ಸಂಘಪರಿವಾರದ ರಾಜಕೀಯಕ್ಕೆ ಬಲಿಯಾಗುತ್ತಿರುವ ದಲಿತರು
ಜಾನುವಾರು ಚರ್ಮವನ್ನು ವಾಹನವೊಂದರಲ್ಲಿ ಸಾಗಿಸುತ್ತಿದ್ದ ನಾಲ್ವರು ದಲಿತ ಕಾರ್ಮಿಕರಿಗೆ ಬರ್ಬರವಾಗಿ ಥಳಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಹ್ಮದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇದು ಕೇವಲ ಗುಜರಾತ್ ರಾಜ್ಯಕ್ಕಷ್ಟೇ ಸಂಬಂಧಿಸಿರಬೇಕು ಎಂದಿಲ್ಲ. ಇಂತಹ ಘಟನೆಗಳು ರಾಜ್ಯದ ಎಲ್ಲಿ, ಯಾವಾಗ ಬೇಕಾದರೂ ನಡೆಯಬಹುದು. ದುರಂತವೆಂದರೆ, ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಈವರೆಗೂ ಯಶಸ್ವಿಯಾಗಿಲ್ಲ. ಯಾಕೆಂದರೆ ಅವರು ಸಾಗಿಸುತ್ತಿದ್ದ ಚರ್ಮ ಗೋಮಾತೆಯದ್ದಾಗಿತ್ತು ಎಂಬ ಆರೋಪವನ್ನು ಮಾಡಿ ದಲಿತರಿಗೆ ಥಳಿಸಲಾಗಿದೆ.
ಹಲವು ವರ್ಷಗಳ ಹಿಂದೆ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ಥಳಿಸಿ ಕೊಂದ ಘಟನೆ ನಡೆದು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಈ ಬಾರಿ ಕಾರ್ಮಿಕರನ್ನು ಅರೆನಗ್ನ ಮಾಡಿ ಬರ್ಬರವಾಗಿ ಥಳಿಸಲಾಗಿದೆ. ಇದಕ್ಕೆ ಕಾನೂನಿನ ವೌನ ಸಮ್ಮತಿ ದೊರಕಿದರೆ, ಮುಂದೊಂದು ದಿನ ದಲಿತರ ಕೊಲೆಯಲ್ಲೇ ಅವಸಾನವಾಗುತ್ತದೆ.
ವಿಪರ್ಯಾಸವೆಂದರೆ ಅವರು ಗೋಮಾಂಸವನ್ನು ಸಾಗಿಸುತ್ತಿರಲಿಲ್ಲ. ಬದಲಿಗೆ ಜಾನುವಾರಿನ ಚರ್ಮವನ್ನು ಸಾಗಿಸುತ್ತಿದ್ದರು. ಅದೂ ಚರ್ಮದ ಕಾರ್ಖಾನೆಗೆ. ಇದನ್ನು ಸಾಗಿಸುತ್ತಿದ್ದ ಕಾರ್ಮಿಕರಿಗೆ ಹೆಚ್ಚೆಂದರೆ ಒಂದು ದಿನದ ಕೂಲಿ ಸಿಗುತ್ತಿತ್ತು. ಅಥವಾ ಒಂದು ಚರ್ಮಕ್ಕೆ ಇಷ್ಟು ಎಂದು ಚಿಲ್ಲರೆ ದುಡ್ಡನ್ನು ಪಡೆಯುತ್ತಿದ್ದರು. ಆದರೆ ಚರ್ಮದ ನಿಜವಾದ ಲಾಭವನ್ನು ಪಡೆಯುವವರು ಬೃಹತ್ ಕಾರ್ಖಾನೆಯ ಮಾಲಕರು. ಕೃಷಿ ಪ್ರಧಾನವಾದ ದೇಶದಲ್ಲಿ ಜಾನುವಾರುಗಳು ಎಷ್ಟು ಮಹತ್ವವನ್ನು ಪಡೆಯುತ್ತದೆಯೋ ಚರ್ವೋದ್ಯಮವೂ ಅಷ್ಟೇ ಪ್ರಾಧಾನ್ಯವನ್ನು ಪಡೆಯುತ್ತದೆ. ಇದೊಂದು ರೀತಿಯಲ್ಲಿ ಶೃಂಖಲೆಗಳಿದ್ದಂತೆ. ಒಂದು ಮತ್ತೊಂದನ್ನು ಅವಲಂಬಿಸಿಕೊಂಡಿರುತ್ತದೆ. ಕೃಷಿ ಮತ್ತು ದಿನ ಬಳಕೆಗೆ ಹಸುವನ್ನು ಸಾಕುತ್ತಾರೆ. ಹಸುವಿನ ಗೊಬ್ಬರ ಗದ್ದೆಗಳಿಗೆ ಬಳಕೆಯಾಗುತ್ತದೆ. ಇದೇ ಸಂದರ್ಭದಲ್ಲಿ ಕೃಷಿಯ ಉಳಿಕೆಗಳು ಜಾನುವಾರುಗಳ ಆಹಾರವಾಗುತ್ತದೆ. ಹಾಗೆಯೇ ಹಾಲುಕೊಡದ ಗೊಡ್ಡು ಗೋವುಗಳು ಆಹಾರಕ್ಕೆ ಬಳಕೆಯಾಗುತ್ತವೆ. ಅಂದರೆ, ಅವುಗಳಿಂದಾಗಿ ರೈತನಿಗೆ ನಷ್ಟವುಂಟಾಗುವುದಿಲ್ಲ.
ಗೋವುಗಳನ್ನು ಮಾರುವುದರಿಂದ ಉಳಿದ ಗೋವುಗಳನ್ನು ಸಾಕುವುದಕ್ಕೆ, ಹಾಗೆಯೇ ಬದುಕಿನ ಆವಶ್ಯಕತೆಗಳಿಗೆ ಹಣ ಹುಟ್ಟುತ್ತದೆ. ಇತ್ತ ಗೋಮಾಂಸವನ್ನು ಆಹಾರವಾಗಿ ಸೇವಿಸುವವರು ಹೈನೋದ್ಯಮದ ಒಂದು ಭಾಗವೇ ಆಗಿದ್ದಾರೆ. ಅವರು ಅದಕ್ಕೆ ಪೂರಕವಾಗಿ ಸಹಕರಿಸುತ್ತಾರೆ. ಇದೇ ಸಂದರ್ಭದಲ್ಲಿ ಒಂದೆಡೆ ಆಹಾರವಾಗಿ ಬಳಕೆಯಾದರೆ, ಅದರ ಚರ್ಮ ಉದ್ಯಮಗಳಿಗೆ ಬಳಕೆಯಾಗುತ್ತದೆ. ಭಾರತ ಚರ್ಮೋದ್ಯಮಕ್ಕೆ ಖ್ಯಾತವಾಗಿರುವುದು ಇದೇ ಕಾರಣಕ್ಕೆ. ಭಾರತ ಇಂದು ವರ್ಷದಲ್ಲಿ 2 ಬಿಲಿಯನ್ ಚದರ ಅಡಿಯಷ್ಟು ಚರ್ಮವನ್ನು ಉತ್ಪಾದಿಸುತ್ತದೆ. ವಿಶ್ವಕ್ಕೆ ಭಾರತ ಚರ್ಮ ವ್ಯಾಪಾರದಲ್ಲಿ ತನ್ನದೇ ಕೊಡುಗೆಯನ್ನು ನೀಡಿರುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಜಾನುವಾರು ಸಾಕಣೆ ಲಾಭದಾಯಕವಾಗಲು ಅದು ಮಾಂಸವಾಗಿ ಮಾರಾಟವಾಗುವುದು ಮಾತ್ರವಲ್ಲ, ಅದರ ಚರ್ಮದ ಉಪಯೋಗವೂ ಒಂದು ಕಾರಣವಾಗಿದೆ.
ನಾಳೆ ಗೋಮಾಂಸವನ್ನು ತಿನ್ನುವವರೇ ಇಲ್ಲವಾದರೆ, ಚರ್ಮಗಳನ್ನು ಕೊಳ್ಳುವವರೇ ಇಲ್ಲವಾದರೆ ಗೋ ಸಾಕಣೆ ಇನ್ನಷ್ಟು ದುಬಾರಿಯಾಗುತ್ತದೆ. ಜನರು ಗೋಸಾಕಣೆಯನ್ನೇ ನಿಲ್ಲಿಸಬಹುದು. ಆಗ ಗೋವನ್ನು ಉಳಿಸುವುದಕ್ಕಾಗಿ ಸರಕಾರ ಅನಿವಾರ್ಯವಾಗಿ ಜನರ ಮೇಲೆ ತೆರಿಗೆಯನ್ನು ವಿಧಿಸುವಂತಹ ಸನ್ನಿವೇಶ ನಿರ್ಮಾಣವಾಗಬಹುದು. ಈಗಾಗಲೇ ಪಂಜಾಬ್ ಮತ್ತು ಹರ್ಯಾಣ, ನಿರಾಶ್ರಿತ ಗೋವುಗಳ ಸಾಕಣೆಗಾಗಿ ಅಂದರೆ ಹಾಲುಕೊಡದ ಗೊಡ್ಡು ದನಗಳ ಸಾಕಣೆಗಾಗಿ ಜನರಿಂದ ತೆರಿಗೆ ವಸೂಲು ಮಾಡುವ ಆಲೋಚನೆಯಲ್ಲಿದೆ. ತಮ್ಮ ಜೀವಮಾನದಲ್ಲಿ ಗೋವುಗಳನ್ನು ಸಾಕದ ಸಂಘಪರಿವಾರದ ಗೋಸಂರಕ್ಷಕರು ತಮ್ಮ ಕಾರ್ಯವನ್ನು ಹೀಗೆಯೇ ಮುಂದುವರಿಸಿದರೆ, ಗೋವುಗಳ ತಳಿ ಉಳಿಸಲು ಕೇಂದ್ರ ಸರಕಾರ ಜನರ ಮೇಲೆ ತೆರಿಗೆ ಹಾಕುವುದರಲ್ಲಿ ಯಾವ ಸಂಶಯವೂ ಇಲ್ಲ.
ಒಂದೆಡೆ ಕೇಂದ್ರ ಸರಕಾರ ಗೋಮಾಂಸ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಕಸಾಯಿಖಾನೆ ಅಭಿವೃದ್ಧಿಗೆ ಹಲವು ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಗೋಮಾಂಸ ರಫ್ತಿನಿಂದ ಬರುವ ಹಣವನ್ನು ಬಾಚಿಕೊಳ್ಳುತ್ತಿದೆ. ಆದರೆ ಭಾರತದೊಳಗೆ ಗೋಮಾಂಸ ನಿಷೇಧದ ಮಾತನ್ನು ಆಡುತ್ತದೆ. ಗೋಮಾಂಸದ ಹೆಸರಿನಲ್ಲಿ ಅಶಾಂತಿಯನ್ನು ಎಬ್ಬಿಸಲು ಕುಮ್ಮಕ್ಕು ನೀಡುತ್ತಿದೆ. ವಿಷಾದನೀಯ ಸಂಗತಿಯೆಂದರೆ, ಈ ವರೆಗೆ ಗೋಮಾಂಸದ ಮೇಲಷ್ಟೇ ದಾಳಿ ನಡೆಸುತ್ತಿದ್ದ ದುಷ್ಕರ್ಮಿಗಳು ಈಗ ಗೋವುಗಳ ಚರ್ಮ ಸಾಗಿಸುವವರ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ದಲಿತರ ಮೇಲೆ ನಡೆದ ದಾಳಿಯೇ ಇದಕ್ಕೆ ಉದಾಹರಣೆ. ಸರಿ. ಗೋವಿನ ಚರ್ಮ ಸಾಗಿಸುವುದು ತಪ್ಪು ಎಂದಾದರೆ, ಚರ್ಮದ ಕಾರ್ಖಾನೆಗಳು ಅಸ್ತಿತ್ವದಲ್ಲಿರುವುದು ಸರಿಯೇ? ಮೊದಲು ಇವರು ದಾಳಿ ನಡೆಸಬೇಕಾಗಿರುವುದು ಈ ಚರ್ಮದ ಕಾರ್ಖಾನೆಗಳಿಗೆ ತಾನೇ? ಚರ್ಮದ ಚೀಲ, ಬೆಲ್ಟ್, ಚಪ್ಪಲಿ, ಶೂಗಳನ್ನು ಧರಿಸುವುದು ಸರಿಯೇ? ಚರ್ಮದ ವಸ್ತುಗಳಿರುವ ಈ ಅಂಗಡಿಗಳಿಗೆಲ್ಲ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಬೇಡವೇ? ಚರ್ಮವನ್ನು ಮಾರಿ ದಲಿತ ಕಾರ್ಮಿಕರು ಹೆಚ್ಚೆಂದರೆ ಒಂದು ಸಾವಿರ ರೂಪಾಯಿಯಷ್ಟನ್ನು ತಮ್ಮದಾಗಿಸಿಕೊಳ್ಳಬಹುದು.
ಆದರೆ ಚರ್ಮದ ಕಾರ್ಖಾನೆಗಳ ಮಾಲಕರು ಕೋಟಿ ಕೋಟಿ ರೂಪಾಯಿಗಳನ್ನು ದೋಚುತ್ತಾರೆ. ಹಾಗಾದರೆ, ಸಂಘಪರಿವಾರದ ಕಾರ್ಯಕರ್ತರು ಮಾಲಕರನ್ನು ಅರೆನಗ್ನಗೊಳಿಸಿ, ಅವರ ಮೇಲೆ ಯಾಕೆ ಸಾರ್ವಜನಿಕವಾಗಿ ದಾಳಿ ನಡೆಸುವುದಿಲ್ಲ. ಗೋಮಾಂಸದ ಸಂಸ್ಕರಣೆಯ ಉದ್ಯಮದಲ್ಲಿ ಹಣ ತೊಡಗಿಸಿಕೊಂಡವರಲ್ಲಿ ಬಿಜೆಪಿಯ ಮುಖಂಡರೂ ಇರುವುದು ಈಗಾಗಲೇ ಬೆಳಕಿಗೆ ಬಂದಿದೆ. ಎಲ್ಲಕ್ಕಿಂತ ತಮಾಷೆೆಯ ವಿಷಯವೆಂದರೆ, ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಉದ್ಯಮಿಗಳ ಮಾಲಕತ್ವದಲ್ಲೂ ಗೋಮಾಂಸ ಸಂಸ್ಕರಣೆ ಘಟಕಗಳಿರುವುದು. ಚರ್ಮದ ಕಾರ್ಖಾನೆಗಳು ಕೂಡ ಇದಕ್ಕೆ ಹೊರತಾಗಿಯೇನೂ ಇಲ್ಲ. ನಿಜಕ್ಕೂ ಗೋವಿನ ಮೇಲೆ ಪ್ರೀತಿಯಿರುವವರು ಅಮಾಯಕ, ಬಡ ದಲಿತ ಕಾರ್ಮಿಕರ ಮೇಲೆ ದಾಳಿ ನಡೆಸುವ ಬದಲು ಈ ಕಾರ್ಖಾನೆಯ ಮಾಲಕರ ಮೇಲೆ ದಾಳಿ ನಡೆಸುವುದು ಹೆಚ್ಚು ಪರಿಣಾಮಕಾರಿ. ಆದರೆ ಅಂತಹದೇನೂ ನಡೆಯುತ್ತಿಲ್ಲ.
ಇಂತಹ ದಾಳಿಯ ಹಿಂದೆ ಜಾತೀಯತೆಯ ಮನಸ್ಸು ಮತ್ತು ರಾಜಕೀಯ ಕೆಲಸ ಮಾಡುತ್ತದೆ. ಇದೇ ರೀತಿ ದಾಳಿ ಮುಂದುವರಿದರೆ ಈ ದೇಶದ ದಲಿತರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯ ಒಂದಾಗಿ ಬಂಡೇಳುವ ದಿನ ದೂರವಿಲ್ಲ. ಹಾಗೆಯೇ ಮುಂದೊಂದು ದಿನ ಪೂಜೆ ಮಾಡುವುದಕ್ಕೂ ಗೋವುಗಳು ಸಿಗಲಾರದಂತಹ ಸನ್ನಿವೇಶ ನಿರ್ಮಾಣವಾಗಲಿದೆ. ಅದಕ್ಕೆ ಬಿಜೆಪಿ ಮತ್ತು ಸಂಘಪರಿವಾರವೇ ಹೊಣೆಯಾಗಲಿದೆ.