×
Ad

ಮಿಸ್ಬಾ ಶತಕ ದಾಖಲಿಸಿದ ಅತ್ಯಂತ ಹಿರಿಯ ವಯಸ್ಸಿನ ನಾಯಕ

Update: 2016-07-15 23:59 IST


ಲಂಡನ್, ಜು.15: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಅವರು ಶತಕ ದಾಖಲಿಸಿದ ಅತ್ಯಂತ ಹಿರಿಯ ವಯಸ್ಸಿನ ನಾಯಕನೆಂದು ದಾಖಲೆ ಬರೆದಿದ್ದಾರೆ.
62ನೆ ಟೆಸ್ಟ್ ಆಡುತ್ತಿರುವ ಮಿಸ್ಬಾವುಲ್ ಹಕ್ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನ 154 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 10ನೆ ಶತಕ ದಾಖಲಿಸಿದ್ದರು. ಮೊದಲ ದಿನ 110 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಮಿಸ್ಬಾ ಎರಡನೆ ದಿನ ಈ ಮೊತ್ತಕ್ಕೆ 4 ರನ್ ಸೇರಿಸಿ ಔಟಾಗಿದ್ದರು.
ಈ ಪಂದ್ಯದಲ್ಲಿ ನಾಯಕ ಮಿಸ್ಬಾ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸತತ ಏಳನೆ ಬಾರಿ ಟಾಸ್ ಜಯಿಸಿದ ಮಿಸ್ಬಾ ಅವರು ಪಾಕಿಸ್ತಾನ ತಂಡದ ಮಾಜಿ ನಾಯಕ ಇಂತಿಕಾಬ್ ಆಲಮ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು 1973-1974ರ ಅವಧಿಯಲ್ಲಿ ಸತತ ಏಳು ಟೆಸ್ಟ್‌ಗಳಲ್ಲಿ ಟಾಸ್ ಜಯಿಸಿದ ದಾಖಲೆ ಬರೆದಿದ್ದರು.
 ಮಿಸ್ಬಾ ವಯಸ್ಸು 42 ವರ್ಷ, 47 ದಿನ. ಇಂಗ್ಲೆಂಡ್ ಮಣ್ಣಿನಲ್ಲಿ ಶತಕ ದಾಖಲಿಸಿದ ಅತ್ಯಂತ ಹಿರಿಯ ಪ್ರವಾಸಿ ತಂಡದ ಆಟಗಾರ. ಕಳೆದ 31 ವರ್ಷಗಳ ಹಿಂದೆ ಶ್ರೀಲಂಕಾದ ಸೋಮಚಂದ್ರ ಡಿ ಸಿಲ್ವ ಶತಕ ದಾಖಲಿಸಿದ್ದರು. ಆಗ ಅವರ ವಯಸ್ಸು 42 ವರ್ಷ ಮತ್ತು 73 ದಿನಗಳು. ಸಿಲ್ವ ಲಾರ್ಡ್ಸ್‌ನಲ್ಲಿ 1984ರಲ್ಲಿ ಶತಕ ದಾಖಲಿಸಿದ್ದರು.
ಇಂಗ್ಲೆಂಡ್ 253/7
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 71ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 253 ರನ್ ಗಳಿಸಿದೆ. ನಾಯಕ ಅಲೆಸ್ಟೈರ್ ಕುಕ್ 81 ರನ್ ಮತ್ತು ರೂಟ್ 48 ರನ್ ಗಳಿಸಿ ಔಟಾಗಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನ ತಂಡ 99.2 ಓವರ್‌ಗಳಲ್ಲಿ 339 ರನ್‌ಗಳಿಗೆ ಆಲೌಟಾಗಿತ್ತು.
ಸಂಕ್ಷಿಪ್ತ ಸ್ಕೋರ್ ವಿವರ
ಪಾಕಿಸ್ತಾನ ಮೊದಲ ಇನಿಂಗ್ಸ್ 99.2 ಓವರ್‌ಗಳಲ್ಲಿ 339( ಮಿಸ್ಬಾವುಲ್ ಹಕ್ 114, ಶಫೀಕ್ 73; ವೊಕೇಸ್ 70ಕ್ಕೆ 6, ಬ್ರಾಡ್ 71ಕ್ಕೆ 3)
ಇಂಗ್ಲೆಂಡ್ ಮೊದಲ ಇನಿಂಗ್ಸ್ 71ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 253 (ಅಲೆಸ್ಟೈರ್ ಕುಕ್ 81, ರೂಟ್ 48; ಶಾಹ್ 64ಕ್ಕೆ 5).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News