×
Ad

ವೇತನ ಹೆಚ್ಚಳಕ್ಕೆ ರಾಜ್ಯಸಭಾ ಸದಸ್ಯರ ಒತ್ತಾಯ

Update: 2016-07-19 23:22 IST

ಹೊಸದಿಲ್ಲಿ, ಜು.19: ಸಂಸದರ ವೇತನ ಮತ್ತು ಭತ್ತೆಗಳ ಕುರಿತು ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದೀಯ ಸಮಿತಿಯ ಶಿಫಾರಸುಗಳ ಶೀಘ್ರ ಜಾರಿಗಾಗಿ ರಾಜ್ಯಸಭೆಯಲ್ಲಿಂದು ಒತ್ತಾಯಿಸಲಾಗಿದೆ.

ವಿಷಯ ಪ್ರಸ್ತಾವಿಸಿದ ಎಸ್ಪಿ ಸಂಸದ ನರೇಶ್ ಅಗ್ರವಾಲ್, ಈ ಸಮಿತಿಯ ವರದಿಯನ್ನು ಪರಿಶೀಲಿಸಲು ಸಚಿವರ ಗುಂಪೊಂದನ್ನು ಪ್ರಧಾನಿ ರಚಿಸಿದ್ದಾರೆಂಬ ವರದಿಗಳಿವೆ ಎಂದರು.
ಸಮಿತಿ ರಚನೆಯ ಅಗತ್ಯವನ್ನು ಪ್ರಶ್ನಿಸಿದ ಅವರು, ಸರಕಾರಿ ನೌಕರರಿಗೆ 7ನೆ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ವೇಳೆಯೇ ಈ ವರದಿಯನ್ನು ಜಾರಿಗೊಳಿಸಲಾಗುವುದೆಂದು ಸರಕಾರ ಈ ಹಿಂದೆಯೇ ಹೇಳಿತ್ತು. ಸಂಸದರು ಸಂಪುಟ ಕಾರ್ಯದರ್ಶಿಗಿಂತ ಮೇಲಿನವರಾದ ಕಾರಣ ಅವರಿಗೆ, ಅತಿ ಹೆಚ್ಚು ಸಂಬಳವಿರುವ ಅಧಿಕಾರಿಗೆ ನೀಡುತ್ತಿರುವುದಕ್ಕಿಂತ ರೂ. 1 ಸಾವಿರ ಹೆಚ್ಚು ಕೊಡಬೇಕೆಂದು ಆಗ್ರಹಿಸಿದರು.
ಸಚಿವರ ಗುಂಪನ್ನು ರಚಿಸುವ ಅಗತ್ಯವಿಲ್ಲ. ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದು ಅಗ್ರವಾಲ್ ಒತ್ತಾಯಿಸಿದರು.
ಅವರ ಬೇಡಿಕೆಯನ್ನು ಹಲವು ಸದಸ್ಯರು ಬೆಂಬಲಿಸಿದಾಗ ಉಪಸಭಾಪತಿ ಪಿ.ಜೆ. ಕುರಿಯನ್, ಇದು ಎಲ್ಲ ಸದಸ್ಯರಿಗೆ ಒಪ್ಪಿಗೆಯೇ ಎಂಬುದು ತನಗೆ ಖಚಿತವಿಲ್ಲ ಎಂದರು.
ಸದಸ್ಯರು ವೇತನ ಹೆಚ್ಚಳ ಬೆಂಬಲಿಸಿ ಬೊಬ್ಬೆ ಹೊಡೆದಾಗ, ಅವರು ಅದನ್ನು ಪರಿಶೀಲಿಸುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆಯೆಂದು ಹೇಳಿದರು.
ಸದನದ ಮುಂದೆ ಸೂಕ್ತ ಮಸೂದೆಯೊಂದನ್ನು ಮಂಡಿಸಲು ಸರಕಾರಕ್ಕೆ ಪೀಠವು ನಿರ್ದೇಶನ ನೀಡಬೇಕೆಂದು ಸಿಪಿಎಂನ ಸೀತಾರಾಮ ಯೆಚೂರಿ ಆಗ್ರಹಿಸಿದರು.
ಸಂಸದರು ಸರಕಾರದ ಕರುಣೆಯಲ್ಲಿಲ್ಲವೆಂದು ಸಂವಿಧಾನದ 106ನೆ ಪರಿಚ್ಛೇದ ಹೇಳುತ್ತಿದೆ. ರಿಸರ್ವ್ ಬ್ಯಾಂಕ್‌ನ ಗವರ್ನರ್ ಹಣದುಬ್ಬರ ಇದೆ ಎಂದಿದ್ದರೂ ಸರಕಾರ ಅದನ್ನೇಕೆ ನೋಡುವುದಿಲ್ಲ? ಎಂದು ಅಗ್ರವಾಲ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News