ಬಿಜೆಪಿಯೊಂದಿಗೆ ಮೈತ್ರಿಯಿಲ್ಲ: ಕೇರಳ ಕಾಂಗ್ರೆಸ್(ಎಂ)
ಕೋಟ್ಟಾಯಂ, ಜುಲೈ 20: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಪಕ್ಷ ಚಿಂತಿಸಿಲ್ಲ ಎಂದು ಕೇರಳ ಕಾಂಗ್ರೆಸ್ (ಎಂ)ಪ್ರಧಾನ ಕಾರ್ಯದರ್ಶಿ ಜೋಸೆಫ್ ಎಂ ಪುದುಶ್ಶೇರಿ ಹೇಳಿದ್ದಾರೆಂದು ವರದಿಯಾಗಿದೆ. ಈ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಕೇರಳ ಕಾಂಗ್ರೆಸ್ (ಎಂ)ನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿ ಹೇಳಿಕೆ ನೀಡಿದ್ದರು. "ರಾಜಶೇಖರನ್‌ರ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸುವೆ ಆದರೆ ನಾವುಈ ವಿಚಾರವನ್ನು ಯೋಚಿಸಿಲ್ಲ. ಕೇರಳ ಕಾಂಗ್ರೆಸ್ ಇಂತಹ ಪ್ರಶಂಸೆ ಹಾಗೂ ಆಮಿಶಕ್ಕೆ ಬಲಿಯಾಗುವ ಪಕ್ಷವಲ್ಲ. ವಸ್ತುನಿಷ್ಠ ಅವಲೋಕನ, ಜನರ ಹಿತವನ್ನು ಲೆಕ್ಕಕ್ಕೆತೆಗೆದೇ ಪಕ್ಷ ವರ್ತಿಸುತ್ತದೆ ಎಂದು ಜೋಸೆಫ್ ಎಂ ಪುದುಶ್ಶೇರಿ ಹೇಳಿದರೆಂದು ವರದಿ ತಿಳಿಸಿದೆ.
ಕೇರಳದ ಎಲ್ಲ ಮೈತ್ರಿಕೂಟಗಳ ನಾಯಕರು ಕೇರಳ ಕಾಂಗ್ರೆಸ್ (ಎಂ)ನ್ನು ತಮ್ಮ ಜೊತೆ ಸೇರುವಂತೆ ಆಹ್ವಾನಿಸಿದ್ದಾರೆ.ಕೆಲವು ಸಮಯದಿಂದ ಹಲವರು ಹಲವಾರು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಮೈತ್ರಿಗೆ ಕೇರಳ ಕಾಂಗ್ರೆಸ್ (ಎಂ) ಸೂಕ್ತ ಪಕ್ಷ ಎಂದು ಎಲ್ಲರೂಭಾವಿಸಿರುವುದು ನಮಗೆ ಹೆಮ್ಮೆ ಯ ವಿಚಾರವೆಂದು ಜೋಸೆಫ್ ಹೇಳಿಕೊಂಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಇಲ್ಲ ಎಂಬ ವಿಚಾರವನ್ನು ಕೋಟ್ಟಾಯಂನಲ್ಲಿ ಪಕ್ಷಾಧ್ಯಕ್ಷ ಕೆ.ಎಂ. ಮಾಣಿಯವರೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.