×
Ad

ಕಂಧಮಾಲ್‌ನಲ್ಲಿ ನಕಲಿ ಎನ್‌ಕೌಂಟರ್?

Update: 2016-07-14 22:30 IST

ತಮ್ಮ ಜನರ ಮೇಲೆಯೇ ಸಾರಿರುವ ಯುದ್ಧದಲ್ಲಿ ಭದ್ರತಾ ಪಡೆಗಳು ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಆರು ಮಂದಿ ಬಡ ಆದಿವಾಸಿ ಮತ್ತು ದಲಿತರನ್ನು ಹತ್ಯೆಗೈಯಿತು. ಇತರ ನಾಲ್ವರು ತುಮುಡಿಬಂಧ ಪೊಲೀಸ್ ವ್ಯಾಪ್ತಿಯ ಮಲಪಂಗಾ ಅರಣ್ಯದಲ್ಲಿ ನಡೆದ ಸಿಆರ್‌ಪಿಎಫ್‌ನ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು. ಅವರೆಲ್ಲಾ ಬಲಿಗುಂಡಾದಿಂದ ಇತರರೊಂದಿಗೆ ನರೇಗಾ ಯೋಜನೆಯಡಿ ದುಡಿದ ಮಜೂರಿಯನ್ನು ಬ್ಯಾಂಕ್ ಮೂಲಕ ಪಡೆದು ಮರಳುತ್ತಿದ್ದರು, (ಪರಪಂಕಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರ ಹಳ್ಳಿ ಗುಂಗುಡ್‌ಮಹಾದ ಉಪವಿಭಾಗೀಯ ಮುಖ್ಯ ಕಚೇರಿ ಮತ್ತು ಬ್ಲಾಕ್). ಹತ್ಯೆಗೀಡಾದ ಮಂದಿಯನ್ನು ಕುಕಲ್ ದಿಗಲ್ (ಪು-50), ಲುತಾ ದಿಗಲ್ (ಪು-25), ತಿಮಾರಿ ಮಲ್ಲಿಕ್, ಬ್ರಿಂಗುಲಿ ಮಲ್ಲಿಕ್ ಮತ್ತು ಮಿದ್ಯಾಲಿ ಮಲ್ಲಿಕ್ (ಎಲ್ಲರೂ 40ರ ಆಸುಪಾಸಿನ ಮಹಿಳೆಯರು) ಮತ್ತು ಸುನಿತಾ ದಿಗಲ್ ಮತ್ತು ಲುಕಾ ದಿಗಲ್‌ನ ಎರಡರ ಹರೆಯದ ಮಗು. ಗಂಭೀರವಾಗಿ ಗಾಯಗೊಂಡಿದ್ದ ಲುತಾ ದಿಗಲ್‌ರನ್ನು ಸಮೀಪದ ಆಸ್ಪತ್ರೆಗೆ ತಕ್ಷಣ ಚಿಕಿತ್ಸೆಗೆ ಸಾಗಿಸದೇ ಇದ್ದ ಪರಿಣಾಮವಾಗಿ ಆತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ. ನರೇಗಾ ಯೋಜನೆಯಡಿ ದುಡಿದ ಸಂಬಳವನ್ನು ಪಡೆದು ಶುಕ್ರವಾರದಂದು ಒಂದು ವ್ಯಾನ್‌ನಲ್ಲಿ ರಾತ್ರಿ ಸುಮಾರು 9:30ರ ಹೊತ್ತಿಗೆ 12 ಮಂದಿ ತಮ್ಮ ಹಳ್ಳಿಗೆ ಮರಳುತ್ತಿದ್ದರು. ತಮ್ಮ ಹಳ್ಳಿಯಿಂದ ಕೇವಲ ಎರಡು ಕಿ.ಮೀ. ದೂರವಿರುವಾಗ ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ ಹಳ್ಳಿಗರು ಮಾವೋವಾದಿಗಳು ಮತ್ತು ಭದ್ರತಾಪಡೆಯ ಮಧ್ಯೆ ನಡೆಯುತ್ತಿದ್ದ ಗುಂಡಿನ ಚಕಮಕಿಯ ಮಧ್ಯೆ ಸಿಲುಕಿಕೊಂಡಿದ್ದರು. ಆದರೆ ಮಾನವ ಹಕ್ಕು ಕಾರ್ಯಕರ್ತರ ಪ್ರಕಾರ ಎನ್‌ಕೌಂಟರ್ ನಡೆಯುತ್ತಿರುವ ಪ್ರದೇಶಕ್ಕೆ ವಾಹನ ಪ್ರವೇಶಿಸುವುದು ಮತ್ತು ಅದರಲ್ಲಿರುವ ಎಲ್ಲಾ 12 ಮಂದಿಯ ಮೇಲೆ ಗುಂಡೇಟು ಬೀಳುವುದು ಅಸಾಧ್ಯ. ಮುಖ್ಯಮಂತ್ರಿ ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ಹತ್ಯೆಗೀಡಾದವರ ಕುಟುಂಬಕ್ಕೆ ತಲಾ ರೂ. ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾ ಮುಖ್ಯಕಚೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಆಡಳಿತವರ್ಗಕ್ಕೆ ಸೂಚಿಸಲಾಗಿದೆ. ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಕಂಧಮಾಲ್ ಜಿಲ್ಲೆಯಲ್ಲಿ ಮಾವೋವಾದಿಗಳನ್ನು ನಿಗ್ರಹಿಸುವ ನೆಪದಲ್ಲಿ ನಡೆದ ಈ ಹತ್ಯೆಯನ್ನು ಖಂಡಿಸುತ್ತಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಈ ಘಟನೆಗೆ ಜವಾಬ್ದಾರರನ್ನಾಗಿಸಿವೆ. ಪೊಲೀಸರಿಂದ ಮುಗ್ಧ ಜನರ ಹತ್ಯೆ ನಡೆದಿದೆ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ನರಸಿಂಗ ಮಿಶ್ರಾ, ‘‘ಗೃಹ ಇಲಾಖೆಯ ಮುಖ್ಯಸ್ಥರಾಗಿರುವ ನವೀನ್ ರಾಜ್ಯ ಸರಕಾರ ಪ್ರಾಯೋಜಿತ ಸ್ವೀಕಾರಾರ್ಹವಲ್ಲದ ತನ್ನ ಸ್ವಂತ ಜನರ ಹತ್ಯೆಗೆ ಉತ್ತರದಾಯಿಯಾಗಿದ್ದಾರೆ’’ ಎಂದು ತಿಳಿಸಿದ್ದಾರೆ. ‘‘ಇದು ಹೇಗೆ ನಡೆಯಲು ಸಾಧ್ಯ ಮತ್ತು ಕೊಲೆಗಾರರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂಬುದಕ್ಕೆ ಅವರು ಉತ್ತರ ನೀಡಬೇಕು. ಜೊತೆಗೆ ಸರಕಾರವು ಪರಿಹಾರ ಧನವನ್ನು ಕನಿಷ್ಠ ಪ್ರತಿಯೊಬ್ಬರಿಗೆ ತಲಾ ರೂ. 20 ಲಕ್ಷ ಕೊಡಬೇಕು’’ ಎಂದು ನರಸಿಂಗ ಆಗ್ರಹಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಮಾರ್ಗದರ್ಶನದ ದೃಷ್ಟಿಯಿಂದ ನ್ಯಾಯಾಂಗ ತನಿಖೆ ಘೋಷಿಸುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು ಎಂದು ಹೇಳಿರುವ ಅವರು ಒಡಿಶಾದಲ್ಲಿ ನ್ಯಾಯಾಂಗ ತನಿಖೆ ಎಂಬುದು ಅಪಹಾಸ್ಯಕ್ಕೀಡಾಗಿದೆ, ಯಾಕೆಂದರೆ ಇವುಗಳಲ್ಲಿ ಬಹುತೇಕವು ಒಂದು ಸೈದ್ಧಾಂತಿಕ ಕೊನೆಯನ್ನು ಕಾಣುವುದೇ ಇಲ್ಲ ಎಂದು ಹೇಳಿದರು. ಹತ್ಯೆಗಳಿಂದಾಗಿ ರಾಜ್ಯ ಸರಕಾರ ವಿನಾಶಕಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್ ಹರಿಚಂದನ್ ಎಚ್ಚರಿಸಿದ್ದಾರೆ. ಬಿಜೆಪಿ ವಕ್ತಾರ ಸಜ್ಜನ್ ಶರ್ಮಾ ಸರಕಾರವು ಮಾವೋ ನಿಗ್ರಹ ಕಾರ್ಯಾಚರಣೆಯ ವಿಷಯದಲ್ಲಿ ದಿಕ್ಕುದೆಸೆಯಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ಹಕ್ಕುಗಳ ಹೋರಾಟಗಾರ ಬಿಸ್ವಪ್ರಿಯಾ ಕನುಂಗೊ, ‘‘ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದರಿಂದ ಮಾವೋವಾದಿಗಳನ್ನು ನಿಗ್ರಹಿಸುವ ತನ್ನ ರಣತಂತ್ರ ಮತ್ತು ಯೋಜನೆಯನ್ನು ಸರಕಾರ ಮರುಪರಿಶೀಲಿಸಬೇಕು’’ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ನೇರವಾಗಿ ನ್ಯಾಯಾಲಯಕ್ಕೆ ವರದಿಯನ್ನು ಒಪ್ಪಿಸುವಂಥ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಎಂದು ಆಗ್ರಹಿಸಿರುವ ಮರುನಿರ್ಮಿಸಲ್ಪಟ್ಟ ಪ್ರಕರಣಗಳ ವಿರುದ್ಧ ಹೋರಾಟ ನಡೆಸುವ ಸ್ವಯಂಸೇವಾ ಸಂಸ್ಥೆಯ (ಸಿಎಎಫ್‌ಸಿ)ಸಂಚಾಲಕರಾದ ನರೇಂದ್ರ ಮೊಹಂತಿ ಹತ್ಯೆಗೀಡಾದವರ ಕುಟುಂಬಗಳಿಗೆ ತಲಾ ರೂ. ಐವತ್ತು ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

‘‘ಇದು ಮಾವೋವಾದಿಗಳು ಮತ್ತು ಭದ್ರತಾಪಡೆಯ ಮಧ್ಯೆ ನಡೆದ ನಕಲಿ ಎನ್‌ಕೌಂಟರ್’’ ಎಂದು ಬಣ್ಣಿಸಿರುವ ಮಾನವ ಹಕ್ಕುಗಳ ಕಾರ್ಯಕರ್ತ ಮನೋಜ್ ಜೆನಾ ರಾಷ್ಟ್ರೀಯ ಮಾನವ ಹಕ್ಕು ಮಂಡಳಿಯ ಮಧ್ಯೆ ಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಮತ್ತು ತಪ್ಪೆಸಗಿದ ಭದ್ರತಾ ಪಡೆಯ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ. 2015ರ ಜುಲೈ 26ರಂದು ನಡೆದ ಇಂಥದ್ದೇ ಘಟನೆಯಲ್ಲಿ ದುಬಾ ನಾಯಕ್ ಮತ್ತು ಆತನ ಪತ್ನಿ ಬಿದು ನಾಯಕ್ ಕಂಧಮಾಲ್ ಜಿಲ್ಲೆಯ ಕೊಟಾಗಟ್ ಬ್ಲಾಕ್‌ನಲ್ಲಿ ಮಾವೋ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದ್ದ ವಿಶೇಷ ಕಾರ್ಯಾಚರಣಾಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜವಾನರಿಂದ ಹತ್ಯೆಗೀಡಾಗಿದ್ದರು. ಕೇರಳದಲ್ಲಿರುವ ತಮ್ಮ ಮಗನ ಜೊತೆ ಮಾತನಾಡಲು ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈ ದಂಪತಿ ಲದಿಮಾ ಬೆಟ್ಟವನ್ನು ಹತ್ತಿತ್ತು. ಮಗನ ಜೊತೆ ಮಾತನಾಡುತ್ತಿರುವಂತೆಯೇ ಅವರ ದೇಹವನ್ನು ಗುಂಡುಗಳು ಸೀಳಿದ್ದವು. ಅವರ ಮಗ ರಾಹುಲ್ ನಾಯಕ್ ರಾಜ್ಯ ಮಾನವ ಹಕ್ಕು ಮಂಡಳಿಗೆ ಒಪ್ಪಿಸಿದ ಅರ್ಜಿಯಲ್ಲಿ, ‘‘ಫೋನ್‌ನಲ್ಲಿ ನನ್ನ ಹೆತ್ತವರು ನೋವಿನಿಂದ ಗೋಳಿಡುತ್ತಿರುವುದನ್ನು ನಾನು ಕೇಳಿದ್ದೇನೆ’’ ಎಂದು ತಿಳಿಸಿದ್ದರು. ಮರುದಿನವಷ್ಟೇ ಗ್ರಾಮಸ್ಥರು ಈ ದಂಪತಿಯ ಗುಂಡಿನಿಂದ ಛಿದ್ರವಾದ ದೇಹಗಳನ್ನು ಪತ್ತೆ ಮಾಡಿದರು.

ಕೃಪೆ:  countercurrents.org   

Writer - ಎಚ್. ಆರ್.

contributor

Editor - ಎಚ್. ಆರ್.

contributor

Similar News