್‌ನಿಂದ ಹಾರಿಸುವ ಕ್ಷಿಪಣಿ ಪರೀಕ್ಷೆ?
Update: 2016-07-09 23:52 IST
ಸಿಯೋಲ್, ಜು. 9: ಉತ್ತರ ಕೊರಿಯ ತನ್ನ ಪೂರ್ವದ ಕರಾವಳಿಯಲ್ಲಿ ಸಬ್‌ಮರೀನ್‌ನಿಂದ ಉಡಾಯಿಸುವ ಪ್ರಕ್ಷೇಪಕ ಕ್ಷಿಪಣಿಯಂತೆ ಕಾಣುವ ಶಸ್ತ್ರ ವ್ಯವಸ್ಥೆಯೊಂದರ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ, ಕ್ಷಿಪಣಿಯು ಎಷ್ಟು ದೂರ ಹಾರಿದೆ ಹಾಗೂ ಎಲ್ಲಿ ಸಮುದ್ರಕ್ಕೆ ಅಪ್ಪಳಿಸಿದೆ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು. ಸಬ್‌ಮರೀನ್‌ನಿಂದ ಹಾರಿಸುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಉತ್ತರ ಕೊರಿಯ ನಡೆಸುತ್ತಿರುವ ಪ್ರಯತ್ನಗಳು ಅದರ ಎದುರಾಳಿಗಳು ಮತ್ತು ನೆರೆಯ ದೇಶಗಳಿಗೆ ಕಳವಳದ ವಿಷಯವಾಗಿದೆ. ಯಾಕೆಂದರೆ, ಸಮುದ್ರದ ತಳದಲ್ಲಿರುವ ಸಬ್‌ಮರೀನ್‌ಗಳಿಂದ ಹಾರುವ ಕ್ಷಿಪಣಿಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದು ಕಷ್ಟ.