ಟರ್ಕಿಯ ಜನತೆಗೆ ದೇವ ಸಹಾಯ ದೊರೆತಿದೆ
Update: 2016-07-18 23:48 IST
ದೋಹಾ (ಕತರ್). ಜು.18: ಎರ್ದೊಗನ್ ಸರಕಾರವನ್ನು ಪದಚ್ಯುತಗೊಳಿಸಲು ಸೈನಿಕ ಕ್ರಾಂತಿಗೆ ಯತ್ನಿಸಿದವರನ್ನು ಹಿಮ್ಮೆಟ್ಟಿಸುವಲ್ಲಿ ಟರ್ಕಿಯ ಜನತೆಗೆ ದೇವರ ಸಹಾಯ ದೊರೆತಿರುವುದಾಗಿ ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸ ಸಭೆಯ ಅಧ್ಯಕ್ಷ ಡಾ. ಯುಸುಫುಲ್ ಕರ್ಝಾವಿ ಹೇಳಿದ್ದಾರೆ. ಸರ್ವಾಧಿಕಾರಿ ಆಡಳಿತವನ್ನು ಹೇರುವ ಪ್ರಯತ್ನದ ವಿರುದ್ಧ ಅಭೂತಪೂರ್ವ ಹೋರಾಟ ನಡೆಸಿದ ತುರ್ಕಿಯ ಜನತೆ ಅಭಿನಂದನಾರ್ಹರಾಗಿದ್ದಾರೆಂದು ಅವರು ಹೇಳಿದ್ದಾರೆ. ಹಲವು ದಶಕಗಳ ಸೇನಾಡಳಿತದ ದುಷ್ಪರಿಣಾಮಗಳನ್ನು ಅನುಭವಿಸಿದ್ದ ಟರ್ಕಿಯ ಜನತೆ ಮತ್ತೊಮ್ಮೆ ನಿರಂಕುಶ ಪ್ರಭುತ್ವದ ತೆಕ್ಕೆಗೆ ಮರಳಲು ತಯಾರಿಲ್ಲವೆಂಬುದನ್ನು ಇದು ಸಾಬೀತುಪಡಿಸಿದೆಯೆಂದವರು ಹೇಳಿದ್ದಾರೆ. ಸೇನಾಬಂಡಾಯದ ವಿರುದ್ಧ ಟರ್ಕಿಯ ಜನತೆ ನಡೆಸಿದ ಕ್ಷಿಪ್ರ ಹೋರಾಟವು ಬಾಹ್ಯಶಕ್ತಿಗಳು ದೇಶದೊಳಗೆ ಕಾಲೂರುವುದನ್ನು ತಪ್ಪಿಸಿದೆಯೆಂದು, ಇಸ್ಲಾಮಿಕ್ ವಿದ್ವಾಂಸರ ಸಭಾದ ಕಾರ್ಯದರ್ಶಿ ಅಲಿ ಮೊಹಿಯುದ್ದೀನ್ ತಿಳಿಸಿದ್ದಾರೆ.