×
Ad

ತೀರ್ಪನ್ನು ಗೌರವಿಸಿ: ಚೀನಾಗೆ ಫಿಲಿಪ್ಪೀನ್ಸ್

Update: 2016-07-14 23:52 IST

ಮನಿಲಾ, ಜು. 14: ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗದ ಮೇಲಿನ ಚೀನಾದ ಏಕಸ್ವಾಮ್ಯವನ್ನು ನಿರಾಕರಿಸುವ ಹೇಗ್‌ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪನ್ನು ಗೌರವಿಸುವಂತೆ ಫಿಲಿಪ್ಪೀನ್ಸ್ ಗುರುವಾರ ಚೀನಾವನ್ನು ಕೋರಿದೆ.

ಆದರೆ, ವಿಶ್ವಸಂಸ್ಥೆ ಬೆಂಬಲಿತ ನ್ಯಾಯಮಂಡಳಿಯು ಮಂಗಳವಾರ ಫಿಲಿಪ್ಪೀನ್ಸ್ ಪರವಾಗಿ ನೀಡಿದ ತೀರ್ಪನ್ನು ತಾನು ನಿರ್ಲಕ್ಷಿಸುವುದಾಗಿ ಚೀನಾ ಈಗಾಗಲೇ ಕೋಪದಿಂದ ಪ್ರತಿಕ್ರಿಯಿಸಿದೆ.

ಚೀನಾದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ದೂರು ನೀಡಿದ್ದ ಫಿಲಿಪ್ಪೀನ್ಸ್, ತೀರ್ಪನ್ನು ಗೌರವಿಸುವಂತೆ ಚೀನಾಕ್ಕೆ ಸೂಚನೆ ನೀಡಲು ಆರಂಭದಲ್ಲಿ ಹಿಂಜರಿದಿತ್ತು. ತನ್ನ ಶಕ್ತಿಶಾಲಿ ನೆರೆ ದೇಶದೊಂದಿಗೆ ಸಂಘರ್ಷವನ್ನು ನಿವಾರಿಸಿಕೊಳ್ಳಬೇಕೆಂಬ ಅಧ್ಯಕ್ಷ ರಾಡ್ರಿಗೊ ಡುಟರ್ಟೆಯ ಸೂಚನೆಯಂತೆ ಆರಂಭದಲ್ಲಿ ಸೌಮ್ಯ ನಿಲುವನ್ನು ತೆಗೆದುಕೊಳ್ಳಲಾಗಿತ್ತು.

ಆದರೆ, ಫಿಲಿಪ್ಪೀನ್ಸ್ ಗುರುವಾರ ತನ್ನ ನಿಲುವನ್ನು ಕಠಿಣಗೊಳಿಸಿತು. ಶುಕ್ರವಾರ ಮಂಗೋಲಿಯದಲ್ಲಿ ಆರಂಭಗೊಳ್ಳಲಿರುವ ಎರಡು ದಿನಗಳ ಏಶ್ಯ-ಯುರೋಪ್ ಶೃಂಗಸಭೆಯಲ್ಲಿ ವಿದೇಶ ಕಾರ್ಯದರ್ಶಿ ಪರ್ಫೆಕ್ಟೊ ಯಸಯ್ ಭಾಗವಹಿಸುವಾಗ ಫಿಲಿಪ್ಪೀನ್ಸ್‌ನ ಆದ್ಯತೆಗಳೇನು ಎಂಬುದನ್ನು ವಿವರಿಸುವ ಹೇಳಿಕೆಯಲ್ಲಿ ಫಿಲಿಪ್ಪೀನ್ಸ್‌ನ ಬದಲಾದ ನಿಲುವು ವ್ಯಕ್ತವಾಯಿತು. ಈ ಶೃಂಗಸಮ್ಮೇಳನದಲ್ಲಿ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಕೂಡ ಭಾಗವಹಿಸಲಿದ್ದಾರೆ.

‘‘ದಕ್ಷಿಣ ಚೀನಾ ಸಮುದ್ರದ ಕುರಿತ ಫಿಲಿಪ್ಪೀನ್ಸ್ ನ ಶಾಂತಿಯುತ ಹಾಗೂ ನಿಯಮಾಧಾರಿತ ನಡೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಇತ್ತೀಚಿನ ತೀರ್ಪನ್ನು ಎಲ್ಲ ಪಕ್ಷಗಳು ಗೌರವಿಸಬೇಕಾದ ಅಗತ್ಯವನ್ನು ಶೃಂಗಸಮ್ಮೇಳನದ ಕಾರ್ಯಸೂಚಿಯ ವ್ಯಾಪ್ತಿಯಲ್ಲೇ ವಿದೇಶ ಕಾರ್ಯದರ್ಶಿ ಯಸಯ್ ಚರ್ಚಿಸುವರು’’ ಎಂದು ವಿದೇಶ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಬಹುರಾಷ್ಟ್ರೀಯ ವೇದಿಕೆಯಲ್ಲಿ ಈ ವಿಷಯವನ್ನು ಎತ್ತದಂತೆ ಈವರೆಗೆ ಚೀನಾ ಫಿಲಿಪ್ಪೀನ್ಸ್‌ನ ಮೇಲೆ ಒತ್ತಡ ಹೇರುತ್ತಾ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News