ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸ: ಬೀಜಿಂಗ್ ಘೋಷಣೆ
ಬೀಜಿಂಗ್, ಜು.18: ಸಮರಾಭ್ಯಾಸಕ್ಕಾಗಿ ತಾನು ದಕ್ಷಿಣ ಚೀನಾ ಸಮುದ್ರದ ಒಂದು ಭಾಗವನ್ನು ನೌಕಾಸಂಚಾರಕ್ಕೆ ಮುಚ್ಚುಗಡೆಗೊಳಿಸುವುದಾಗಿ ಚೀನಾವು ಸೋಮವಾರ ಘೋಷಿಸಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಬೀಜಿಂಗ್‌ನ ಹಕ್ಕುಸ್ಥಾಪನೆಯನ್ನು ವಿರೋಧಿಸಿ ಅಂತಾರಾಷ್ಟ್ರೀಯ ನ್ಯಾಯಾಧಿಕರಣವು ತೀರ್ಪು ನೀಡಿದ ಕೆಲವೇ ದಿನಗಳ ಬಳಿಕ ಚೀನಾ ಕೆಲವೇ ದಿನಗಳಲ್ಲಿ ಚೀನಾದ ಈ ಘೋಷಣೆಯು ಹೆಚ್ಚಿನ ಮಹತ್ವ ಪಡೆದಿದೆ.
ಹೈನಾನ್ ದ್ವೀಪ ಪ್ರಾಂತದ ನೈಋತ್ಯ ಭಾಗದ ಸಾಗರಪ್ರದೇಶವನ್ನು ಸೋಮವಾರದಿಂದ ಗುರುವಾರದವರೆಗೆ ಮುಚ್ಚುಗಡೆಗೊಳಿಸಲಾಗುವುದೆಂದು ಹೈನಾನ್‌ನ ಸಾಗರ ಆಡಳಿತವು ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಆದರೆ ಸಮರಾಭ್ಯಾಸದ ಸ್ವರೂಪದ ಬಗ್ಗೆ ಅದು ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದೆ. ಈ ಬಗ್ಗೆ ನೌಕಾ ಹಾಗೂ ರಕ್ಷಣಾ ಸಚಿವಾಲಯವು ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದೆ. ದಕ್ಷಿಣ ಚೀನಾ ಸಮುದ್ರ ವಿವಾದದ ಬಗ್ಗೆ ಚರ್ಚಿಸಲು ಅಮೆರಿಕ ನೌಕಾಪಡೆಯ ಉನ್ನತ ಆಡ್ಮಿರಲ್ ಒಬ್ಬರು ಚೀನಾಗೆ ತ್ರಿದಿನ ಪ್ರವಾಸ ಕೈಗೊಂಡಿರುವ ನಡುವೆಯೇ ಬೀಜಿಂಗ್ ಸೇನಾಭ್ಯಾಸದ ಘೋಷಣೆ ಮಾಡಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಹಕ್ಕುಸ್ಥಾಪನೆಯನ್ನು ಪ್ರಶ್ನಿಸಿ, ಫಿಲಿಪ್ಪೀನ್ಸ್‌ನ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯವು ನೀಡಿದ ತೀರ್ಪನ್ನು ಚೀನಾ ಕಳೆದ ಮಂಗಳವಾರ ತಿರಸ್ಕರಿಸಿತ್ತು