×
Ad

ವಿಂಡೀಸ್ ವಿರುದ್ಧ ಗೆಲುವಿನ ಓಟ ಮುಂದುವರಿಸುವತ್ತ ಭಾರತ ಚಿತ್ತ

Update: 2016-07-20 23:51 IST

ಆ್ಯಂಟಿಗುವಾ, ಜು.20: ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡ ಗುರುವಾರ ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಆಡಲಿವೆ. ಭಾರತ ಆತಿಥೇಯ ವಿಂಡೀಸ್ ವಿರುದ್ಧ 14 ವರ್ಷಗಳಿಂದ ಕಾಯ್ದುಕೊಂಡು ಬಂದಿರುವ ಅಜೇಯ ಗೆಲುವಿನ ಓಟವನ್ನು ಮುಂದುವರಿಸುವತ್ತ ಚಿತ್ತವಿರಿಸಿದೆ.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಂಡರ್-19 ಟ್ವೆಂಟಿ-20 ವಿಶ್ವಕಪ್ ಹಾಗೂ ಭಾರತದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್‌ಪಟ್ಟಕ್ಕೇರಿತ್ತು. ಆದರೆ, ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಂಡೀಸ್‌ನ ಪ್ರದರ್ಶನ ಆಶಾದಾಯಕವಾಗಿಲ್ಲ.

ವಿಂಡೀಸ್ 2015ರ ಅಂತ್ಯದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ಆಡಿರುವ ಎರಡೂ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಕೆರಿಬಿಯನ್ ಆಟಗಾರರು ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ 8ನೆ ಸ್ಥಾನದಲ್ಲಿದ್ದಾರೆ.

  ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ರಾಮ್ದಿನ್‌ರನ್ನು ತಂಡದಿಂದ ಕೈಬಿಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ವೆಸ್ಟ್‌ಇಂಡೀಸ್‌ನ ಆಯ್ಕೆಗಾರರು ಕಳೆದ ವರ್ಷ ಆಸ್ಟ್ರೇಲಿಯದ ವಿರುದ್ಧ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದ ಶೇನ್ ಡೌರಿಚ್‌ರನ್ನು ಆಯ್ಕೆ ಮಾಡಿದ್ದಾರೆ.

ವಿಂಡೀಸ್ ತಂಡದಲ್ಲಿ ಹಿರಿಯ ಬ್ಯಾಟ್ಸ್‌ಮನ್ ಮರ್ಲಾನ್ ಸ್ಯಾಮುಯೆಲ್ಸ್‌ರಿದ್ದಾರೆ. ಆದರೆ, ಅವರು ರನ್ ಬರ ಎದುರಿಸುತ್ತಿದ್ದಾರೆ. ಆರಂಭಿಕ ಆಟಗಾರ ಕ್ರೆಗ್ ಬ್ರಾತ್‌ವೇಟ್‌ಗೆ ಅಗ್ರ ಕ್ರಮಾಂಕದಲ್ಲಿ ಉತ್ತಮ ಆರಂಭ ಒದಗಿಸಬೇಕಾದ ಸವಾಲು ಎದುರಿಸುತ್ತಿದ್ದಾರೆ.

  ವೆಸ್ಟ್‌ಇಂಡೀಸ್‌ಗೆ ಬೌಲಿಂಗ್ ವಿಭಾಗ ದೊಡ್ಡ ತಲೆನೋವಾಗಿದೆ. ತಂಡದ ಇಬ್ಬರು ಮುಖ್ಯ ಬೌಲರ್‌ಗಳೆನಿಸಿಕೊಂಡಿರುವ ವೇಗಿ ಶಾನೊನ್ ಗಾಬ್ರಿಯೆಲ್ ಹಾಗೂ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದರು. ವೇಗದ ಬೌಲರ್ ಮಿಗುಯೆಲ್ ಕುಮಿನ್ಸ್ ಇತ್ತೀಚೆಗೆ ನಿವೃತ್ತಿರಾಗಿರುವ ಜೆರೋಮ್ ಟೇಲರ್ ಬದಲಿಗೆ ಟೆಸ್ಟ್‌ಗೆ ಕಾಲಿಡಲಿದ್ದಾರೆ. ನಾಯಕ ಜೇಸನ್ ಹೋಲ್ಡರ್ ಹಾಗೂ ಆಲ್‌ರೌಂಡರ್ ಕಾರ್ಲೊಸ್ ಬ್ರಾತ್‌ವೈಟ್ ಮಧ್ಯಮ ವೇಗದಲ್ಲಿ ದೀರ್ಘ ಸ್ಪೆಲ್ ಎಸೆಯುವ ಸಾಧ್ಯತೆಯಿದೆ.

ಭಾರತ 2011ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಅದರದೇ ನೆಲದಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಆಡಿತ್ತು. ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಭಾರತಕ್ಕೆ ಗೆಲುವಿಗೆ 15 ಓವರ್‌ಗಳಲ್ಲಿ 86 ರನ್ ಅಗತ್ಯವಿದ್ದಾಗ ನಾಯಕ ಧೋನಿ ಹಾಗೂ ಎದುರಾಳಿ ತಂಡದ ನಾಯಕ ಡರೆನ್ ಸಮ್ಮಿ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದ್ದರು.

ಭಾರತ 1-0 ಅಂತರದಿಂದ ಸರಣಿ ಜಯಿಸಿದ್ದರೂ ಧೋನಿಯ ಈ ನಿರ್ಧಾರಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಭಾರತದ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆ ಎದ್ದಿತ್ತು. ಈ ಪಂದ್ಯದ ನಂತರ ಭಾರತ ಆಡಿದ್ದ 13 ಟೆಸ್ಟ್ ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಗೆದ್ದುಕೊಂಡಿರಲಿಲ್ಲ. ಧೋನಿ ಪಡೆ 10 ಪಂದ್ಯಗಳಲ್ಲಿ ಸೋತಿತ್ತು.

2011ರ ಬಳಿಕ ಭಾರತ ತಂಡದಲ್ಲಿ ಸಾಕಷ್ಟು ಬದಲಾಗಿದೆ. ಧೋನಿ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಆಕ್ರಮಣಕಾರಿ ವ್ಯಕ್ತಿತ್ವದ ವಿರಾಟ್ ಕೊಹ್ಲಿ ತಂಡದ ನಾಯಕನಾಗಿದ್ದಾರೆ. ಭಾರತ ಐಸಿಸಿ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನದಲ್ಲಿದೆ. ಆ್ಯಂಟಿಗುವಾ ಟೆಸ್ಟ್‌ನಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗಿ ಮೊದಲ ಇನಿಂಗ್ಸ್ ಆರಂಭಿಸಲಿದ್ದಾರೆ. ಮುಂಬರುವ ಬಿಡುವಿಲ್ಲದ ಟೆಸ್ಟ್ ಸರಣಿಗೆ ಕೊಹ್ಲಿ ನೇತೃತ್ವದ ಯುವ ತಂಡಕ್ಕೆ ವಿಂಡೀಸ್ ವಿರುದ್ಧದ ಸರಣಿ ಅಡಿಗಲ್ಲಾಗಿದೆ.

ಟೀಮ್ ನ್ಯೂಸ್:ಭಾರತದ ಮೊದಲ ಆಯ್ಕೆಯ ಇಬ್ಬರು ಆರಂಭಿಕ ಆಟಗಾರರು ಎರಡೂ ಅಭ್ಯಾಸ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದಾರೆ. 20 ವಿಕೆಟ್ ಉರುಳಿಸುವ ಉದ್ದೇಶದಿಂದ ಕೊಹ್ಲಿ ಮೂವರು ಸ್ಪಿನ್ನರ್, ಇಬ್ಬರು ವೇಗಿಗಳನ್ನೊಳಗೊಂಡ ಐವರು ಬೌಲರ್‌ಗಳನ್ನು ಕಣಕ್ಕಿಳಿಸಬಹುದು. ಮುಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮ ತಂಡಕ್ಕೆ ಮರಳಬಹುದು.

ಅಗ್ರ ಕ್ರಮಾಂಕದಲ್ಲಿ ಶಿಖರ್ ಧವನ್ ಬದಲಿಗೆ ಕೆಎಲ್ ರಾಹುಲ್‌ರನ್ನು ಕಣಕ್ಕಿಳಿಸಲು ಕೊಹ್ಲಿ ಒಲವು ಹೊಂದಿದ್ದಾರೆ. ಚೇತೇಶ್ವರ ಪೂಜಾರ 3ನೆ ಕ್ರಮಾಂಕದಲ್ಲಿ ಆಡಲಿದ್ದಾರೆ. ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದು, ಎರಡು ಅಭ್ಯಾಸ ಪಂದ್ಯಗಳಲ್ಲೂ ಅರ್ಧಶತಕ ಬಾರಿಸಿದ್ದಾರೆ. ಪೂಜಾರ ಕಳೆದ 10 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಕೇವಲ 2 ಬಾರಿ ಅರ್ಧಶತಕ ಬಾರಿಸಿದ್ದರು.

ತಂಡಗಳು: ಭಾರತ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ದಿಮಾನ್ ಸಹಾ, ಆರ್.ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮುಹಮ್ಮದ್ ಶಮಿ, ಶಾರ್ದೂಲ್ ಥಾಕೂರ್, ಉಮೇಶ್ ಯಾದವ್, ಇಶಾಂತ್ ಶರ್ಮ.

ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್(ನಾಯಕ), ಕ್ರೆಗ್ ಬ್ರಾತ್‌ವೇಟ್, ರಾಜೇಂದ್ರ ಚಂದ್ರಿಕಾ, ಡರೆನ್ ಬ್ರಾವೊ, ಮರ್ಲಾನ್ ಸ್ಯಾಮುಯೆಲ್ಸ್, ಜೆರ್ಮೈನ್ ಬ್ಲಾಕ್‌ವುಡ್, ರಾಸ್ಟನ್ ಚೇಸ್, ಲಿಯೊನ್ ಜಾನ್ಸನ್, ಶೇನ್ ಡೊರಿಚ್, ದೇವೇಂದ್ರ ಬಿಶೂ, ಕಾರ್ಲಸ್ ಬ್ರಾತ್‌ವೇಟ್, ಶಾನೊನ್ ಗ್ಯಾಬ್ರಿಯಲ್, ಮಿಗುಯೆಲ್ ಕುಮಿನ್ಸ್.

ಪಂದ್ಯದ ಸಮಯ: ರಾತ್ರಿ 7:30

ಅಂಕಿ-ಅಂಶ

15: ವೆಸ್ಟ್‌ಇಂಡೀಸ್ ತಂಡ ಭಾರತ ವಿರುದ್ಧ ಆಡಿರುವ ಕಳೆದ ಸತತ 15 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಲು ವಿಫಲವಾಗಿದೆ. 2002ರ ಅಕ್ಟೋಬರ್ ಬಳಿಕ ವಿಂಡೀಸ್‌ಗೆ ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ. ಭಾರತ 15 ಪಂದ್ಯಗಳಲ್ಲಿ 8ರಲ್ಲಿ ಜಯ, ಏಳರಲ್ಲಿ ಡ್ರಾ ಸಾಧಿಸಿದೆ.

0: 2015ರ ಬಳಿಕ 21 ಟೆಸ್ಟ್ ಇನಿಂಗ್ಸ್‌ಗಳಲ್ಲಿ ವಿಂಡೀಸ್‌ಗೆ ಮೊದಲ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಲು ಸಾಧ್ಯವಾಗಿಲ್ಲ.

56.58: ಆರ್.ಅಶ್ವಿನ್ ಏಷ್ಯಾದಿಂದ ಹೊರಗೆ ಆಡಿರುವ 9 ಟೆಸ್ಟ್‌ಗಳಲ್ಲಿ 56.58 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. 22: ಭಾರತ 2011ರಲ್ಲಿ ವೆಸ್ಟ್‌ಇಂಡೀಸ್‌ಗೆ ಪ್ರವಾಸಕೈಗೊಂಡಿದ್ದಾಗ ಇಶಾಂತ್ ಶರ್ಮ ಒಟ್ಟು 22 ವಿಕೆಟ್‌ಗಳನ್ನು ಉರುಳಿಸಿದ್ದರು. ಆ ಸರಣಿಯಲ್ಲಿ ಚೊಚ್ಚಲ 10 ವಿಕೆಟ್ ಗೊಂಚಲು ಪಡೆದಿದ್ದರು.

4: ವೆಸ್ಟ್‌ಇಂಡೀಸ್ ತಂಡ ತವರು ನೆಲದಲ್ಲಿ ಅಗ್ರ-8 ತಂಡಗಳ ವಿರುದ್ಧ ಆಡಿರುವ ಕಳೆದ 10 ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿದೆ. ನ್ಯೂಝಿಲೆಂಡ್ ವಿರುದ್ಧ ಮೂರು ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News