×
Ad

ಕಲ್ಕತ್ತಾ ಹೈಕೋರ್ಟ್‌ಗೆ ‘ಕೋಲ್ಕತಾ’ ಮರುನಾಮಕರಣಕ್ಕೆ ನ್ಯಾಯಮೂರ್ತಿಗಳ ವಿರೋಧ

Update: 2016-07-19 23:12 IST

ಕೋಲ್ಕತಾ, ಜು.19: ಕಲ್ಕತ್ತಾ ಹೈಕೋರ್ಟನ್ನು ಕೋಲ್ಕತಾ ಹೈಕೋರ್ಟ್ ಎಂದು ಹೆಸರಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಅಲ್ಲಿನ ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ.

ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್‌ಗಳಿಗೆ ಕ್ರಮವಾಗಿ ಕೋಲ್ಕತಾ, ಮುಂಬೈ ಹಾಗೂ ಚೆನ್ನೈ ಹೈಕೋರ್ಟ್ ಗಳೆಂದು ಮರು ನಾಮಕರಣ ಮಾಡಲಾಗುವುದೆಂದು ಜು.5ರಂದು ಸಂಪುಟ ಹೇಳಿತ್ತು. ಜು.11ರಂದು ಸಭೆ ಸೇರಿದ ನ್ಯಾಯಮೂರ್ತಿಗಳು ಮೂಲ ಹೆಸರಿಗೇ ಅಂಟಿಕೊಳ್ಳುವ ಒಮ್ಮತದ ನಿರ್ಧಾರ ಕೈಗೊಂಡು, ಅದನ್ನು ಕಾನೂನು ಸಚಿವಾಲಯಕ್ಕೆ ತಿಳಿಸಿದರು. ಹೆಚ್ಚಿನ ವಕೀಲರೂ ನ್ಯಾಯಮೂರ್ತಿಗಳ ಪರವಾಗಿದ್ದಾರೆ.
ಇದು ದೇಶದ ಮೊತ್ತ ಮೊದಲ ಹೈಕೋರ್ಟ್ ಆಗಿದೆ. ಅದಕ್ಕೆ ಭಾವನಾತ್ಮಕ ಸಂಬಂಧವಿದೆ. ಅಲ್ಲದೆ, ವಿಶ್ವಾದ್ಯಂತ ನೌಕೋದ್ಯಮ, ಬ್ಯಾಂಕಿಂಗ್ ಹಾಗೂ ಇತರ ವಾಣಿಜ್ಯ ವ್ಯವಹಾರಗಳಲ್ಲಿ ಅದು ಕಲ್ಕತ್ತಾ ಹೈಕೋರ್ಟ್ ಎಂದೇ ಖ್ಯಾತವಾಗಿದೆ. ಅದನ್ನು ಬದಲಾಯಿಸುವುದೆಂದರೆ ವಿಶ್ವಾದ್ಯಂತ ಕೋಲ್ಕತಾ ಎಂದೇ ಬದಲಾಯಿಸಬೇಕಾಗುತ್ತದೆ ಎಂದು ಕಲ್ಕತ್ತಾದ ಇನ್‌ಕಾರ್ಪೊರೇಟೆಡ್ ಲಾ ಸೊಸೈಟಿಯ ಅಧ್ಯಕ್ಷ ಆರ್.ಕೆ.ಖನ್ನಾ ಹೇಳಿದ್ದಾರೆ.
150 ವರ್ಷಗಳಿಂದ ಕಲ್ಕತ್ತಾ ಹೈಕೋರ್ಟ್ ಇದೆ. ಬಂಗಾಲಿ ಜನ ಅದನ್ನು ಕೋಲ್ಕತಾ ಹೈಕೋರ್ಟ್ ಎಂದೇ ಕರೆಯುತ್ತಿದ್ದಾರೆ. ಅದರಿಂದಾಗಿ ಹೈಕೋರ್ಟ್‌ನ ಹೊರಗಿರುವ ನಾಮಫಲಕದಲ್ಲಿ ಈ ವ್ಯತ್ಯಾಸ ಮುಂದುವರಿಯಲಿದೆ. ಬಂಗಾಲಿಯಲ್ಲಿ ಅದನ್ನು ಕೋಲ್ಕತಾ ಹೈಕೋರ್ಟ್ ಎಂದೇ ಬರೆಯಲಾಗುತ್ತಿದೆ. ಆದರೆ, ಇಂಗ್ಲಿಷ್‌ನಲ್ಲಿ ಕಲ್ಕತ್ತಾ ಎಂದು ಬರೆಯಲಾಗುತ್ತಿದೆ. ಇದೀಗ ವಿವಾದದ ವಸ್ತುವಾಗಿದೆ. ಕೇಂದ್ರ ಸರಕಾರ ಕೋಲ್ಕತಾ ಎಂದರೆ ಅಲ್ಲಿನ ನ್ಯಾಯಮೂರ್ತಿಗಳು ಕಲ್ಕತ್ತಾ ಎಂದೇ ಇರಲಿ ಎನ್ನುತ್ತಿದ್ದಾರೆ.

....................................

ಹಾರಾಟ ನಿಷೇಧ ವಲಯವಾಗಿ ತಿರುಪತಿ ಬೆಟ್ಟ: ಆಂಧ್ರದ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ
ಹೊಸದಿಲ್ಲಿ, ಜು.19: ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ಬೆಟ್ಟಗಳನ್ನು ವಿಮಾನ ಹಾರಾಟ ನಿಷೇಧಿತ ವಲಯವಾಗಿ ಘೋಷಿಸುವ ಸಾಧ್ಯತೆಯಿಲ್ಲವೆಂದು ನಾಗರಿಕ ವಾಯುಯಾನ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
 ಶ್ರೀವೆಂಕಟೇಶ್ವರ ದೇವಾಲಯವಿರುವ ತಿರುಪತಿ ಬೆಟ್ಟ ಪ್ರದೇಶವನ್ನು ಹಾರಾಟ ನಿಷೇಧ ವಲಯವಾಗಿ ಘೋಷಿಸಬೇಕೆಂದು ಕೋರಿ ಆಂಧ್ರಪ್ರದೇಶ ಸರಕಾರವು ಮನವಿ ಸಲ್ಲಿಸಿದೆಯೆಂದು ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಮಂಗಳವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
 ‘‘ಭೌಗೋಳಿಕ ಇತಿಮಿತಿಗಳಿಂದಾಗಿ ತಿರುಪತಿ ವಿಮಾನ ನಿಲ್ದಾಣದಲ್ಲಿ ಒಂದು ರನ್‌ವೇ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ತಿರುಮಲ ಬೆಟ್ಟ ಗಳನ್ನು ಹಾರಾಟ ನಿಷೇಧಿತ ವಲಯವಾಗಿ ಘೋಷಿಸಿದಲ್ಲಿ, ಈ ಪ್ರಮುಖ ವಿಮಾನ ನಿಲ್ದಾಣದ ಬಳಕೆಯು ಇನ್ನೂ ಕಡಿಮೆಯಾಗಲಿದೆ’’ ಎಂದು ಸಿನ್ಹಾ ಸದನಕ್ಕೆ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News