×
Ad

ತಂದೆಯ ಹತ್ಯೆಯ ಸೇಡು ತೀರಿಸುವೆ

Update: 2016-07-10 23:51 IST

ದುಬೈ,ಜು.10: ತನ್ನ ತಂದೆಯನ್ನು ಹತ್ಯೆಗೈದ ಅಮೆರಿಕದ ವಿರುದ್ಧ ಸೇಡು ತೀರಿಸುವುದಾಗಿ ಅಲ್‌ಖಾಯಿದಾ ನಾಯಕ ಉಸಾಮಾ ಬಿನ್ ಲಾದೆನ್‌ನ ಪುತ್ರ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ಧ್ವನಿಮುದ್ರಿತ ಸಂದೇಶವೊಂದರಲ್ಲಿ ಬೆದರಿಕೆ ಹಾಕಿದ್ದಾನೆ. ‘‘ವಿ ಆರ್ ಆಲ್ ಒಸಾಮಾ’’ ಎಂಬ ಶೀರ್ಷಿಕೆಯ 21 ನಿಮಿಷಗಳ ಭಾಷಣದಲ್ಲಿ ಹಂಝಾ ಬಿನ್ ಲಾದೆನ್, ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ವಿರುದ್ಧ ಅಲ್‌ಖಾಯದಾದ ಸಮರವು ಮುಂದುವರಿಯಲಿದೆಯೆಂದು ಘೋಷಿಸಿರುವುದಾಗಿ ಆನ್‌ಲೈನ್ ಬೇಹುಗಾರಿಕಾ ಸಂಸ್ಥೆಯಾದ ಎಸ್‌ಐಟಿಇ ವರದಿ ಮಾಡಿದೆ.

‘‘ಫೆಲೆಸ್ತೀನ್, ಅಫ್ಘಾನಿಸ್ತಾನ, ಸಿರಿಯ , ಇರಾಕ್, ಯೆಮೆನ್, ಸೊಮಾಲಿಯಾ ಮತ್ತಿತರ ದೇಶಗಳಲ್ಲಿ ನಡೆಯುತ್ತಿರುವ ದಮನಕ್ಕೆ ಪ್ರತಿಕ್ರಿಯೆಯಾಗಿ ನಾವು ನಿಮ್ಮ ದೇಶದಲ್ಲಿ ಹಾಗೂ ವಿದೇಶದಲ್ಲಿ ದಾಳಿ ನಡೆಸಲಿದ್ದೇವೆ’’ ಎಂದು ಹಂಝಾ ಹೇಳಿಕೊಂಡಿದ್ದಾನೆ.

ಅಮೆರಿಕದಲ್ಲಿ 2001ರ ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ರೂವಾರಿಯಾದ ಉಸಾಮಾ ಬಿನ್ ಲಾದೆನ್‌ನನ್ನು , ಅಮೆರಿಕದ ಕಮಾಂಡೊಗಳು ಪಾಕಿಸ್ತಾನದಲ್ಲಿನ ಆತನ ಅಡಗುದಾಣವೊಂದರಲ್ಲಿ ಹತ್ಯೆಗೈದಿತ್ತು.

20ರ ಹರೆಯದ ಹಂಝಾ 9/11 ಭಯೋತ್ಪಾದಕ ದಾಳಿಗೆ ಮುನ್ನ ಅಫ್ಘಾನಿಸ್ತಾನದಲ್ಲಿ ತಂದೆಯ ಜೊತೆಗಿದ್ದ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ದಾಳಿಯ ಬಳಿಕ ಅಲ್‌ಖಾಯಿದಾ ಉಗ್ರರಿಗೆ ಹಿನ್ನಡೆಯುಂಟಾದಾಗ ಆತ ತಂದೆಯೊದಿಗೆ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News