ಹೈದರಾಬಾದ್ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಏಳು ಲಕ್ಷ ಫೀಸು!

Update: 2016-07-19 03:45 GMT

ಹೈದರಾಬಾದ್, ಜು.19: ನಗರದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶ ಪಡೆಯುವ ವೇಳೆ, ಒಂದು ಬಾರಿಯ ಶುಲ್ಕ (ಒಟಿಎಫ್) ಆಗಿ ಏಳು ಲಕ್ಷ ರೂಪಾಯಿ ಸ್ವೀಕರಿಸುತ್ತಿರುವ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನಗರದ ಶಾಲೆಗಳಲ್ಲಿ ಶುಲ್ಕ ನಿಯಂತ್ರಿಸುವ ಸಮಯ ಬಂದಿದೆ ಎಂದು ಹೇಳಿದೆ.

ಮಂದಿ ಶ್ರೀಮಂತರಾಗಬೇಕಾದರೆ, ಕಾಲೇಜುಗಳನ್ನಲ್ಲ; ಶಾಲೆಗಳನ್ನು ಆರಂಭಿಸಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ದಿಲೀಪ್ ಬಿ.ಬೋಸ್ಲೆ ಹಾಗೂ ನ್ಯಾಯಮೂರ್ತಿ ಎ.ವಿ.ಶೇಷ ಸಾಯಿ ಅವರನ್ನೊಳಗೊಂಡ ಪೀಠ ಹೇಳಿದೆ. ಹೈದರಾಬಾದ್ ಶಾಲೆಗಳ ಪಾಲಕರ ಸಂಘ, ಒಟಿಎಫ್ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಂುಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂಥ ನಿಕೃಷ್ಟ ಪದ್ಧತಿಯನ್ನು ತಡೆಯಲು ಕಟ್ಟುನಿಟ್ಟಿನ ನಿಯಂತ್ರಣ ವ್ಯವಸ್ಥೆ ಜಾರಿಗೆ ತರುವುದು ಅನಿವಾರ್ಯ ಎಂದು ಬೋಸ್ಲೆ ಹೇಳಿದ್ದಾರೆ.

ಸಂಘದ ಪರ ವಾದ ಮಂಡಿಸಿದ ಕಲ್ಪನಾ ಏಕಬೋಟೆ, ಕ್ಯಾಪಿಟೇಷನ್ ಫೀ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಅದು ಒಟಿಎಫ್ ಹೆಸರಿನಿಂದ ಮತ್ತೆ ಜಾರಿಗೆ ಬಂದಿದೆ ಎಂದು ಹೇಳಿದರು. ಲಾಭಕೋರ ವೃತ್ತಿಪರ ಕಾಲೇಜುಗಳ ವಿರುದ್ಧದ ಕಾರ್ಯಾಚರಣೆಗೆ ಮುಂದಾಗಿರುವ ಮತ್ತು ಶುಲ್ಕ ನಿಯಂತ್ರಣ ಸಮಿತಿ ನೇಮಿಸುವ ತೆಲಂಗಾಣ ಸರಕಾರದ ಕ್ರಮವನ್ನು ನ್ಯಾಯಮೂರ್ತಿ ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಸಂಜೀವ್ ಕುಮಾರ್, ನಮ್ಮ ಸಮೀಕ್ಷೆ ಪ್ರಕಾರ ಹೈದರಾಬಾದ್‌ನಲ್ಲಿ 160 ಶಾಲೆಗಳು ಒಟಿಎಫ್ ಹೆಸರಿನಲ್ಲಿ 50 ಸಾವಿರದಿಂದ 3 ಲಕ್ಷ ರೂಪಾಯಿ ವಸೂಲು ಮಾಡುತ್ತಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದು ನಿಜಕ್ಕೂ ಆತಂಕಕಾರಿ ಎಂದು ನ್ಯಾಯಮೂರ್ತಿಗಳು ಹೇಳಿದರು.

ಹೈದರಾಬಾದ್ ಪಬ್ಲಿಕ್ ಸ್ಕೂಲ್ ಪರ ವಕೀಲರು ಶಾಲೆಗಳ ಕ್ರಮವನ್ನು ಸಮರ್ಥಿಸಿಕೊಂಡು, ಬೋಧನಾ ಸಿಬ್ಬಂದಿಗೆ ಯುಜಿಸಿ ವೇತನ ಶ್ರೇಣಿ ನೀಡುವ ಸಲುವಾಗಿ ನಾವು ಇದನ್ನು ಜಾರಿಗೊಳಿಸಿದ್ದೇವೆ ಎಂದರು. ಆಗ ನ್ಯಾಯಮೂರ್ತಿಗಳು, ಇದನ್ನು ಸಮರ್ಥಿಸಿಕೊಳ್ಳಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News