ನ್ಯಾಯಾಧೀಶರ ಹೊಣೆಗಾರಿಕೆ ಮಸೂದೆ ಪುನಾರಚನೆ, ಕ್ಷಮತೆ ಮಾಪನಕ್ಕೆ ಒಲವು
ಹೊಸದಿಲ್ಲಿ, ಜು.17: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳು ಬಂದಾಗ ವಿಚಾರಣೆ ನಡೆಸುವ ವ್ಯವಸ್ಥೆಯನ್ನು ರೂಪಿಸುವ ಸಂಬಂಧ ಹಿಂದಿನ ಯುಪಿಎ ಸರಕಾರ ಸಿದ್ಧಪಡಿಸಿದ್ದ ಮಸೂದೆಯನ್ನು ಪರಿಷ್ಕರಿಸಲು ಮೋದಿ ಸರಕಾರ ನಿರ್ಧರಿಸಿದೆ. ಇದರ ಅನ್ವಯ ನ್ಯಾಯಾಂಗದ ಉನ್ನತ ಹುದ್ದೆಯಲ್ಲಿರುವವರ ಕ್ಷಮತೆಯನ್ನು ಅಳೆಯುವ ಹೊಸ ವಿಧಿಯನ್ನು ಇದರಲ್ಲಿ ಸೇರಿಸಲಾಗುತ್ತಿದೆ.
ನ್ಯಾಯಾಂಗ ಗುಣಮಟ್ಟ ಹಾಗೂ ಹೊಣೆಗಾರಿಕೆ ಮಸೂದೆಯನ್ನು ಹಿಂದಿನ ಯುಪಿಎ ಸರಕಾರ ಮಂಡಿಸಿತ್ತು. ಆದರೆ 2014ರಲ್ಲಿ 15ನೆ ಲೋಕಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಇದು ಅನೂರ್ಜಿತಗೊಂಡಿತ್ತು. ಇದೀಗ ಸರಕಾರ ಕೆಲ ಬದಲಾವಣೆಗಳೊಂದಿಗೆ ಹೊಸ ಮಸೂದೆ ಮಂಡಿಸಲು ಮುಂದಾಗಿದೆ. ಹೊಸ ಮಸೂದೆಯ ಚೌಕಟ್ಟು, ನ್ಯಾಷನಲ್ ಮಿಷನ್ ಫಾರ್ ಜಸ್ಟೀಸ್ ಡೆಲಿವರಿ ಆ್ಯಂಡ್ ಲೀಗಲ್ ರಿಫಾರ್ಮ್ಸ್‌ನ ಸಲಹಾ ಮಂಡಳಿ ಸಭೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಚರ್ಚೆಗೆ ಬಂದಿತ್ತು. ದೇಶದಲ್ಲಿ ನ್ಯಾಯಾಂಗ ಹೊಣೆಗಾರಿಕೆಯು, ನ್ಯಾಯಾಂಗ ಸಂಹಿತೆ ಹಾಗೂ ನ್ಯಾಯಾಂಗದ ದುರ್ನಡತೆ ಬಗೆಗೆ ಮಾತ್ರ ಸೀಮಿತವಾಗಿರುತ್ತದೆ. ಭಾರತವು ನ್ಯಾಯಾಂಗದ ಶ್ರೇಷ್ಠತೆ ಚೌಕಟ್ಟನ್ನು ಅನುಸರಿಸಿದಲ್ಲಿ, ದೇಶದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆಯನ್ನೂ ತರಲು ಅವಕಾಶವಾಗುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದರು.