2003ರ ಇರಾಕ್ ಯುದ್ಧ ಅಕ್ರಮ
ಲಂಡನ್,ಜು.10: 2003ರ ಇರಾಕ್ ಯುದ್ಧವು ‘ಕಾನೂನುಬಾಹಿರ’ವಾದುದೆಂದು ತಾನು ಭಾವಿಸುವುದಾಗಿ, ಆ ಸಮಯದಲ್ಲಿ ಬ್ರಿಟನ್‌ನ ಉಪಪ್ರಧಾನಿಯಾಗಿದ್ದ ಜಾನ್ ಪ್ರೆಸ್ಕಾಟ್ ಹೇಳಿದ್ದಾರೆ. ಇರಾಕ್ ಬಿಕ್ಕಟ್ಟಿನಲ್ಲಿ ಬ್ರಿಟನ್ ಪಾತ್ರ ವನ್ನು ಖಂಡಿಸುವ ವರದಿಯೊಂದು ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2003ರಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ಇರಾಕ್‌ಮೇಲೆ ಅಕ್ರಮಣ ನಡೆಸಿದ ಸಂದರ್ಭದಲ್ಲಿ ಆಗ ಬ್ರಿಟನ್‌ನಲ್ಲಿ ಆಡಳಿತದಲ್ಲಿದ್ದ ಲೇಬರ್ ಪಕ್ಷದ ಸರಕಾರದಲ್ಲಿ ನಂ.2 ಆಗಿದ್ದ ಪ್ರೆಸ್ಕಾಟ್, ‘ಸಂಡೆಮಿರರ್’ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಲೇಖನವೊಂದರಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಇರಾಕ್ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಲು ಇದ್ದ ಎಲ್ಲಾ ಅವಕಾಶಗಳು ಮುಗಿದುಹೋಗುವ ಮುನ್ನವೇ ಬ್ರಿಟನ್ ವಿವೇಚನಾರಹಿತವಾಗಿ ಯುದ್ಧದಲ್ಲಿ ಪಾಲ್ಗೊಂಡಿತ್ತೆಂದು ಅವರು ಹೇಳಿದ್ದಾರೆ. ಅಸಮರ್ಥನೀಯವಾದ ರೀತಿಯಲ್ಲಿ ಇರಾಕ್‌ನ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ತಪ್ಪು ಚಿತ್ರಣವನ್ನು ನೀಡಲಾಯಿತೆಂದು ಪ್ರೆಸ್ಕಾಟ್ ಆಪಾದಿಸಿದ್ದಾರೆ. ಇರಾಕ್‌ಯುದ್ಧಕ್ಕೆ ಎಂಟು ತಿಂಗಳು ಮೊದಲೇ ಆಗಿನ ಬ್ರಿಟನ್ ಪ್ರಧಾನಿ ಬ್ಲೇರ್ ಅವರು ಆಗಿನ ಅಮೆರಿಕ ಅಧ್ಯಕ್ಷ ಜಾರ್ ಡಬ್ಲು. ಬುಶ್‌ಗೆ ಬರೆದ ಪತ್ರವೊಂದರಲ್ಲಿ, ಆ ದೇಶದ ಜೊತೆ ಯುದ್ಧ ಹೂಡುವ ಪ್ರಸ್ತಾಪ ಮಾಡಿದ್ದರೆಂದು ಪ್ರೆಸ್ಕಾಟ್ ಆರೋಪಿಸಿದ್ದಾರೆ.
‘‘ಯುದ್ಧಕ್ಕೆ ತೆರಳುವ ಬ್ರಿಟನ್‌ನ ನಿರ್ಧಾರ ಹಾಗೂ ಅದ ರಿಂದಾದ ವಿನಾಶಕಾರಿ ಪರಿಣಾಮಗಳ ಕಹಿ ನೆನಪುಗಳೊಂದಿಗೆ ನನ್ನ ಉಳಿದ ಜೀವನವನ್ನು ಕಳೆಯಲಿದ್ದೇನೆ’’ ಎಂದು ಪ್ರೆಸ್ಕಾಟ್ ಹೇಳಿದ್ದಾರೆ. ‘‘ ಇರಾಕ್‌ನಲ್ಲಿ ಸದ್ದಾಂ ಆಳ್ವಿಕೆಯ ಬದಲಾ ವಣೆ ಯೇ ಇರಾಕ್ ಯುದ್ಧದ ಮುಖ್ಯ ಗುರಿಯಾಗಿತ್ತು ಎಂದು 2004ರಲ್ಲಿ ವಿಶ್ವಸಂಸ್ಥೆಯ ವಿದೇಶಾಂಗ ಕಾರ್ಯದರ್ಶಿ ಕೋಫಿ ಅನ್ನಾನ್ ಹೇಳಿದ್ದರು. ಅವರು ಹೇಳಿದ್ದು ಸರಿಯೆಂದು ಈಗ ನನಗೆ ಅರಿವಾಗಿದೆ’’ ಎಂದವರು ಹೇಳಿದ್ದಾರೆ. ಇರಾಕ್ ಯುದ್ಧಕ್ಕಾಗಿ ತಾನು ಪಶ್ಚಾತ್ತಾಪ ಪಡುವುದಾಗಿ ಟೋನಿ ಬ್ಲೇರ್ ಕಳೆದ ವಾರ ವಿಷಾದಿಸಿದ್ದರು. ಆದಾಗ್ಯೂ, ಇರಾಕ್ ಯುದ್ಧವು ಒಂದು ಸರಿಯಾದ ನಿರ್ಧಾರವಾಗಿತ್ತು ಮತ್ತು ಸದ್ದಾಮ್ ಹುಸೈನ್ ಇಲ್ಲದ ಜಗತ್ತು ಹೆಚ್ಚು ಸುರಕ್ಷಿತವಾಗಿದೆಯೆಂದು ತಾನು ನಂಬಿರುವುದಾಗಿ ಅವರು ಹೇಳಿದ್ದರು.
ಲೇಬರ್ ಪಕ್ದದ ಹಾಲಿ ನಾಯಕ ಜೆರೆಮಿ ಕೊಬಿನ್ ಕೂಡಾ ಇರಾಕ್‌ಯುದ್ಧಕ್ಕೆ ತೆರಳಿದ್ದು ಅತ್ಯಂತ ವಿನಾಶಕಾರಿ ನಿರ್ಧಾರವೆಂದು ಬಣ್ಣಿಸಿದ್ದರು ಹಾಗೂ ಅದಕ್ಕಾಗಿ ಪಕ್ಷದ ಪರವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದರು.