ವಿಂಬಲ್ಡನ್‌ನಿಂದ ಸಿಖ್ ವ್ಯಕ್ತಿಯನ್ನು ಹೊರದಬ್ಬಿದರು
ಲಂಡನ್, ಜು. 13: ಬ್ರಿಟನ್‌ನಲ್ಲಿ ‘ಬ್ರೆಕ್ಸಿಟ್’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ನಂತರದ ಜನಾಂಗೀಯ ನಿಂದನೆ ಹೇಗಿರಬಹುದು ಎನ್ನುವ ಮುನ್ಸೂಚನೆಯನ್ನು ಕಳೆದ ವಾರ ವಿಂಬಲ್ಡನ್‌ನಲ್ಲಿ ನಡೆದ ಘಟನೆಯೊಂದು ನೀಡಿದೆ. ವಿಂಬಲ್ಡನ್ ಪಂದ್ಯದ ಟಿಕೆಟ್ ಪಡೆಯುವುದಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಿಖ್ ವ್ಯಕ್ತಿಯೊಬ್ಬರನ್ನು ಅಲ್ಲಿಂದ ಹೊರದಬ್ಬಲಾಯಿತು. ಆ ವ್ಯಕ್ತಿ ತನ್ನ ಸುತ್ತಲಿದ್ದ ಜನರಿಗೆ ‘‘ಕಿರಿ ಕಿರಿ’’ ಉಂಟು ಮಾಡುತ್ತಿದ್ದರು ಎನ್ನುವುದೇ ಇದಕ್ಕೆ ಕಾರಣ.
ಆ ಟೆನಿಸ್ ಪ್ರೇಮಿಯು ಬಳಿಕ ಫೇಸ್‌ಬುಕ್‌ನಲ್ಲಿ ತನ್ನ ಹತಾಶೆಯನ್ನು ಹರಿಯಬಿಟ್ಟಿದ್ದಾರೆ. ಆದರೆ, ತನ್ನ ಗುರುತನ್ನು ಬಹಿರಂಗಪಡಿಸಲು ಅವರು ಇಚ್ಛಿಸಿಲ್ಲ.
ವಿಂಬಲ್ಡನ್‌ನ ಸೆಂಟರ್ ಕೋರ್ಟ್‌ನ ಟಿಕೆಟ್‌ಗಾಗಿ ರಾತ್ರಿ ಸರದಿಯಲ್ಲಿ ನಿಂತಿದ್ದ ಅವರನ್ನು ಭದ್ರತಾ ಸಿಬ್ಬಂದಿ ಹೊರದಬ್ಬಿದ್ದರು. ಭದ್ರತಾ ಸಿಬ್ಬಂದಿ ಜನಾಂಗೀಯವಾದಿಗಳಂತೆ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅವರು ಫೇಸ್‌ಬುಕ್‌ನಲ್ಲಿ ತನ್ನ ಹತಾಶೆಯನ್ನು ವ್ಯಕ್ತಪಡಿಸಿದ ಬಳಿಕ ಹಲವು ಮಂದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರ ಪೈಕಿ ಕೆಲವರು ಅಧಿಕಾರಿಗಳಿಗೆ ದೂರು ಕೊಡುವಂತೆಯೂ ಒತ್ತಾಯಿಸಿದ್ದಾರೆ.
‘‘ನಿಮ್ಮಿಂದಾಗಿ ನಿಮ್ಮ ಸುತ್ತಲಿರುವ ಕೆಲವು ಜನರು ಇರಿಸುಮುರಿಸಿಗೊಳಗಾಗಿದ್ದಾರೆ. ಹಾಗಾಗಿ, ನಿಮ್ಮ ಬಗ್ಗೆ ದೂರು ತೆಗೆದುಕೊಂಡು, ತಕ್ಷಣ ಇಲ್ಲಿಂದ ಹೋಗುವಂತೆ ನಿಮಗೆ ಸೂಚನೆ ನೀಡಬೇಕಾಗಿದೆ, ಸರ್’’ ಎಂದು ಭದ್ರತಾ ಸಿಬ್ಬಂದಿ ಹೇಳಿರುವುದಾಗಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
‘‘ನನಗೆ ಆಘಾತವಾಯಿತು. ನಾನು ಪ್ರತಿಭಟನೆ ನಡೆಸಬೇಕಾಗಿತ್ತು ಹಾಗೂ ಮಾತನಾಡಬೇಕಾಗಿತ್ತು ಎಂದು ಈಗ ಅನಿಸುತ್ತಿದೆ. ಆದರೆ, ನಾನು ಹಿಂಜರಿದೆ ಹಾಗೂ ವೌನವಾಗಿ ಅಲ್ಲಿಂದ ಹೊರ ಹೋದೆ. ಇನ್ನು ನನಗೆ ಅಲ್ಲಿಗೆ ಇನ್ನೊಮ್ಮೆ ಹೋಗಬೇಕೆಂದು ಅನಿಸುವುದಿಲ್ಲ. ವಿಂಬಲ್ಡನ್ ಈಗಲೂ ನನ್ನ ನೆಚ್ಚಿನ ಪಂದ್ಯಾವಳಿಗಳ ಪೈಕಿ ಒಂದಾಗಿದೆ’’ ಎಂದು ಅವರು ‘ಮೆಟ್ರೊ ಯುಕೆ’ಗೆ ಹೇಳಿದ್ದಾರೆ.
ವಿಂಬಲ್ಡನ್ ಅಧಿಕಾರಿಗಳ ಪ್ರತಿಕ್ರಿಯೆ: ‘‘ಇಂದು ಬೆಳಗ್ಗೆ (ಶುಕ್ರವಾರ) 4:42ಕ್ಕೆ ಸರತಿ ಸಾಲಿನಿಂದ ಹೊರಹೋಗುವಂತೆ ವ್ಯಕ್ತಿಯೊಬ್ಬರಿಗೆ ಸೂಚಿಸಲಾಯಿತು ಎಂಬುದನ್ನು ನಾವು ಖಚಿತಪಡಿಸುತ್ತೇವೆ. ಅವರ ವರ್ತನೆಯ ಬಗ್ಗೆ ಅವರೊಂದಿಗೆ ಸರತಿ ಸಾಲಿನಲ್ಲಿ ಇದ್ದ ಹಲವಾರು ಮಂದಿಯಿಂದ ದೂರುಗಳು ಬಂದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ವರ್ಷದ ವಿಂಬಲ್ಡನ್ ಚಾಂಪಿಯನ್‌ಶಿಪ್ ವೇಳೆ, ಸರತಿ ಸಾಲಿನಲ್ಲಿನ ಅವರ ವರ್ತನೆ ಬಗ್ಗೆ ಆರು ಬಾರಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು’’ ಎಂದು ವಿಂಬಲ್ಡನ್ ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.