×
Ad

ಬಿಜೆಪಿ-ಕಾಂಗ್ರೆಸ್ ಸೋಗಲಾಡಿತನ

Update: 2016-07-12 23:11 IST

‘ಮರಳನ್ನು ಗುದ್ದಿ ಎಣ್ಣೆ ತೆಗೆಯಲು’ ಹೊರಟ ಕತೆಯಂತಿದೆ, ವಿಧಾನಸಭಾ ಕಲಾಪಗಳಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಗುದ್ದಾಟ. ಆಡಳಿತ ಪಕ್ಷ-ವಿರೋಧ ಪಕ್ಷ ತಮ್ಮ ತಮ್ಮ ಹಗ್ಗಗಳನ್ನು ಬಲವಾಗಿ ಎಳೆಯುತ್ತಿವೆ. ನಾಡಿನ ಜನತೆ ಪ್ರತೀ ದಿನ ಪ್ರತಿಕೆಗಳ ಮುಖಪುಟದಲ್ಲಿ ‘ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ’ ಕುರಿತಂತೆಯೇ ಓದಬೇಕಾದಂತಹ ಸನ್ನಿವೇಶ. ಅಧಿವೇಶನ ಕರೆದಿರುವುದೇ ಈ ಡಿವೈಎಸ್ಪಿ ಪ್ರಕರಣವನ್ನು ಚರ್ಚಿಸುವುದಕ್ಕೆ ಎಂದು ಜನರು ನಂಬುವಂತಾಗಿದೆ. ಇದೇ ಸಂದರ್ಭದಲ್ಲಿ ಈ ಚರ್ಚೆಯ ಗದ್ದಲದಲ್ಲಿ ಜನರ ಮೂಲಭೂತ ಸಮಸ್ಯೆಗಳು ಸಂಪೂರ್ಣ ಬದಿಗೆ ತಳ್ಳಲ್ಪಟ್ಟಿವೆ. ಜನರೂ ತಮ್ಮ ತಮ್ಮ ಸಮಸ್ಯೆ ಚರ್ಚೆಗೊಳಗಾಗಬೇಕಾದ ಸದನದಲ್ಲಿ ಅನಗತ್ಯ ಗದ್ದಲಗಳು ಸೃಷ್ಟಿಯಾಗಿರುವ ಕುರಿತಂತೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವುದನ್ನು ತಿಳಿಯದ ಸ್ಥಿತಿಯಲ್ಲಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ಸದನದಲ್ಲಿ ಅಭಿವೃದ್ಧಿ, ರೈತರ ಸಮಸ್ಯೆ, ಬರ, ನೆರೆ ಇತ್ಯಾದಿಗಳು ಚರ್ಚೆಯಾಗುವ ಅಗತ್ಯವಿತ್ತು.

ಆದರೆ ಇಂದು ಅವೆಲ್ಲವೂ ಪಕ್ಕಕ್ಕೆ ತಳ್ಳಲ್ಪಟ್ಟಿವೆ. ರಾಜ್ಯ ಸರಕಾರದ ವೈಫಲ್ಯಗಳೆಲ್ಲ ಡಿವೈಎಸ್ಪಿ ಗಣಪತಿಯ ಆತ್ಮಹತ್ಯೆಯಲ್ಲೇ ತಳಕು ಹಾಕಿಕೊಂಡಿವೆ ಎಂಬಂತೆ ಬಿಜೆಪಿ ವರ್ತಿಸುತ್ತಿರುವುದು ವಿಷಾದನೀಯವಾಗಿದೆ. ರಾಜ್ಯಾದ್ಯಂತ ಅದು ನಡೆಸುತ್ತಿರುವ ಚಳವಳಿಗಳೂ ಇದೇ ಪ್ರಶ್ನೆಯನ್ನು ಎದುರಿಸುತ್ತಿವೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಜಾರ್ಜ್ ಅವರು ಗೃಹ ಖಾತೆಯನ್ನೇ ಹೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗಣಪತಿ ಯಾವುದೇ ಭ್ರಷ್ಟಾಚಾರ ತನಿಖೆ ಅಥವಾ ಯಾವುದೇ ಮಾಫಿಯಾಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಇಂತಹ ಒತ್ತಡಗಳನ್ನು ಎದುರಿಸಿದ್ದಾರೆ ಎಂದಿದ್ದರೆ ಅದಕ್ಕಾದರೂ ಬೆಲೆಯಿತ್ತು. ಅಂತಹ ತನಿಖೆ, ಕಾರ್ಯಾಚರಣೆ ನಡೆಸಿದ ಯಾವ ಇತಿಹಾಸವೂ ಗಣಪತಿಗೆ ಇಲ್ಲ. ಬದಲಿಗೆ ತನ್ನ ವೃತ್ತಿಯಲ್ಲಿ ಭ್ರಷ್ಟಾಚಾರ ಮಾಡಿದ, ಅಕ್ರಮ ಎಸಗಿದ ಆರೋಪಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಅಮಾನತು ಕೂಡ ಆಗಿದ್ದಾರೆ.

ಈ ಹಿಂದೆ ವರ್ಗಾವಣೆ ಮತ್ತು ಅಮಾನತು ರದ್ದಿಗಾಗಿ ಜಾರ್ಜ್ ಅವರನ್ನು ಭೇಟಿ ಮಾಡಿರುವ ಗಣಪತಿಗೆ ಜಾರ್ಜ್ ಸಹಕರಿಸಲಿಲ್ಲ ಎಂಬ ಆರೋಪ ಬಂದಿದೆ. ಭ್ರಷ್ಟಾಚಾರದಂತಹ ಆರೋಪಗಳು ಸಾಬೀತಾಗಿ ಒಬ್ಬ ಪೊಲೀಸ್ ಅಧಿಕಾರಿ ಅಮಾನತಾಗುವುದನ್ನು ನಾವು ‘ಒತ್ತಡ’ ಎಂದು ಕರೆಯಲು ಆಗುವುದಿಲ್ಲ. ಪೊಲೀಸ್ ಅಧಿಕಾರಿಗಳೂ ಈ ದೇಶದ ಕಾನೂನು, ಸಂವಿಧಾನದ ವ್ಯಾಪ್ತಿಯೊಳಗೇ ಬರುತ್ತಾರೆ. ಅವರನ್ನು ಅಮಾನತುಗೊಳಿಸಿದಾಕ್ಷಣ ಅವರು ಒತ್ತಡಕ್ಕೊಳಗಾಗುತ್ತಾರೆ ಎಂದರೆ ಅದರರ್ಥ, ಪೊಲೀಸರು ಎಲ್ಲ ಕಾನೂನು, ಸಂವಿಧಾನಗಳನ್ನು ಮೀರಿದ ಸರ್ವಾಧಿಕಾರಿಗಳು ಎಂದಾಗುತ್ತದೆ. ಗಣಪತಿಯ ಸಮರ್ಥನೆ ಪರೋಕ್ಷವಾಗಿ ಭ್ರಷ್ಟ, ದುಷ್ಟ ಪೊಲೀಸ್ ಅಧಿಕಾರಿಗಳಿಗೆ ಇನ್ನಷ್ಟು ಕುಮ್ಮಕ್ಕುಗಳನ್ನು ಕೊಡಬಹುದು. ತನ್ನ ಮೇಲೆ ಕ್ರಮ ತೆಗೆದುಕೊಂಡ ಮೇಲಧಿಕಾರಿಗಳ ಮೇಲೆ ಸುಲಭದಲ್ಲಿ ಹೇಳಿಕೆ ನೀಡಬಹುದು. ಅವರನ್ನು ಆತ್ಮಹತ್ಯೆ ಬ್ಲಾಕ್‌ಮೇಲ್ ಮಾಡಿ ಕೈ ಕಟ್ಟಿ ಹಾಕಬಹುದು.

 ಇದೇ ಸಂದರ್ಭದಲ್ಲಿ ಗಣಪತಿ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಷ್ಟು ಸೂಕ್ಷ್ಮವಾಗಿ ನಿಭಾಯಿಸಬಹುದಿತ್ತು. ಗಣಪತಿಯ ಆರೋಪದಲ್ಲಿ ತೂಕವಿಲ್ಲದೇ ಇರಬಹುದು, ಆದರೆ ಅವರು ಬಹಿರಂಗವಾಗಿ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ. ಸ್ಪಷ್ಟೀಕರಣವನ್ನು ನೀಡಲು ಅವರಂತೂ ಈಗ ಇಲ್ಲ. ಈ ಸಂದರ್ಭದಲ್ಲಿ ಅವರು ಮಾಡಿರುವ ಆರೋಪಕ್ಕೆ ಸ್ಪಷ್ಟವಾಗಿ ಉತ್ತರಿಸುವುದು ಸರಕಾರದ ಕರ್ತವ್ಯವಾಗಿದೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಮತ್ತು ಮಾಜಿ ಗೃಹ ಸಚಿವರ ಒತ್ತಡ ತನಗಿದೆ ಎಂದು ಗಣಪತಿ ಹೇಳಿರುವುದರಿಂದ, ಸಿಐಡಿ ಮಾಡುವ ತನಿಖೆ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹವಾದುದು ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ. ಯಾಕೆಂದರೆ, ಸಿಐಡಿ ಒಂದಲ್ಲ ಒಂದು ರೀತಿಯಲ್ಲಿ ಪೊಲೀಸ್ ವ್ಯವಸ್ಥೆಯೊಂದಿಗೆ ತಳಕು ಹಾಕಿಕೊಂಡಿದೆ.

ರಾಜ್ಯ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ತನ್ನ ಮೇಲಾಧಿಕಾರಿಗಳ ವಿರುದ್ಧ, ತನ್ನ ತಲೆ ಮೇಲಿರುವ ಸರಕಾರದ ವಿರುದ್ಧ ಸ್ವತಂತ್ರವಾಗಿ ಸಿಐಡಿ ತನಿಖೆ ನಡೆಸುವುದು ಕಷ್ಟವಾಗಬಹುದು. ಒಂದು ವೇಳೆ ಪ್ರಾಮಾಣಿಕ ತನಿಖೆಯನ್ನು ನಡೆಸಿ ವರದಿಯನ್ನು ನೀಡಿದರೂ ಅದರ ವಿರುದ್ಧ ಬಿಜೆಪಿ ಆಕ್ಷೇಪ ತೆಗೆಯಲು ಸಾಕಷ್ಟು ಅವಕಾಶಗಳಿವೆ. ಇವೆಲ್ಲ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಜಿಲ್ಲಾಧಿಕಾರಿ ಡಿ.ಕೆ.ರವಿ ಆತ್ಮಹತ್ಯೆಯ ಸಂದರ್ಭದಲ್ಲಿ ಈಗಾಗಲೇ ಇಂತಹದೊಂದು ಸಮಸ್ಯೆಯನ್ನು ಎದುರಿಸಿರುವ ಅನುಭವ ಇದ್ದರೂ ಸಿದ್ದರಾಮಯ್ಯ ಮತ್ತೆ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದು ಯಾಕೆ? ಈ ಗದ್ದಲದಲ್ಲಿ ಉಳಿದ ವಿಷಯಗಳು ಬದಿಗೆ ಸರಿಯಬೇಕು ಎಂಬ ಉದ್ದೇಶ ಅವರಲ್ಲಿದೆಯೇ? ಈ ತನಿಖೆಯನ್ನು ಆರಂಭದಲ್ಲೇ ನ್ಯಾಯಾಂಗಕ್ಕೆ ಅಥವಾ ಸಿಬಿಐಗೆ ವಹಿಸಿದ್ದಿದ್ದರೆ ಇಷ್ಟು ಪ್ರಮಾಣದಲ್ಲಿ ಗದ್ದಲ ಎಬ್ಬಿಸಲು ವಿರೋಧ ಪಕ್ಷಕ್ಕೆ ಅವಕಾಶ ಸಿಗುತ್ತಿರಲಿಲ್ಲವೇನೋ?
 ಇದೇ ಸಂದರ್ಭದಲ್ಲಿ ಗಣಪತಿಯ ಆತ್ಮಹತ್ಯೆಯನ್ನು ಮುಂದಿಟ್ಟು ರಾಜ್ಯದಲ್ಲಿ ಅಶಾಂತಿಯನ್ನು ಎಬ್ಬಿಸುವ ಬಿಜೆಪಿ, ಕೆಲವೇ ದಿನಗಳ ಹಿಂದೆ ನಡೆದ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಆತ್ಮಹತ್ಯೆಯ ಬಗ್ಗೆ ಯಾಕೆ ವೌನವಾಗಿದೆ? ಈ ಪ್ರಶ್ನೆಗೆ ಬಿಜೆಪಿಯ ನಾಯಕರು ಈವರೆಗೆ ಉತ್ತರ ನೀಡಿಲ್ಲ. ಈಗಾಗಲೇ ಅವರ ಆತ್ಮಹತ್ಯೆಯ ಹಿಂದೆ ಸಂಘಪರಿವಾರದ ಕೈವಾಡ ಬಯಲಾಗಿದೆ. ಓರ್ವ ಸಂಘಪರಿವಾರ ಮುಖಂಡನ ಬಂಧನವೂ ಆಗಿದೆ. ಹಾಗೆಯೇ ಆತನೂ ಸೇರಿದಂತೆ ಸಂಘಪರಿವಾರದ ಕೆಲವು ನಾಯಕರು ಭಾಗಿಯಾಗಿರುವ ಬೆಟ್ಟಿಂಗ್‌ನಂತಹ ಅಕ್ರಮ ದಂಧೆಗಳ ರಹಸ್ಯಗಳೂ ಹೊರ ಬಿದ್ದಿವೆೆ. ಈ ರಹಸ್ಯವನ್ನು ಮುಚ್ಚಿ ಹಾಕಲು ಇದೀಗ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯ ಹಿಂದೆ ಬಿದ್ದಿದೆಯೇ ಎಂದು ಜನರು ಬಿಜೆಪಿಯ ಮುಖಂಡರನ್ನು ಕೇಳುವಂತಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ನಿಗೂಢ ಆತ್ಮಹತ್ಯೆಯನ್ನು ಅವರು ಹೇಗೆ ನಿರ್ವಹಿಸಿದ್ದಾರೆ ಎನ್ನುವುದನ್ನು ರಾಜ್ಯ ಕಂಡಿದೆ.

ಈವರೆಗೂ ಪದ್ಮಪ್ರಿಯಾ ಅವರಿಗೆ ನ್ಯಾಯ ದೊರಕಿಲ್ಲ. ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ದಿಲ್ಲಿ ನಿವಾಸಕ್ಕೆ ರಾಜ್ಯದ ಮೂವರು ಪ್ರಮುಖ ಮುಖಂಡರು ಭೇಟಿ ನೀಡಿದ್ದರು ಎನ್ನುವುದು ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಪದ್ಮಪ್ರಿಯಾ ಪ್ರಕರಣವನ್ನು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರ ನೆರವಿನಿಂದಲೇ ಮುಚ್ಚಿ ಹಾಕಲಾಯಿತು ಎಂಬ ಅನುಮಾನವನ್ನು ಇಂದಿಗೂ ಜನರು ವ್ಯಕ್ತಪಡಿಸುತ್ತಿದ್ದಾರೆ. ಅಂದು ವಿರೋಧಪಕ್ಷವಾಗಿದ್ದ ಕಾಂಗ್ರೆಸ್ ಒಂದಿಷ್ಟು ದೊಡ್ಡ ದನಿಯಲ್ಲಿ ಆ ಹೆಣ್ಣು ಮಗಳ ಪರವಾಗಿ ಮಾತನಾಡಿದ್ದಿದ್ದರೆ ಅವಳಿಗೆ ನ್ಯಾಯ ಸಿಕ್ಕಿ ಬಿಡುತ್ತಿತ್ತು. ಬಿಜೆಪಿಯ ಮೂವರು ಪ್ರಮುಖ ನಾಯಕರು ಈ ಪ್ರಕರಣದಲ್ಲಿ ಜೈಲು ಪಾಲಾಗಬೇಕಾಗಿತ್ತು. ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಗೆ ನ್ಯಾಯ ಸಿಗದೇ ಇದ್ದುದರಲ್ಲಿ ಕಾಂಗ್ರೆಸ್ ಪಾಲು ಬಹುದೊಡ್ಡದು. ಅದರ ಫಲವಾಗಿಯೇ ಎಂಬಂತೆ, ರಾಜ್ಯದೊಳಗೆ ನಡೆಯುತ್ತಿರುವ ಅಧಿಕಾರಿಗಳ ಸಾಲು ಸಾಲು ಆತ್ಮಹತ್ಯೆ ಕಾಂಗ್ರೆಸ್ ಸರಕಾರವನ್ನು ಕಾಡತೊಡಗಿದೆ. ಕಾಂಗ್ರೆಸ್ ಪಕ್ಷ ತಾನು ಅಂದು ಮಾಡಿದ ತಪ್ಪಿಗೆ ಇಂದು ಬೆಲೆ ತೆರುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News