ಭಾರತದ ಮಹಿಳಾ ಹಾಕಿ ತಂಡ ವಿದೇಶಕ್ಕೆ ಪಯಣ
ಹೊಸದಿಲ್ಲಿ, ಜು.15: ಮುಂದಿನ ತಿಂಗಳು ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್‌ಗೆ ತಯಾರಿಯಾಗುವ ಉದ್ದೇಶದಿಂದ ಹೊಸತಾಗಿ ನೇಮಕಗೊಂಡಿರುವ ನಾಯಕಿ ಸುಶೀಲಾ ಚಾನು ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡ ಕೆನಡಾ ಹಾಗೂ ಅಮೆರಿಕದ ವಿರುದ್ಧ ಒಟ್ಟು ಐದು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಭಾರತದ ಮಹಿಳಾ ತಂಡ ಶುಕ್ರವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ. ಕೆನಡಾ ವಿರುದ್ಧ ಮೂರು ಹಾಗೂ ಅಮೆರಿಕದ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಒಲಿಂಪಿಕ್ಸ್‌ಗೆ ಮೊದಲು ಇದು ಕೊನೆಯ ಅಂತಾರಾಷ್ಟ್ರೀಯ ಪಂದ್ಯ.
ಸುಶೀಲಾ ಹಾಗೂ ಉಪ ನಾಯಕಿ ದೀಪಿಕಾ ಥಾಕೂರ್‌ರಲ್ಲದೆ, ಹಿರಿಯ ಆಟಗಾರ್ತಿಯರಾದ ನವಜೋತ್ ಕೌರ್, ದೀಪಾ ಗ್ರೇಸ್ ಎಕ್ಕಾ, ಮೊನಿಕಾ, ನಿಕ್ಕಿ ಪ್ರಧಾನ್ ಹಾಗೂ ವಂದನಾ ಕಟಾರಿಯಾ ಅವರು ವಿದೇಶಕ್ಕೆ ತೆರಳಲಿದ್ದಾರೆ.
‘‘ನಾವು ಉತ್ತಮ ಆಟಗಾರ್ತಿಯರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಎಲ್ಲರೂ ಅರ್ಹತೆಯ ಆಧಾರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಎಲ್ಲ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಲು ಬಯಸಿದ್ದು ಆ ನಿಟ್ಟಿನಲ್ಲಿ ಕಠಿಣ ಶ್ರಮಪಡುತ್ತಿದ್ದಾರೆ’’ ಎಂದು ಭಾರತದ ಮುಖ್ಯ ಕೋಚ್ ನೀಲ್ ಹೌವುಡ್ ಹೇಳಿದ್ದಾರೆ.
‘‘ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕಾರಣ ನಮಗೆಲ್ಲರಿಗೂ ಇದು ತುಂಬಾ ಸಂತೋಷದ ಕ್ಷಣ. ಎಲ್ಲರಿಗೂ ಸಮಾನ ಜವಾಬ್ದಾರಿಯೂ ಇದೆ. ರಿಯೋಗೆ ಮೊದಲು ಎಲ್ಲ ಪಂದ್ಯಗಳು ನಿರ್ಣಾಯಕ. ವಿದೇಶ ಪ್ರವಾಸ ರಿಯೋ ಒಲಿಂಪಿಕ್ಸ್‌ಗೆ ಮೊದಲು ಉತ್ತಮ ತಯಾರಿಯಾಗಿದೆ’’ಎಂದು ನಾಯಕಿ ಸುಶೀಲಾ ಹೇಳಿದ್ದಾರೆ