×
Ad

ನೂರಾರು ಜನರ ಸ್ಥಳಾಂತರ

Update: 2016-07-18 23:52 IST

ಜೈಪುರ, ಜು.18: ಕಳೆದ 2 ದಿನಗಳಿಂದ ಪೂರ್ವ ರಾಜಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಪ್ರದೇಶದಲ್ಲಿ ನೆರೆಯಂತಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿದುಹೋಗಿದೆ. ನೂರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಭರತ್‌ಪುರ, ಧೋಲ್ಪುರ ಹಾಗೂ ಕರೌಲಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆಯಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ.
ನೆರೆಯಂತಹ ಸ್ಥಿತಿಯು ಜಿಲ್ಲೆಯ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸುಮಾರು 400 ಮಂದಿಯನ್ನು ಶಿಬಿರಗಳಿಗೆ ವರ್ಗಾಯಿಸಲಾಗಿದೆ. ಶುಕ್ರವಾರ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಸಲಾಗಿತ್ತು. ಆದರೆ, ಪರಿಸ್ಥಿತಿ ಸುಧಾರಿಸಿದ್ದುದರಿಂದ ಅದನ್ನು ನಿನ್ನೆ ರಾತ್ರಿ ಹಿಂದೆ ಕಳುಹಿಸಲಾಗಿತ್ತೆಂದು ಭರತ್‌ಪುರದ ಜಿಲ್ಲಾಧಿಕಾರಿ ಲಕ್ಷ್ಮೀನಾರಾಣ ಸೋನಿ ತಿಳಿಸಿದ್ದಾರೆ.
 ಹಲವು ಪ್ರದೇಶಗಳು ಹಾಗೂ ಗ್ರಾಮಗಳು ಜಲಾವೃತಗೊಂಡಿವೆ. ಆದರೆ, ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಇಂದು ಸೇನೆಯ ಇಬ್ಬರು ಅಧಿಕಾರಿಗಳು ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ. ಹಲವು ಗ್ರಾಮಗಳು ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತವಾಗಿದೆ. ನೀರಿನ ಮಟ್ಟ ಹೆಚ್ಚಿರುವ ಕಡೆ ಜನರು ರಸ್ತೆ ಹಾಗೂ ಸೇತುವೆಗಳನ್ನು ದಾಟದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆಯೆಂದು ಧೋಲ್ಪುರ ಜಿಲ್ಲಾಧಿಕಾರಿ ಸುಚಿ ತ್ಯಾಗಿ ತಿಳಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಈ ಪ್ರದೇಶಗಳಲ್ಲಿ ಲಘು ಮಳೆ ಬೀಳುತ್ತಿದೆ. ಆದರೆ, ಇಂದು ಭಾರೀ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ರಕ್ಷಣೆ ಹಾಗೂ ಪರಿಹಾರದ ಎಲ್ಲ ವ್ಯವಸ್ಥೆ ಸ್ಥಳದಲ್ಲಿದೆಯೆಂದು ಅವರು ಹೇಳಿದ್ದಾರೆ.
ಕರೌಲಿಯಲ್ಲಿ ಇಂದು ಶಾಲೆಗಳಿಗೆ ರಜೆ ಸಾರಲಾಗಿದೆ. 300ಕ್ಕೂ ಹೆಚ್ಚು ಮಂದಿ 5-6 ಶಿಬಿರಗಳಲ್ಲಿದ್ದಾರೆ. ಅವರಿಗೆ ಆಹಾರ ಹಾಗೂ ಔಷಧದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಜನರೂ ಸುರಕ್ಷಿತವಾಗಿದ್ದಾರೆಂದು ಪರಿಹಾರ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರೌಲಿಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ 35 ಸದಸ್ಯರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯಾ ಪಡೆಯ (ಎನ್‌ಡಿಆರ್‌ಎಫ್) ತಂಡವೊಂದು ಬೀಡುಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News