×
Ad

ಡೇವಿಸ್‌ಕಪ್: ಭಾರತಕ್ಕೆ ಮುನ್ನಡೆ

Update: 2016-07-15 23:51 IST

ಚಂಡೀಗಡ, ಜು.15: ಭಾರತದ ಯುವ ಟೆನಿಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಡೇವಿಸ್‌ಕಪ್‌ನಲ್ಲಿ ಆಡಿದ ತನ್ನ ಚೊಚ್ಚಲ ಪಂದ್ಯದಲ್ಲಿ ಗೆಲುವಿನ ಸವಿ ಉಂಡಿದ್ದಾರೆ. ಸಾಕೇತ್ ಮೈನೇನಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದ್ದಾರೆ.

ಶುಕ್ರವಾರ ಇಲ್ಲಿ ಆರಂಭವಾದ ಏಷ್ಯಾ/ಓಶಿಯಾನಿಯಾ ಗ್ರೂಪ್-1 ಡೇವಿಸ್‌ಕಪ್ ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗೆಲುವು ಸಾಧಿಸಿರುವ ರಾಮನಾಥನ್ ಹಾಗೂ ಮೈನೇನಿ ದಕ್ಷಿಣ ಕೊರಿಯಾದ ವಿರುದ್ಧ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ರಾಮನಾಥನ್ ಕೊರಿಯಾದ ಸಿಯೊಂಗ್ ಚಾನ್ ಹಾಂಗ್‌ರನ್ನು ಮಣಿಸುವುದರೊಂದಿಗೆ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಎರಡು ಗಂಟೆ, 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 21ರ ಹರೆಯದ ರಾಮ್‌ಕುಮಾರ್, ಕೊರಿಯಾದ ಆಟಗಾರನಿಗೆ ಪ್ರತಿರೋಧ ಒಡ್ಡಿದರು. ಹಾಂಗ್ ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹಿಂದೆ ಸರಿದ ಕಾರಣ ರಾಮ್‌ಕುಮಾರ್‌ಗೆ ಜಯ ಒಲಿಯಿತು. ದಿಢೀರನೆ ಕಾಣಿಸಿಕೊಂಡ ಗಾಯದಿಂದಾಗಿ ಹಾಂಗ್ ಪಂದ್ಯದಿಂದ ಹಿಂದೆ ಸರಿದಾಗ ರಾಮ್‌ಕುಮಾರ್ 6-3, 2-6, 6-3, 6-5(15-15) ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು.

 ಡೇವಿಸ್‌ಕಪ್‌ನ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಸಾಕೇತ್ ಮೈನೇನಿ ಕೊರಿಯಾದ ಅನುಭವಿ ಆಟಗಾರ ಯಾಂಗ್-ಕಿಯೂ ಲಿಮ್‌ರನ್ನು 6-1, 3-6, 6-4, 3-6, 5-2 ಸೆಟ್‌ಗಳ ಅಂತರದಿಂದ ಮಣಿಸಿ ಭಾರತಕ್ಕೆ ಡೇವಿಸ್‌ಕಪ್‌ನ ಮೊದಲದಿನವೇ 2-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

3 ಗಂಟೆ, 9 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇದೇ ಮೊದಲ ಬಾರಿ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ 28ರ ಹರೆಯದ ಮೈನೇನಿ ಗೆಲುವಿನ ದಡ ಸೇರಿದ ತಕ್ಷಣ ಜೆರ್ಸಿಯನ್ನು ಕಳಚಿ, ಗಾಳಿಗೆ ಪಂಚ್ ನೀಡಿ ಸಂಭ್ರಮಪಟ್ಟರು. ಮೈನೇನಿ ಸಹ ಆಟಗಾರರು ಅವರನ್ನು ಭುಜದ ಮೇಲೆ ಕುಳ್ಳಿರಿಸಿ ಸಂಭ್ರಮಕ್ಕೆ ಸಾಥ್ ನೀಡಿದರು.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದಿರುವ ಮಳೆ ಹುಲ್ಲುಹಾಸಿನಲ್ಲಿ ನಡೆಯುತ್ತಿರುವ ಪಂದ್ಯದ ಮೇಲೆ ಪರಿಣಾಮ ಬೀರಿದೆ. ಸೆಂಟರ್‌ಕೋರ್ಟ್ ಒಣಗಿದ್ದರೂ ಚೆಂಡು ಹೆಚ್ಚು ಪುಟಿದೇಳುತ್ತಿರಲಿಲ್ಲ. ಇದು ಪಂದ್ಯದ ಗುಣಮಟ್ಟವನ್ನು ಕುಗ್ಗಿಸಿದೆ. ಸೂರ್ಯರಶ್ಮಿ ಕಾಣಿಸದಿದ್ದರೂ ವಿಪರೀತ ಸೆಖೆಯ ವಾತಾವರಣ ಆಟಗಾರರ ಫಿಟ್‌ನೆಸ್‌ನ್ನು ಪರೀಕ್ಷೆಗೆ ಒಡ್ಡಿದೆ. ಕೊರಿಯಾದ ಆಟಗಾರರು ಹುಲ್ಲುಹಾಸಿನ ಅಂಗಳದಲ್ಲಿ ಹೊಂದಿಕೊಂಡು ಉತ್ತಮ ಹೋರಾಟ ನೀಡಿದರು.

ಭಾರತದ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಹಾಗೂ ಲಿಯಾಂಡರ್ ಪೇಸ್ ಶನಿವಾರ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ಹಾಂಗ್ ಚುಂಗ್ ಹಾಗೂ ಯುನ್‌ಸಿಯೊಂಗ್ ಚುಂಗ್‌ರನ್ನು ಎದುರಿಸಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News