×
Ad

ದೇಶ ಒಡೆಯುವ ಬದಲು ಜೋಡಿಸಿ: ಅಮೆರಿಕದ ರಾಜಕಾರಣಿಗಳಿಗೆ ಒಬಾಮ ಮನವಿ

Update: 2016-07-18 23:46 IST

ವಾಶಿಂಗ್ಟನ್,ಜು.18: ಬೇಟನ್‌ರೋಗ್ ನಗರದಲ್ಲಿ ರವಿವಾರ ಮೂವರು ಪೊಲೀಸರ ಹತ್ಯಾಕಾಂಡವನ್ನು ‘ಹೇಡಿತನದ ದಾಳಿ’ಯೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವೇಷಕಾರಿ ಪದಗಳನ್ನು ಬಳಸುವುದನ್ನು ನಿಲ್ಲಿಸಿ ರಾಷ್ಟ್ರೀಯ ಏಕತೆಗೆ ಶ್ರಮಿಸುವಂತೆ ಅವರು ಅಮೆರಿಕದ ಪ್ರಜೆಗಳು ಹಾಗೂ ಜನತೆಗೆ ಮನವಿ ಮಾಡಿದ್ದಾರೆ. ದೇಶವನ್ನು ಒಡೆಯುವ ಬದಲು ಜೋಡಿಸುವ ಪ್ರಯತ್ನಕ್ಕೆ ಕೈಜೋಡಿಸಬೇಕೆಂದು ಅವರು ಕರೆ ನೀಡಿದ್ದಾರೆ.

ಲೂಸಿಯಾನ ಜಿಲ್ಲೆಯ ಬೇಟನ್ ರೋಗ್‌ನಲ್ಲಿ ಆಫ್ರಿಕನ್ ಮೂಲದ ಅಮೆರಿಕನ್ ಮೆರೈನ್ ಯೋಧನೊಬ್ಬ ಮೂವರು ಪೊಲೀಸ್ ಅಧಿಕಾರಿಗಳನ್ನು ರವಿವಾರ ದಾರುಣವಾಗಿ ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಳಿಕ ಅವರು ಶ್ವೇತಭವನದಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೀಗೆ ಹೇಳಿದ್ದಾರೆ.

‘‘ನಮ್ಮ ನಡುವೆ ವಿಭಜನೆಗಳಿವೆ. ಆದರೆ ಅದೇನೂ ಹೊಸತಲ್ಲ. ಈ ವಿಭಜನೆಗಳ ಬಗ್ಗೆ ಸುದ್ದಿ ಹಾಗೂ ಸಾಮಾಜಿಕ ಮಾಧ್ಯಮಗಳು ದಿನವಿಡೀ ಉತ್ಪ್ರೇಕ್ಷಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ’’ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ. ಜನಾಂಗೀಯ ವಿಭಜನೆಯನ್ನು ವಿಸ್ತರಿಸುವ ಪ್ರಯತ್ನವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿರುವುದನ್ನು ಪರೋಕ್ಷವಾಗಿ ತನ್ನ ಭಾಷಣದಲ್ಲಿ ಪ್ರಸ್ತಾವಿಸಿರುವ ಒಬಾಮ,ರಾಜಕೀಯ ಲಾಭಗಳನ್ನು ಪಡೆಯಲು ಅಥವಾ ತಮ್ಮ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು ಬೇಜವಾಬ್ದಾರಿ ರಹಿತ ಆರೋಪಗಳನ್ನು ಮಾಡದಂತೆ ರಾಜಕೀಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.

‘‘ನಾವೆಲ್ಲರೂ ನಮ್ಮ ಮಾತುಗಳನ್ನು ನಿಯಂತ್ರಿಸುವ ಹಾಗೂ ನಮ್ಮ ಹೃದಯಗಳನ್ನು ತೆರೆದಿಡುವ ಅಗತ್ಯವಿದೆ. ಈ ವಾರ ಡಲ್ಲಾಸ್‌ನಲ್ಲಿ ನಡೆದಿರುವ ಘಟನೆಯು, ಒಂದು ಸಮಾಜವಾಗಿ ನಾವು ಕಾನೂನುಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಹಾಗೂ ಪರಸ್ಪರ ಏಕತೆ ಮತ್ತು ತಿಳುವಳಿಕೆಯನ್ನು ಬಲಪಡಿಸುವ ಅಗತ್ಯವನ್ನು ಎತ್ತಿ ತೋರಿಸಿದೆ’’ ಎಂದಿದ್ದಾರೆ.

ಈ ಮಧ್ಯೆ ಬೇಟನ್ ರೋಗ್‌ನಲ್ಲಿ ನಡೆದ ಮೂವರು ಪೊಲೀಸರ ಹತ್ಯೆ ಘಟನೆಗೆ ಅಮೆರಿಕದ ರಾಜಕೀಯ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಇದೊಂದು ವಿನಾಶಕಾರಿ ದಾಳಿಯೆಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾದ ಹಿಲರಿ ಕ್ಲಿಂಟನ್ ಆಘಾತ ವ್ಯಕ್ತಪಡಿಸಿದ್ದಾರೆ. ‘‘ನಮ್ಮ ಕುಟುಂಬಗಳು ಹಾಗೂ ಸಮುದಾಯಗಳ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಪುರುಷರು ಹಾಗೂ ಮಹಿಳೆಯರ ಮೇಲೆ ನಡೆಯುವ ದಾಳಿಯನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ ’’ ಎಂದು ಅವರು ಹೇಳಿದ್ದಾರೆ.

ಆದರೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ‘ಬೇಟನ್‌ರೋಗ್ ಹತ್ಯಾಕಾಂಡವು ನಮ್ಮ ದೇಶವು ವಿಭಜನೆಯಾಗಿರುವುದಕ್ಕೆ ನಿದರ್ಶನವಾಗಿದೆಯೆಂದು ಹೇಳಿದ್ದಾರೆ. ‘‘ ನಮ್ಮ ದೇಶವು ಸಂಪೂರ್ಣ ವಿಭಜಿತವಾಗಿದೆ ಮತ್ತು ನಮ್ಮ ಶತ್ರುಗಳು ಇದನ್ನು ಗಮನಿಸುತ್ತಿದ್ದಾರೆ. ನಾವು ಚುರುಕಾಗಿ ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ಕಠಿಣವಾಗಿ ವರ್ತಿಸುತ್ತಿಲ್ಲವೆಂದು ಅವರು ಟ್ವೀಟ್‌ನಲ್ಲಿ ಒಬಾಮ ಆಡಳಿತವನ್ನು ಟೀಕಿಸಿದ್ದಾರೆ.

ಅಮೆರಿಕದ ಅಟಾರ್ನಿ ಜನರಲ್ ಲೊರೆಟ್ಟಾ ಲಿಂಚ್ ಕೂಡಾ ಈ ಘೋರ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದು, ಇಂತಹ ಹಿಂಸಾಚಾರಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ. ಇಂತಹ ಕೃತ್ಯಗಳನ್ನು ಬಲವಾದ ಶಬ್ದಗಳಲ್ಲಿ ಖಂಡಿಸುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News