ಭಾರತ ಮೂಲದ ಆಸ್ಟ್ರೇಲಿಯ ಕುಸ್ತಿಪಟು ರಿಯೋ ಗೇಮ್ಸ್‌ಗೆ ಅನರ್ಹ

Update: 2016-07-15 18:23 GMT

ಮೆಲ್ಬೋರ್ನ್, ಜು.15: ಭಾರತ ಮೂಲದ ಕುಸ್ತಿಪಟು ವಿನೋದ್ ಕುಮಾರ್ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯ ತಂಡದಿಂದ ಹೊರಹಾಕಲ್ಪಟ್ಟಿದ್ದಾರೆ.

ಡೋಪಿಂಗ್ ನಿಯಮ ಉಲ್ಲಂಘನೆಯಾಗಿರುವ ಕಾರಣ ಅಥ್ಲೀಟ್ ಕುಮಾರ್ ಹೆಸರನ್ನು ರಿಯೋ ಒಲಿಂಪಿಕ್ಸ್‌ನಿಂದ ಹಿಂದಕ್ಕೆ ಪಡೆಯುವಂತೆ ಆಸ್ಟ್ರೇಲಿಯದ ಕುಸ್ತಿ ಸಂಸ್ಥೆಗೆ ತಿಳಿಸಲಾಗಿದೆ ಎಂದು ಆಸ್ಟ್ರೇಲಿಯದ ಒಲಿಂಪಿಕ್ ಸಮಿತಿ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಅಲ್ಜೇರಿಯದಲ್ಲಿ ನಡೆದ ಆಫ್ರಿಕನ್/ಒಶಿಯಾನಿಯ ಒಲಿಂಪಿಕ್ ಕ್ವಾಲಿಫೈಯರ್ ಟೂರ್ನಿಯ ವೇಳೆ ಕುಮಾರ್‌ಗೆ ನಡೆಸಿದ್ದ ಎ ಹಾಗೂ ಬಿ ಮಾದರಿಯ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ.

ಕುಮಾರ್‌ರನ್ನು 30 ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ಆದಾಗ್ಯೂ ಅವರಿಗೆ ಕ್ರೀಡಾ ನ್ಯಾಯಾ ಪಂಚಾಯತಿಗೆ ಅಮಾನತು ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ಕುಮಾರ್ ರಿಯೋ ಗೇಮ್ಸ್‌ನಲ್ಲಿ ಗ್ರಿಕೊ-ರೊಮನ್ ಶೈಲಿಯ ಕುಸ್ತಿಯಲ್ಲಿ 66 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿತ್ತು.

2010ರಲ್ಲಿ ಭಾರತದಿಂದ ಆಸ್ಟ್ರೇಲಿಯಕ್ಕೆ ವಲಸೆ ಹೋಗಿದ್ದ ವಿನೋದ್ ಕುಮಾರ್ 2015ರಲ್ಲಿ ಆಸ್ಟ್ರೇಲಿಯದ ಪೌರತ್ವ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News