ಬಂಧಿತ ಐಎಎಸ್ ಅಧಿಕಾರಿ ಬನ್ಸಾಲ್ ಪತ್ನಿ, ಪುತ್ರಿ ನೇಣಿಗೆ ಶರಣು
ಹೊಸದಿಲ್ಲಿ, ಜು.19: ಭ್ರಷ್ಟಾಚಾರ ಆರೋಪದಲ್ಲಿ ದಿಲ್ಲಿಯಲ್ಲಿ ಬಂಧಿತರಾದ ಕೇಂದ್ರ ಸರಕಾರದ ಉನ್ನತ ಅಧಿಕಾರಿ ಬಿ.ಕೆ.ಬನ್ಸಾಲ್ ಅವರ ಪತ್ನಿ ಹಾಗೂ ಪುತ್ರಿ ಮಂಗಳವಾರ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮಂಗಳವಾರ ನಡೆದಿದೆ.ಬನ್ಸಾಲ್ ಅವರ ಪತ್ನಿ ಸತ್ಯಬಾಲ (58) ಹಾಗೂ ಪುತ್ರಿ ನೇಹಾ (27) ಅವರ ಶವಗಳು ಪೂರ್ವದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಇಂದು ಬೇರೆಬೇರೆ ಕೊಠಡಿಗಳಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ತಮ್ಮ ನಿವಾಸದ ಮೇಲೆ ನಡೆದ ಸಿಬಿಐ ದಾಳಿಯಿಂದಾಗಿ ಅಪಮಾನಗೊಂಡು ತಾವು ಸಾವಿಗೆ ಶರಣಾಗಿರುವುದಾಗಿ ಅವರು ಪ್ರತ್ಯೇಕವಾಗಿ ಬರೆದಿರುವ ಡೆತ್‌ನೋಟ್‌ಗಳಲ್ಲಿ ತಿಳಿಸಿದ್ದಾರೆ.ಘಟನೆ ನಡೆದ ಸಂದರ್ಭದಲ್ಲಿ ಬನ್ಸಾಲ್ ಅವರ 25ರ ಹರೆಯದ ಪುತ್ರ ಮನೆಯಲ್ಲಿರಲಿಲ್ಲವೆನ್ನಲಾಗಿದೆ. ಅವರನ್ನು ಸಿಬಿಐ ವಿಚಾರಣೆಗಾಗಿ ಕರೆಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮಹಾನಿರ್ದೇಶಕರಾದ ಬಬಿ.ಕೆ. ನ್ಸಾಲ್, ಶನಿವಾರ ಫಾರ್ಮಾಸ್ಯೂಟಿಕಲ್ ಕಂಪೆನಿಯೊಂದರಿಂದ 9 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಅಧಿಕಾರಿಗಳ ತಂಡವೊಂದು ಅವರನ್ನು ಬಂಧಿಸಿತ್ತು. ಅಕ್ರಮ ಉದ್ಯಮ ವ್ಯವಹಾರಗಳಿಗೆ ಸಂಬಂಧಿಸಿ ತನ್ನ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಕೈಬಿಡಲು ಕಂಪೆನಿಯು ಅವರಿಗೆ ಲಂಚ ನೀಡಲು ಮುಂದಾಗಿತ್ತ್ತು ಎನ್ನಲಾಗಿದೆ.ಸೋಮವಾರದಂದು ಸಿಬಿಐ, ಬನ್ಸಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ, 60 ಲಕ್ಷ ರೂ. ನಗದು ಹಾಗೂ 20 ಆಸ್ತಿ ದಾಖಲೆಪತ್ರಗಳು ಹಾಗೂ 60 ಬ್ಯಾಂಕ್ ಖಾತೆ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿತ್ತು.ಬನ್ಸಾಲ್ ಅವರನ್ನು ನ್ಯಾಯಾಲಯವು ಮಂಗಳವಾರ ವಿಚಾರಣೆಗಾಗಿ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.