ಬಡತನದಿಂದಾಗಿ ಕರುಳಕುಡಿಯನ್ನು 7,000ರೂ.ಗೆ ಮಾರಿದ ತಾಯಿ
ಧನ್‌ಬಾದ್, ಜುಲೈ 10: ಬಡತನದಿಂದಾಗಿ ತಾಯಿಯೊಬ್ಬರು ಎಳೆಯ ಹಸುಳೆಯನ್ನು 7,000ರೂಪಾಯಿಗೆ ಮಾರಿದ ಘಟನೆ ಧನ್‌ಬಾದ್‌ನಿಂದ ವರದಿಯಾಗಿದೆ. ದುಲಾಲಿ ದೇವಿ ಎಂಬ ನಲ್ವತ್ತು ವರ್ಷದ ಮಹಿಳೆ ಮಕ್ಕಳಿಲ್ಲದ ಶಾಹೀದಾ ಖಾತೂನ್ ಎಂಬ ಮಹಿಳೆ ಗೆ ತಾನು ಹೆತ್ತ ಅವಳಿ ಶಿಶುಗಳಲ್ಲಿ ಹೆಣ್ಣು ಮಗುವನ್ನು ಮಾರಿದ್ದಾಗಿ ತಿಳಿಸಿದ್ದಾಳೆ. ಧನ್‌ಬಾದ್ ಪಾಟಲಿಪುತ್ರ ಮೆಡಿಕಲ್ ಕಾಲೇಜ್‌ನಲ್ಲಿ ದುಲಾಲಿ ದೇವಿ ಒಂದು ಗಂಡು ಮತ್ತು ಹೆಣ್ಣುಶಿಶುವಿಗೆ ಜನ್ಮನೀಡಿದ್ದರೆಂದು ವರದಿ ತಿಳಿಸಿದೆ.
ದುಲಾಲಿ ದೇವಿಗೆ ಈ ಅವಳಿ ಮಕ್ಕಳಲ್ಲದೆ ಮೂವರು ಮಕ್ಕಳಿದ್ದಾರೆ. ತನಗೆ ಐವರು ಮಕ್ಕಳನ್ನು ಸಾಕುವ ಆರ್ಥಿಕ ಶಕ್ತಿಯಿಲ್ಲ, ಆದುದರಿಂದ ತನ್ನನ್ನು ಅವಳಿ ಶಿಶುಗಳಲ್ಲಿ ಒಂದನ್ನು ಮಾರಲು ನಿರ್ಧರಿಸಿದೆ ಎಂದು ದುಲಾಲಿ ದೇವಿ ಹೇಳಿದ್ದಾರೆ.ದುಲಾಲಿಯ ಪತಿ ಮಿಲ್ಲೊಂದರಲ್ಲಿ ನೌಕರನಾಗಿ ದುಡಿಯುತ್ತಿದ್ದು ದಂಪತಿ ತೀರಾ ಬಡತನದಿಂದ ಜೀವನ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಶಿಶುಮಾರಾಟದ ಘಟನೆಯ ಕುರಿತು ತನಿಖೆಯನ್ನು ಆಸ್ಪತ್ರೆ ಅಧಿಕಾರಿಗಳು ಕೈಗೆತ್ತಿಕೊಂಡಿದ್ದು ಇದರಲ್ಲಿ ಆಸ್ಪತ್ರೆಯ ಉದ್ಯೋಗಿಗಳು ನೆರವು ನೀಡಿದ್ದಾರೆಯೇ ಎಂದು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿ ತಿಳಿಸಿದೆ.