ತೆಂಡುಲ್ಕರ್‌ರ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಲು ಕೋರಿದ್ದ ಅರ್ಜಿ ವಜಾ
ಹೊಸದಿಲ್ಲಿ,ಜು.18: ಅತ್ಯುನ್ನತ ನಾಗರಿಕ ಗೌರವದ ದುರುಪಯೋಗವಾಗಿರುವ ನೆಲೆಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ತೆಂಡುಲ್ಕರ್ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ನಿಯಮಾವಳಿಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಹೇಳಿತು.
ತೆಂಡುಲ್ಕರ್ ಅವರನ್ನು ಭಾರತ ರತ್ನ ಎಂದು ಬಣ್ಣಿಸಿ ಕೆಲವು ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಪುಸ್ತಕಗಳಿಗೆ ಅದೇ ರೀತಿಯಲ್ಲಿ ಹೆಸರುಗಳನ್ನಿಡಲಾಗಿದೆ. ಭಾರತ ರತ್ನ ಪ್ರಶಸ್ತಿ ಪಡೆದ ಬಳಿಕವೂ ತೆಂಡುಲ್ಕರ್ ಅವರು ಕೆಲವು ವಾಣಿಜ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅರ್ಜಿದಾರ ವಿ.ಕೆ.ನಾಸ್ವಾ ಆರೋಪಿಸಿದ್ದರು.
ತನ್ನ ಹೆಸರಿಗೆ ಭಾರತ ರತ್ನ ಎಂಬ ಪದವನ್ನು ಅಂಟಿಸಿಕೊಂಡು ಖುದ್ದು ತೆಂಡುಲ್ಕರ್ ಅವರೇ ಪುಸ್ತಕವನ್ನು ಬರೆದಿದ್ದರೆ ಅದು ಬೇರೆ ವಿಷಯವಾಗುತ್ತಿತ್ತು. ಆದರೆ ಮೂರನೆ ವ್ಯಕ್ತಿ ಪುಸ್ತಕ ಬರೆದಾಗ ತೆಂಡುಲ್ಕರ್ ಅವರನ್ನು ಉತ್ತರದಾಯಿಯಾಗಿ ಮಾಡುವಂತಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.