×
Ad

ಉಗ್ರರ ದಾಳಿ ಭೀತಿ: ರಿಯೋ ಗೇಮ್ಸ್‌ಗೆ ಬಿಗಿ ಭದ್ರತೆ

Update: 2016-07-16 23:34 IST

ಬ್ರೆಸಿಲಿಯ, ಜು.16: ಫ್ರಾನ್ಸ್‌ನ ನೈಸ್ ನಗರದಲ್ಲಿ ಉಗ್ರಗಾಮಿಗಳ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಬ್ರೆಝಿಲ್ ಶುಕ್ರವಾರ ತಿಳಿಸಿದೆ.

ನೀಸ್‌ನಲ್ಲಿ ಉಗ್ರನೊಬ್ಬ ದಾಳಿ ನಡೆಸಿ ಕನಿಷ್ಠ 84 ಜನರನ್ನು ಬಲಿ ಪಡೆದುಕೊಂಡ ಬೆನ್ನಿಗೇ ಬ್ರೆಝಿಲ್‌ನ ಹಂಗಾಮಿ ಅಧ್ಯಕ್ಷ ಮೈಕಲ್ ಟೆಮೆರ್, ಗುಪ್ತಚರ ಇಲಾಖೆಯ ಮುಖ್ಯಸ್ಥ ಹಾಗೂ ತನ್ನ ಕ್ಯಾಬಿನೆಟ್ ಸದಸ್ಯರೊಂದಿಗೆ ತುರ್ತು ಸಭೆ ಕರೆದರು.

ಸಭೆಯ ಬಳಿಕ ಮಾತನಾಡಿದ ಗುಪ್ತಚರ ಇಲಾಖೆಯ ಮುಖ್ಯಸ್ಥ ಸೆರ್ಜಿಯೊ , ಹೆಚ್ಚುವರಿ ಚೆಕ್‌ಪಾಯಿಂಟ್, ಬ್ಯಾರಿಕೇಡ್ಸ್ ಹಾಗೂ ಟ್ರಾಫಿಕ್ ನಿರ್ಬಂಧನೆಯ ಮೂಲಕ ಹೊಸ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ಅಗಸ್ಟ್ 5 ರಿಂದ 21ರ ತನಕ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ ಈಗಾಗಲೇ 85,000 ಪೊಲೀಸರು ಹಾಗೂ ಸೈನಿಕರನ್ನು ನಿಯೋಜಿಸುವುದರೊಂದಿಗೆ ಒಲಿಂಪಿಕ್ಸ್‌ಗೆ ಬಿಗಿ ಭದ್ರತೆ ನೀಡಲು ನಿರ್ಧರಿಸಿದೆ. ಇದು 2012ರ ಲಂಡನ್ ಗೇಮ್ಸ್‌ಗೆ ಏರ್ಪಡಿಸಿದ್ದ ಭದ್ರತೆಗಿಂತ ಎರಡುಪಟ್ಟು ಹೆಚ್ಚು.

ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಫ್ರಾನ್ಸ್ ತಂಡದ ಮೇಲೆ ಉಗ್ರರು ದಾಳಿ ನಡೆಸುವ ಯೋಜನೆ ಹಾಕಿದ್ದಾರೆ ಎಂದು ಫ್ರಾನ್ಸ್ ಮಿಲಿಟರು ಗುಪ್ತಚರ ಮುಖ್ಯಸ್ಥರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬ್ರೆಝಿಲ್‌ನಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News